- Home
- Life
- Old Monk: '7 ಇಯರ್ಸ್ ಓಲ್ಡ್ ಬ್ಲೆಂಡೆಡ್' ಎಂಬ ಲೇಬಲ್ ಇನ್ನು ಇರಲ್ಲ! ಬಾಂಬೆ ಹೈಕೋರ್ಟ್ ಚಾಟಿ ಬೀಸಿದ ಮೇಲೆ ಕಂಪನಿ ಯು-ಟರ್ನ್
Old Monk: '7 ಇಯರ್ಸ್ ಓಲ್ಡ್ ಬ್ಲೆಂಡೆಡ್' ಎಂಬ ಲೇಬಲ್ ಇನ್ನು ಇರಲ್ಲ! ಬಾಂಬೆ ಹೈಕೋರ್ಟ್ ಚಾಟಿ ಬೀಸಿದ ಮೇಲೆ ಕಂಪನಿ ಯು-ಟರ್ನ್
ಭಾರತದ ಜನಪ್ರಿಯ ರಮ್ ಬ್ರ್ಯಾಂಡ್ ಓಲ್ಡ್ ಮಂಕ್‌ನ ಬಾಟಲಿ ಮೇಲಿನ ಚಿರಪರಿಚಿತ ಲೇಬಲ್ ಶೀಘ್ರದಲ್ಲೇ ಬದಲಾಗಲಿದೆ. ಬಾಂಬೆ ಉಚ್ಚ ನ್ಯಾಯಲಯದ ಚಾಟಿ ಬೀಸಿದ ಬೆನ್ನಲ್ಲೇ ಓಲ್ಡ್ ಮಂಕ್ ಕಂಪನಿ ಯೂಟರ್ನ್ ಹೊಡೆದಿದೆ.

'7 ಇಯರ್ಸ್ ಓಲ್ಡ್ ಬ್ಲೆಂಡೆಡ್' ತೆಗೆದು ಹಾಕಲು ಓಲ್ಡ್ ಮಂಕ್ ನಿರ್ಧಾರ
ಬಾಟಲಿ ಮೇಲೆ ಬರೆದಿರುವ '7 ಇಯರ್ಸ್ ಓಲ್ಡ್ ಬ್ಲೆಂಡೆಡ್' (7 ವರ್ಷ ಹಳೆಯದು) ಎಂಬ ವಾಕ್ಯವನ್ನು ತೆಗೆದುಹಾಕಲು ತಯಾರಕರು ನಿರ್ಧರಿಸಿದ್ದಾರೆ. ಲೇಬಲ್‌ನಲ್ಲಿನ ಮಾಹಿತಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಕಂಪನಿ ಈ ನಿರ್ಧಾರ ಪ್ರಕಟಿಸಿದೆ.
ಲಿಖಿತ ರೂಪದಲ್ಲಿ ಭರವಸೆ ಕೊಟ್ಟ ಮೋಹನ್ ಮೀಕಿನ್ ಕಂಪನಿ
ಈ ವಾಕ್ಯವನ್ನು ತೆಗೆದುಹಾಕುವುದಾಗಿ ಮತ್ತು ಪಾನೀಯದಲ್ಲಿ ಬೇರೆ ಫ್ಲೇವರ್‌ಗಳನ್ನು ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಗ್ರಾಹಕರಿಗೆ ಸುಲಭವಾಗಿ ಕಾಣುವಂತೆ ಲೇಬಲ್‌ನಲ್ಲಿ ಸ್ಪಷ್ಟವಾಗಿ ಮುದ್ರಿಸುವುದಾಗಿ ಓಲ್ಡ್ ಮಂಕ್ ತಯಾರಕ ಕಂಪನಿ ಮೋಹನ್ ಮೀಕಿನ್, ಕೋರ್ಟ್‌ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದೆ.
