ಕಳೆದೊಂದು ವಾರದಿಂದ ಆಹಾರ ಇಲಾಖೆ ಸರ್ವರ್‌ಡೌನ್‌ ಸಮಸ್ಯೆ ಪಡಿತರ ವಿತರಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಮೇ ತಿಂಗಳು ಮುಗಿಯುತ್ತಾ ಬಂದಿದ್ದರೂ ಶೇ.40ರಷ್ಟು ಫಲಾನುಭವಿಗಳಿಗೆ ಆಹಾರ ಧಾನ್ಯ ಹಂಚಿಕೆ ಮಾಡಲು ಪರದಾಡುವಂತಾಗಿದೆ. ಸಮಸ್ಯೆ ಇತ್ಯರ್ಥಪಡಿಸುವಂತೆ ಪಡಿತರ ವಿತರಕರು ಆಗ್ರಹಿಸಿದ್ದಾರೆ.

ಸಮಸ್ಯೆ ಇತ್ಯರ್ಥಕ್ಕೆ ಪಡಿತರ ವಿತರಕರ ಆಗ್ರಹ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು (ಮೇ.29): ಕಳೆದೊಂದು ವಾರದಿಂದ ಆಹಾರ ಇಲಾಖೆ ಸರ್ವರ್‌ಡೌನ್‌ ಸಮಸ್ಯೆ ಪಡಿತರ ವಿತರಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಮೇ ತಿಂಗಳು ಮುಗಿಯುತ್ತಾ ಬಂದಿದ್ದರೂ ಶೇ.40ರಷ್ಟು ಫಲಾನುಭವಿಗಳಿಗೆ ಆಹಾರ ಧಾನ್ಯ ಹಂಚಿಕೆ ಮಾಡಲು ಪರದಾಡುವಂತಾಗಿದೆ.

ಈವರೆಗೂ ಕೇವಲ ಶೇ.60ರಷ್ಟು ಮಂದಿಗೆ ಮಾತ್ರ ಪಡಿತರ ಹಂಚಿಕೆ ಮಾಡಲಾಗಿದೆ. ಕಳೆದೊಂದು ವಾರದಿಂದ ಗಂಟೆಗೆ ಇಬ್ಬರಿಗೆ ಆಹಾರ ಧಾನ್ಯ ವಿತರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸೋಮವಾರದಿಂದ ಈ ಸಮಸ್ಯೆ ಉಲ್ಬಣಿಸಿದ್ದು, ಫಲಾನುಭವಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದು ಪಡಿತರ ವಿತರಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರೆ, ತಾಸುಗಟ್ಟಲೆ ಕಾದು ನಿಂತ ಫಲಾನುಭವಿಗಳನ್ನು ಕೆರಳಿಸಿದೆ.

ಬಹುತೇಕ ಜಿಲ್ಲೆಗಳಲ್ಲಿ ಡೌನ್‌:

ಬೆಂಗಳೂರು ನಗರ ಮಾತ್ರವಲ್ಲ, ಹಾಸನ, ಮಂಡ್ಯ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಉತ್ತರ ಕನ್ನಡ, ಮಂಗಳೂರು, ತುಮಕೂರು, ಯಾದಗಿರಿ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಸರ್ವರ್‌ ಡೌನ್‌ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ನಿಗದಿತ ಅವಧಿಯೊಳಗೆ (ಮೇ 31ರೊಳಗೆ) ಆಹಾರ ಧಾನ್ಯ ವಿತರಣೆ ಕಷ್ಟವಾಗಲಿದೆ ಎಂದು ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಹೇಳಿದ್ದಾರೆ.

ಸರ್ವರ್ ಸರಿಯಾಗಿದ್ದರೆ 5 ನಿಮಿಷಕ್ಕೊಬ್ಬರಿಗೆ ಪಡಿತರ ವಿತರಿಸಬಹುದು. ಆದರೆ, ಈಗ ಸರ್ವರ್‌ ಸಮಸ್ಯೆಯಿಂದ ದಿನಕ್ಕೆ 20ಮಂದಿಗೂ ಪಡಿತರ ಕೊಡಲು ಸಾಧ್ಯವಾಗುತ್ತಿಲ್ಲ. ಕೆಲವು ಸಂದರ್ಭದಲ್ಲಿ ಜನರು ಕಾದು, ಕಾದು ಸಾಕಾಗಿ ಮನೆಗೆ ಹೋಗುತ್ತಿದ್ದಾರೆ. ಸರ್ಕಾರ ಕೂಡಲೇ ಸರ್ವರ್‌ ಸಮಸ್ಯೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯಬೆಲೆ ಅಂಗಡಿ ಮಾಲೀಕ ದೇವರಾಜ್ ಆಗ್ರಹಿಸಿದರು.

