90 ವರ್ಷದ ರಹಸ್ಯ: ಸ್ಕೂಲ್ ಬಸ್‌ಗಳು ಯಾಕೆ ಹಳದಿ ಬಣ್ಣದಲ್ಲಿರುತ್ತವೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ!
ಸ್ಕೂಲ್ ಬಸ್‌ಗಳು ಯಾಕೆ ಯಾವಾಗಲೂ ಹಳದಿ ಬಣ್ಣದಲ್ಲಿ ಇರುತ್ತವೆ ಅಂತಾ ಎಂದಾದರೂ ಯೋಚಿಸಿದ್ದೀರಾ? ಕೆಂಪು, ನೀಲಿ ಬಣ್ಣ ಯಾಕಿಲ್ಲ? ಇದರ ಹಿಂದೆ ಸುಮಾರು 90 ವರ್ಷಗಳಷ್ಟು ಹಳೆಯ ವೈಜ್ಞಾನಿಕ ಕಾರಣವಿದೆ.

ಶಾಲಾ ಬಸ್‌ಗಳ ಹಳದಿ ಬಣ್ಣದ ರಹಸ್ಯ
ರಸ್ತೆಯಲ್ಲಿ ಹಳದಿ ಬಣ್ಣದ ಬಸ್ ಕಂಡ ತಕ್ಷಣ ಅದು ಸ್ಕೂಲ್ ಬಸ್ ಅಂತ ನಾವು ಸುಲಭವಾಗಿ ಗುರುತಿಸುತ್ತೇವೆ. ಆದರೆ, ಜಗತ್ತಿನ ಬಹುತೇಕ ಎಲ್ಲಾ ದೇಶಗಳಲ್ಲಿ ಸ್ಕೂಲ್ ಬಸ್‌ಗಳಿಗೆ ಯಾಕೆ ಹಳದಿ ಬಣ್ಣವನ್ನೇ ಬಳಸುತ್ತಾರೆಂದು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ಯಾವುದೇ ಫ್ಯಾಷನ್ ಇಲ್ಲ, ಬದಲಾಗಿ ಮಕ್ಕಳ ಸುರಕ್ಷತೆ ಮತ್ತು ವಿಜ್ಞಾನವೇ ಮುಖ್ಯ ಕಾರಣವಾಗಿದೆ.
1939ರಲ್ಲಿ ಅಮೆರಿಕದ ಸಮ್ಮೇಳನ
ಈ ಕಥೆ ಶುರುವಾಗಿದ್ದು ಅಮೆರಿಕದಲ್ಲಿ. 1939ರಲ್ಲಿ ಅಮೆರಿಕದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಸಮ್ಮೇಳನ ನಡೆಯಿತು. ಆ ಸಮ್ಮೇಳನದಲ್ಲಿ, ಸ್ಕೂಲ್ ಬಸ್‌ಗಳಿಗೆ ದೂರದಿಂದ ನೋಡಿದರೂ ಸ್ಪಷ್ಟವಾಗಿ ಕಾಣುವಂತಹ ಬಣ್ಣವನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲಾಯಿತು. ಆಗ ಮಾತ್ರ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ ಎಂದು ಚರ್ಚಿಸಲಾಯಿತು.
ಆಗ ಹಲವು ಬಣ್ಣಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರೊಫೆಸರ್ ಫ್ರಾಂಕ್ ಡಬ್ಲ್ಯೂ. ಸೈರ್ (Frank W. Cyr) ಅವರು ಒಂದು ನಿರ್ದಿಷ್ಟ ಹಳದಿ ಬಣ್ಣವನ್ನು ಶಿಫಾರಸು ಮಾಡಿದರು. ಆ ಬಣ್ಣಕ್ಕೆ 'ನ್ಯಾಷನಲ್ ಸ್ಕೂಲ್ ಬಸ್ ಗ್ಲಾಸಿ ಯೆಲ್ಲೋ' ಎಂದು ಹೆಸರಿಡಲಾಯಿತು. ನಂತರ 1970ರ ದಶಕದಲ್ಲಿ, ಈ ಹೆಸರನ್ನು 'ನ್ಯಾಷನಲ್ ಸ್ಕೂಲ್ ಬಸ್ ಕ್ರೋಮ್ ಯೆಲ್ಲೋ' ಎಂದು ಬದಲಾಯಿಸಲಾಯಿತು. ಅಂದು ಶುರುವಾದ ಈ ಪದ್ಧತಿ ಇಂದಿಗೂ ಮುಂದುವರಿದಿದೆ.