ಮಹಾರಾಷ್ಟ್ರದಲ್ಲಿ ನಿಷೇಧ ಮತ್ತು FSSAI ವರದಿ
ಓಲ್ಡ್ ಮಂಕ್‌ನ ಕೆಲವು ಉತ್ಪನ್ನಗಳ ತಯಾರಿಕಾ ವಿಧಾನ ಮತ್ತು ಲೇಬಲಿಂಗ್ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅನುಮಾನ ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಅದರ ಮಾರಾಟವನ್ನು ತಡೆಹಿಡಿಯಲಾಗಿತ್ತು. ಈ ಬೆಳವಣಿಗೆಯ ನಂತರ ಶುರುವಾದ ಕಾನೂನು ಹೋರಾಟ ಈಗ ಲೇಬಲ್ ಬದಲಾವಣೆಯಲ್ಲಿ ಅಂತ್ಯಗೊಳ್ಳುತ್ತಿದೆ. '7 ವರ್ಷ ಹಳೆಯದು' ಎಂಬ ವಾಕ್ಯವು ಗ್ರಾಹಕರನ್ನು ದಾರಿ ತಪ್ಪಿಸುತ್ತಿದೆ ಎನ್ನುವುದು ಪ್ರಮುಖ ಆರೋಪವಾಗಿತ್ತು.
FSSAI ವರದಿ ಏನು?
FSSAI ವರದಿ ಪ್ರಕಾರ, ಬಾಟಲಿಯಲ್ಲಿರುವ ಮದ್ಯದಲ್ಲಿ ಕೇವಲ 5% ಕ್ಕಿಂತ ಕಡಿಮೆ ಮಾತ್ರ ಹಳೆಯ, ನೈಜ ರಮ್ ಇರುತ್ತದೆ. ಉಳಿದದ್ದು ಹಳೆಯದಲ್ಲದ ಸಾಮಾನ್ಯ ಸ್ಪಿರಿಟ್ ಆಗಿದೆ. ಬಾಟಲಿಯಲ್ಲಿ ಕೇವಲ 2 ರಿಂದ 5% ಮಾತ್ರ ರಮ್ ಇರುವಾಗ, ಈ ಪಾನೀಯವನ್ನು 'ರಮ್' ಎಂದು ಕರೆಯುವುದೇ ಜನರನ್ನು ದಾರಿ ತಪ್ಪಿಸಿದಂತೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದಿಸಿದರು.
ಜನರನ್ನು ದಾರಿ ತಪ್ಪಿಸುತ್ತಿದ್ದೀರ
ವಿಚಾರಣೆ ವೇಳೆ, "ಇಡೀ ಮದ್ಯಕ್ಕೆ ಏಳು ವರ್ಷ ಹಳೆಯದಾಗಿದೆ ಎಂದು ಗ್ರಾಹಕರು ತಪ್ಪಾಗಿ ಭಾವಿಸುವುದಿಲ್ಲವೇ?" ಎಂದು ನ್ಯಾಯಾಲಯ ಪ್ರಶ್ನಿಸಿತು. "ನೀವು ಜನರನ್ನು ದಾರಿ ತಪ್ಪಿಸುತ್ತಿದ್ದೀರಿ... 7 ವರ್ಷ ಹಳೆಯದು ಎಂದರೆ ಅದರರ್ಥ 7 ವರ್ಷ ಹಳೆಯದು ಎಂದೇ," ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ವಿ. ಘುಗೆ ತೀಕ್ಷ್ಣವಾಗಿ ಹೇಳಿದರು.
'ಭೂತಗನ್ನಡಿ ಹಿಡಿದು ನೋಡಿದರೂ ಕಾಣಲಿಲ್ಲ'
ಮದ್ಯದಲ್ಲಿ ಬೇರೆ ಫ್ಲೇವರ್‌ಗಳನ್ನು ಸೇರಿಸಿರುವ ಮಾಹಿತಿಯನ್ನು ಬಾಟಲಿಯ ಮೇಲೆ ಅತ್ಯಂತ ಸಣ್ಣ ಅಕ್ಷರಗಳಲ್ಲಿ ಮುದ್ರಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಓದಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. "ನಾನೊಂದು ಭೂತಗನ್ನಡಿ ಹಿಡಿದು ನೋಡಿದರೂ ಅದನ್ನು ಪತ್ತೆಹಚ್ಚಲು ಆಗಲಿಲ್ಲ. ಬಾಟಲಿಯ ಮೂಲೆ ಮೂಲೆಯನ್ನೂ ನೋಡಿದೆ, ಆದರೂ ಕಾಣಿಸಲಿಲ್ಲ" ಎಂದು ನ್ಯಾಯಮೂರ್ತಿ ಘುಗೆ ಹೇಳಿದ್ದಾಗಿ 'ಬಾರ್ ಆ್ಯಂಡ್ ಬೆಂಚ್' ವರದಿ ಮಾಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