ನಿವಾರಣೆಯಾಗದ ಸಮಸ್ಯೆ: 

ಆಹಾರ ಇಲಾಖೆಯ ತಂತ್ರಾಂಶವನ್ನು ಈ ಹಿಂದೆ ಸುಮಾರು 30 ಇಲಾಖೆಗಳು ಬಳಸಿಕೊಳ್ಳುತ್ತಿದ್ದವು. ಇದರಿಂದ ಸರ್ವರ್ ಡೌನ್ ಸಮಸ್ಯೆಯಿಂದ ಪಡಿತರ ಆಹಾರ ಧಾನ್ಯ ಹಂಚಿಕೆಗೆ ತೊಡಕು ಉಂಟಾಗುತ್ತಿತ್ತು. ಈಗ ನೂತನ ತಂತ್ರಾಂಶ ಅಳವಡಿಸಿಕೊಂಡರೂ ಸರ್ವರ್‌ ಸಮಸ್ಯೆ ಇತ್ಯರ್ಥವಾಗದೇ ಇನ್ನಷ್ಟು ಬಿಗಡಾಯಿಸಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಆಹಾರ ಇಲಾಖೆ ಕಂಡುಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಗ್ರಹಿಸಿದೆ.

4.43 ಕೋಟಿ ಫಲಾನುಭವಿಗಳು

ರಾಜ್ಯದಲ್ಲಿ ಒಟ್ಟು ಸುಮಾರು 1.20 ಕೋಟಿ ಪಡಿತರ ಚೀಟಿಗಳಿದ್ದು, 4.43 ಕೋಟಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿ ಫಲಾನುಭವಿ ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ ಯೋಜನೆಯಡಿ 5 ಕೆಜಿ ಅಕ್ಕಿ ಮತ್ತು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ನೀಡುವ ತಲಾ 5 ಕೆಜಿ ಅಕ್ಕಿಯಂತೆ ಒಟ್ಟು 10 ಕೆಜಿ ಅಕ್ಕಿಯನ್ನು ಪಡೆಯುತ್ತಾರೆ. ಹಾಗಾಗಿ ಸಿಸಿಎಸ್‌, ವಿಎಸ್‌ಎಸ್‌ಎನ್‌, ನ್ಯಾಯಬೆಲೆ ಅಂಗಡಿ ಸೇರಿದಂತೆ ಒಟ್ಟು 20,500 ಪಡಿತರ ವಿತರಣಾ ಕೇಂದ್ರಗಳಲ್ಲಿ ಆಹಾರ ಧಾನ್ಯ ವಿತರಣೆಯಾಗುತ್ತಿದೆ.

ಗುರುವಾರ ಮಧ್ಯಾಹ್ನ 2.15ರ ಸುಮಾರಿಗೆ ಸರ್ವರ್‌ ಸಮಸ್ಯೆ ಸ್ವಲ್ಪ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಹೇಗಿರುತ್ತದೋ ಗೊತ್ತಿಲ್ಲ. ಇನ್ನೆರಡು ದಿನಗಳಲ್ಲಿ ಶೇ.40ರಷ್ಟು ಜನರಿಗೆ ಪಡಿತರ ಹಂಚಿಕೆ ಹೇಗೆ ಮಾಡಲು ಸಾಧ್ಯ. ಮೊದಲಿನಂತೆ ಸರ್ಕಾರ ತಿಂಗಳ ಮೊದಲ ವಾರದಲ್ಲೇ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಿದರೆ, ಒಳ್ಳೆಯದು.

ಕೃಷ್ಣಪ್ಪ, ಅಧ್ಯಕ್ಷ, ಸರ್ಕಾರಿ ಪಡಿತರ ವಿತರಕರ ಸಂಘ