ವೈಜ್ಞಾನಿಕ ಕಾರಣಗಳು
ಇದರ ಹಿಂದೆ 3 ಪ್ರಮುಖ ವೈಜ್ಞಾನಿಕ ಕಾರಣಗಳಿವೆ:
1. ಸುಲಭವಾಗಿ ಕಣ್ಣಿಗೆ ಬೀಳುತ್ತದೆ: ವಿಜ್ಞಾನದ ಪ್ರಕಾರ, ಕೆಂಪು ಬಣ್ಣಕ್ಕಿಂತ ಹಳದಿ ಬಣ್ಣವು ಮನುಷ್ಯರ ಕಣ್ಣಿಗೆ ಸುಮಾರು 1.24 ಪಟ್ಟು ವೇಗವಾಗಿ ಕಾಣಿಸುತ್ತದೆ. ದಟ್ಟವಾದ ಮಂಜು, ಮಳೆ, ಮತ್ತು ಕತ್ತಲೆಯಲ್ಲಿಯೂ ಹಳದಿ ಬಣ್ಣವನ್ನು ದೂರದಿಂದ ಸುಲಭವಾಗಿ ಗುರುತಿಸಬಹುದು. ಮಕ್ಕಳ ಸುರಕ್ಷತೆಗೆ ಇದಕ್ಕಿಂತ ಮುಖ್ಯವಾದುದು ಇನ್ನೇನಿದೆ?
2. ಪೆರಿಫೆರಲ್ ವಿಷನ್ (Peripheral Vision): ನಾವು ನೇರವಾಗಿ ನೋಡುತ್ತಿರುವಾಗ, ಅಕ್ಕಪಕ್ಕದಲ್ಲಿರುವ ವಸ್ತುಗಳನ್ನೂ ವಾರೆ ಕಣ್ಣೋಟದಿಂದ (ಕಣ್ಣಿನ ಮೂಲೆಯಿಂದ) ಗಮನಿಸುತ್ತೇವೆ ಅಲ್ಲವೇ? ಅದನ್ನೇ ಪೆರಿಫೆರಲ್ ವಿಷನ್ ಎನ್ನುತ್ತಾರೆ. ಇತರ ಬಣ್ಣಗಳಿಗೆ ಹೋಲಿಸಿದರೆ ಹಳದಿ ಬಣ್ಣವು ಈ ಪಾರ್ಶ್ವ ದೃಷ್ಟಿಗೂ ಸ್ಪಷ್ಟವಾಗಿ ಕಾಣುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದರಿಂದ, ಇತರ ಚಾಲಕರು ದೂರದಿಂದಲೇ ಸ್ಕೂಲ್ ಬಸ್ ಬರುತ್ತಿದೆ ಎಂದು ಎಚ್ಚೆತ್ತುಕೊಳ್ಳುತ್ತಾರೆ.
ಕಪ್ಪು ಅಕ್ಷರಗಳೇ ಬರೆದಿರುವುದೇಕೆ?
3. ಕಪ್ಪು ಅಕ್ಷರಗಳು ಸ್ಪಷ್ಟವಾಗಿ ಕಾಣಿಸುತ್ತವೆ: ಸ್ಕೂಲ್ ಬಸ್ ಮೇಲೆ ಕಪ್ಪು ಬಣ್ಣದಲ್ಲಿ 'SCHOOL BUS' ಎಂದು ಬರೆದಿರುತ್ತಾರೆ. ಹಳದಿ ಬಣ್ಣದ ಹಿನ್ನೆಲೆಯಲ್ಲಿ ಕಪ್ಪು ಅಕ್ಷರಗಳು ಬಹಳ ಸ್ಪಷ್ಟವಾಗಿ ಮತ್ತು ಎದ್ದುಕಾಣುವಂತೆ ಇರುತ್ತವೆ. ಇದರಿಂದ ದೂರದಿಂದಲೂ ಆ ಅಕ್ಷರಗಳನ್ನು ಸುಲಭವಾಗಿ ಓದಬಹುದು. ಇತ್ತೀಚೆಗೆ ಹ;ವು ಬಣ್ಣಗಳಿಂದ ಅಕ್ಷರಗಳನ್ನು ಬರೆಯಲಾಗುತ್ತಿದೆ.
ಆದ್ದರಿಂದ, ಇದು ಕೇವಲ ಸಂಪ್ರದಾಯವಲ್ಲ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸುಮಾರು 90 ವರ್ಷಗಳಿಂದ ಈ ಹಳದಿ ಬಣ್ಣವು ಸ್ಕೂಲ್ ಬಸ್‌ಗಳ ಗುರುತಾಗಿ ಉಳಿದುಕೊಂಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

