ತೂಕ ಇಳಿಸೋಕೆ ರಾತ್ರಿ ಊಟ ಬಿಟ್ಟು ಮಲಗಿದ್ರೆ ಏನಾಗುತ್ತೆ ಗೊತ್ತಾ? ತಜ್ಞರು ಹೇಳೋದೇನು?
ತೂಕ ಇಳಿಸೋಕೆ ಅಂತಾ ತುಂಬಾ ಜನ ರಾತ್ರಿ ಊಟಾನೇ ಮಾಡಲ್ಲ. ಖಾಲಿ ಹೊಟ್ಟೆಯಲ್ಲೇ ಮಲಗಿಬಿಡ್ತಾರೆ. ಆದ್ರೆ ಹೀಗೆ ಮಾಡೋದು ನಿಜವಾಗ್ಲೂ ಆರೋಗ್ಯಕ್ಕೆ ಒಳ್ಳೇದಾ? ಅಥವಾ ಇದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಾ? ಬನ್ನಿ, ಊಟ ಮಾಡದೆ ಮಲಗಿದ್ರೆ ದೇಹದಲ್ಲಿ ಏನಾಗುತ್ತೆ ಅಂತ ನೋಡೋಣ.

ಖಾಲಿ ಹೊಟ್ಟೆಯಲ್ಲಿ ಮಲಗುವುದರ ಪರಿಣಾಮಗಳು
ದಿನನಿತ್ಯದ ಜೀವನದಲ್ಲಿ ರಾತ್ರಿ ಊಟದ ಸಮಯ ಮತ್ತು ಪ್ರಮಾಣ ಬಹಳ ಮುಖ್ಯ. ತೂಕ ಇಳಿಸೋಕೆ ಅಥವಾ ಸಮಯ ಇಲ್ಲ ಅಂತಾ ಹಲವರು ರಾತ್ರಿ ಏನೂ ತಿನ್ನದೆ ಮಲಗುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಮಲಗುವುದು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದು ಹೇಗೆ ಅಂತ ಇಲ್ಲಿ ನೋಡೋಣ.
ರಾತ್ರಿ ಊಟ ಬಿಡುವುದರ ಬಗ್ಗೆ ತಜ್ಞರು ಹೇಳೋದೇನು?
ತಜ್ಞರ ಪ್ರಕಾರ, ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಟ್ಟು ಮಲಗಿದರೆ ಕೆಲವರಲ್ಲಿ ತೂಕ ಇಳಿಯಬಹುದು. ಆದರೆ, ಹೆಚ್ಚಿನವರಲ್ಲಿ ಇದು ಕೆಟ್ಟ ಪರಿಣಾಮ ಬೀರಬಹುದು. ದೇಹವು ಶಕ್ತಿಗಾಗಿ ಸಂಗ್ರಹವಾದ ಕೊಬ್ಬನ್ನು ಬಳಸುವುದರಿಂದ ತೂಕ ಸ್ವಲ್ಪ ಇಳಿದರೂ, ದೀರ್ಘಕಾಲದಲ್ಲಿ ಚಯಾಪಚಯ ಕ್ರಿಯೆಯಲ್ಲಿ (metabolism) ಅಸಮತೋಲನ ಉಂಟಾಗಬಹುದು.
ಮಧುಮೇಹಿಗಳು ರಾತ್ರಿ ಊಟ ಬಿಡುವುದು ಅಪಾಯಕಾರಿ
ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದರೆ ಗ್ಯಾಸ್ಟ್ರಿಕ್, ಅಸಿಡಿಟಿ ಅಥವಾ ಹೊಟ್ಟೆ ಉರಿಯಂತಹ ಸಮಸ್ಯೆಗಳು ಹೆಚ್ಚಾಗಬಹುದು. ಇದರಿಂದಾಗಿ ಬೆಳಿಗ್ಗೆ ಎದ್ದಾಗ ಅಸ್ವಸ್ಥತೆ, ತಲೆನೋವು ಅಥವಾ ಆಯಾಸ ಎನಿಸಬಹುದು. ಮಧುಮೇಹಿಗಳು ರಾತ್ರಿ ಊಟ ಬಿಡುವುದು ಅಪಾಯಕಾರಿ. ಯಾಕಂದ್ರೆ, ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿಯುವ ಅಪಾಯವಿರುತ್ತದೆ.
ಖಾಲಿ ಹೊಟ್ಟೆಯಲ್ಲಿ ಮಲುಗುವುದರ ಸೈಡ್ ಎಫೆಕ್ಟ್ಸ್
ಖಾಲಿ ಹೊಟ್ಟೆಯಲ್ಲಿ ಮಲಗಿದಾಗ, ಕೆಲವರಿಗೆ ಹಸಿವಿನಿಂದ ಸರಿಯಾಗಿ ನಿದ್ದೆ ಬರುವುದಿಲ್ಲ. ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುವುದು, ಅಸ್ವಸ್ಥತೆ ಕಾಡುವುದು ಸಾಮಾನ್ಯ. ಆರೋಗ್ಯ ತಜ್ಞರ ಪ್ರಕಾರ, ಹಗುರವಾದ ರಾತ್ರಿ ಊಟವು ನಿದ್ದೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇಂಟರ್‌ಮಿಟೆಂಟ್ ಫಾಸ್ಟಿಂಗ್
ಆದರೆ, ಎಲ್ಲಾ ಸಂದರ್ಭಗಳಲ್ಲೂ ಖಾಲಿ ಹೊಟ್ಟೆಯಲ್ಲಿ ಮಲಗುವುದು ಕೆಟ್ಟದ್ದು ಎನ್ನಲಾಗದು. ಇಂಟರ್‌ಮಿಟೆಂಟ್ ಫಾಸ್ಟಿಂಗ್ ಪಾಲಿಸುವವರು ರಾತ್ರಿ ಊಟ ಬಿಟ್ಟು ಬೆಳಿಗ್ಗೆ ಉಪಹಾರ ಸೇವಿಸುತ್ತಾರೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಆದರೆ ಇದು ಎಲ್ಲರಿಗೂ ಸರಿಹೊಂದುವುದಿಲ್ಲ. ವೈಯಕ್ತಿಕ ಆರೋಗ್ಯ ಸ್ಥಿತಿ ನೋಡಿಕೊಂಡು ಇದನ್ನು ಪಾಲಿಸಬೇಕು.
ಜೀರ್ಣವಾಗುವಂತ ಆಹಾರ ತಿನ್ನುವುದು ಬೆಸ್ಟ್
ತಜ್ಞರ ಪ್ರಕಾರ, ರಾತ್ರಿ ಪೂರ್ತಿ ಖಾಲಿ ಹೊಟ್ಟೆಯಲ್ಲಿ ಮಲಗುವುದಕ್ಕಿಂತ, ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಉತ್ತಮ. ಸೂಪ್, ಹಣ್ಣುಗಳು, ಓಟ್ಸ್ ಅಥವಾ ಹಗುರವಾದ ರೊಟ್ಟಿಯಂತಹ ಆಹಾರ ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. ಜೀರ್ಣಾಂಗ ವ್ಯವಸ್ಥೆಯ ಮೇಲೂ ಹೆಚ್ಚು ಹೊರೆ ಬೀಳುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
