Chanakya Niti: ಎಷ್ಟೇ ಸಂಪಾದಿಸಿದ್ರೂ ಹಣ ಕೈಯಲ್ಲಿ ನಿಲ್ಲುತ್ತಿಲ್ವಾ? ಈ 4 ಅಭ್ಯಾಸಗಳನ್ನು ಇಂದೇ ಬದಲಿಸಿ!
ಎಷ್ಟೇ ಸಂಪಾದಿಸಿದ್ರೂ ಕೈಯಲ್ಲಿ ಹಣ ನಿಲ್ತಾ ಇಲ್ವಾ? ನಮಗೇ ಗೊತ್ತಿಲ್ಲದೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಚಾಣಕ್ಯನ ಪ್ರಕಾರ, ಕೆಲವು ಅಭ್ಯಾಸಗಳಿರುವವರ ಬಳಿ ಹಣ ಹೆಚ್ಚು ಕಾಲ ಉಳಿಯುವುದಿಲ್ಲವಂತೆ. ಅವು ಯಾವುವು ಅಂತ ನೋಡೋಣ.

ಯಾವ ಅಭ್ಯಾಸಗಳಿದ್ದರೆ ಹಣ ಕೈಯಲ್ಲಿ ನಿಲ್ಲುವುದಿಲ್ಲ?
ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಸಂಪಾದಿಸಿದ ಹಣವನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಕೆಲವರು ಎಷ್ಟೇ ದುಡಿದರೂ ತಿಂಗಳ ಕೊನೆಗೆ ಕೈಯಲ್ಲಿ ಒಂದು ರೂಪಾಯಿಯೂ ಉಳಿಯುವುದಿಲ್ಲ. ಇನ್ನು ಕೆಲವರು ಕಡಿಮೆ ಆದಾಯದಲ್ಲೇ ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಯಾವ ಅಭ್ಯಾಸಗಳಿರುವವರ ಬಳಿ ಹಣ ನಿಲ್ಲುವುದಿಲ್ಲ ಎಂದು ಇಲ್ಲಿ ತಿಳಿದುಕೊಳ್ಳೋಣ.
ದುಂದುವೆಚ್ಚ ಮಾಡುವ ಅಭ್ಯಾಸ
ಚಾಣಕ್ಯ ನೀತಿಯ ಪ್ರಕಾರ, ಹಣದ ಮೌಲ್ಯ ತಿಳಿಯದೆ ಮನಬಂದಂತೆ ಖರ್ಚು ಮಾಡುವುದು ಸಂಪತ್ತನ್ನು ನಿಧಾನವಾಗಿ ಕರಗಿಸುತ್ತದೆ. ಅಗತ್ಯ ಇರಲಿ, ಇಲ್ಲದಿರಲಿ, ಕಂಡಿದ್ದೆಲ್ಲಾ ಕೊಳ್ಳುವುದು, ಬೇರೆಯವರನ್ನು ನೋಡಿ ನಾವೂ ಅದೇ ರೀತಿ ಖರ್ಚು ಮಾಡಬೇಕೆಂದುಕೊಳ್ಳುವುದು, ಸಣ್ಣಪುಟ್ಟ ಖರ್ಚುಗಳನ್ನು ಲೆಕ್ಕಕ್ಕೇ ಇಡದಿರುವುದು, ಇವೆಲ್ಲವೂ ಕೊನೆಗೆ ದೊಡ್ಡ ಮೊತ್ತವಾಗಿ ಪರಿಣಮಿಸುತ್ತವೆ. ಮುಖ್ಯವಾಗಿ, ಆದಾಯ ಹೆಚ್ಚಾದಾಗಲೆಲ್ಲಾ ಜೀವನಶೈಲಿಯನ್ನೂ ಅದೇ ಮಟ್ಟಕ್ಕೆ ಏರಿಸಿಕೊಳ್ಳುವುದರಿಂದ ಉಳಿತಾಯಕ್ಕೆ ಅವಕಾಶವೇ ಇರುವುದಿಲ್ಲ.
ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು
ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಲು ಕ್ರೆಡಿಟ್ ಕಾರ್ಡ್, ಪರ್ಸನಲ್ ಲೋನ್ ಅಥವಾ ಇತರ ಸಾಲಗಳನ್ನು ಪದೇ ಪದೇ ಬಳಸುವುದರಿಂದ, ಭವಿಷ್ಯದ ಆದಾಯದ ಒಂದು ಭಾಗವು ಮೊದಲೇ ಖರ್ಚಾಗಿ ಹೋಗುತ್ತದೆ. ಸಾಲ ಮಾಡುವುದು ತಪ್ಪಲ್ಲ. ಮನೆ, ಶಿಕ್ಷಣ, ವ್ಯಾಪಾರದಂತಹ ಅಗತ್ಯಗಳಿಗೆ ತೆಗೆದುಕೊಳ್ಳುವ ಸರಿಯಾದ ಸಾಲವು ಆರ್ಥಿಕವಾಗಿ ಸಹಾಯ ಮಾಡಬಹುದು. ಆದರೆ, ಕೇವಲ ಐಷಾರಾಮಿ ಜೀವನಕ್ಕಾಗಿ ಸಾಲ ಮಾಡಿ, ಅದನ್ನು ಮರುಪಾವತಿಸುವ ಸಾಮರ್ಥ್ಯವನ್ನು ನಿರ್ಲಕ್ಷಿಸಿದರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ಅದಕ್ಕಾಗಿಯೇ, ಸಾಲ ತೆಗೆದುಕೊಳ್ಳುವ ಮೊದಲು ಅದರ ಅವಶ್ಯಕತೆ, ಬಡ್ಡಿ ಮತ್ತು ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ.
ಇತರರನ್ನು ನೋಡಿ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು
ಪಕ್ಕದ ಮನೆಯವರು ಕಾರು ತಂದರು, ಸ್ನೇಹಿತರು ದುಬಾರಿ ಫೋನ್ ಕೊಂಡರು, ಸಂಬಂಧಿಕರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಹಾಗಾಗಿ ನಾವೂ ಹಾಗೆಯೇ ಬದುಕಬೇಕು ಎಂದುಕೊಳ್ಳುವುದು ಆರ್ಥಿಕ ಒತ್ತಡಕ್ಕೆ ಕಾರಣವಾಗಬಹುದು. ಚಾಣಕ್ಯನು, ಇತರರ ಜೀವನಶೈಲಿಯನ್ನು ಅನುಕರಿಸುವ ಬದಲು ನಮ್ಮ ಸಾಮರ್ಥ್ಯ ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬೋಧಿಸಿದ್ದಾನೆ. ನಮ್ಮ ಆದಾಯ ಎಷ್ಟು? ನಮ್ಮ ಜವಾಬ್ದಾರಿಗಳೇನು? ಭವಿಷ್ಯದಲ್ಲಿ ಯಾವ ಅಗತ್ಯಗಳು ಬರಬಹುದು? ಈ ವಿಷಯಗಳನ್ನು ಯೋಚಿಸದೆ ಕೇವಲ ಇತರರನ್ನು ಅನುಸರಿಸಿದರೆ ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲುವುದಿಲ್ಲ.
ಉಳಿತಾಯದ ಬಗ್ಗೆ ಗಮನ ಹರಿಸದಿರುವುದು
“ಈ ತಿಂಗಳ ಖರ್ಚೆಲ್ಲಾ ಆದ ಮೇಲೆ ಉಳಿದ ಹಣವನ್ನು ಸೇವ್ ಮಾಡುತ್ತೇನೆ” ಎಂದು ಯೋಚಿಸುವುದು ಹಲವರಲ್ಲಿರುವ ಸಾಮಾನ್ಯ ಅಭ್ಯಾಸ. ಆದರೆ ಹೀಗೆ ಮಾಡಿದರೆ, ಹೆಚ್ಚಿನ ಸಂದರ್ಭಗಳಲ್ಲಿ ತಿಂಗಳ ಕೊನೆಗೆ ಉಳಿತಾಯ ಮಾಡಲು ಏನೂ ಉಳಿದಿರುವುದಿಲ್ಲ. ಚಾಣಕ್ಯ ನೀತಿಯ ಪ್ರಕಾರ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಂಪತ್ತನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಆದಾಯ ಬಂದ ತಕ್ಷಣ ಒಂದು ನಿಗದಿತ ಮೊತ್ತವನ್ನು ಉಳಿತಾಯಕ್ಕೆ ತೆಗೆದಿಟ್ಟು, ಉಳಿದ ಹಣದಲ್ಲಿ ತಿಂಗಳ ಖರ್ಚುಗಳನ್ನು ನಿಭಾಯಿಸುವುದು ಒಳ್ಳೆಯ ಅಭ್ಯಾಸ.
ಚಾಣಕ್ಯ ನೀತಿ
ಒಟ್ಟಿನಲ್ಲಿ ಮೇಲ್ಕಂಡ ಎಲ್ಲಾ ನಾಲ್ಕು ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೇ ಖಂಡಿತವಾಗಿಯೂ ಒಳ್ಳೆಯ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಬಹುದು. ನೀವೇನಂತೀರಾ?

