ಈ ಎರಡು ಪದಾರ್ಥಗಳಿಂದ ಮನೆಯಲ್ಲೇ ಹೋಟೆಲ್ ರೀತಿ ಗಟ್ಟಿ ಮೊಸರು ಮಾಡಿ, ಇಲ್ಲಿದೆ ಸಿಂಪಲ್ ಟಿಪ್ಸ್
ಅಡುಗೆಗೆ ರುಚಿಕರವಾದ ಮೊಸರು ಬೇಕಾದಾಗ ಪಾಕೆಟ್‌ಗಳನ್ನ ಅವಲಂಬಿಸುವ ಬದಲು ಹೋಟೆಲ್ ಶೈಲಿಯಲ್ಲಿ ಗಟ್ಟಿಯಾದ ಕ್ರೀಮಿಯಾದ ಮೊಸರನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಮಾಡುವ ವಿಧಾನ ಹೇಗೆ ಎಂಬುದು ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ.
ಮನೆಯಲ್ಲೇ ಹೋಟೆಲ್ ಸ್ಟೈಲ್ ಗಟ್ಟಿ ಮೊಸರು ಮಾಡುವುದು ಸುಲಭ
ಭಾರತೀಯರ ಅಡುಗೆಮನೆಯಲ್ಲಿ ಮೊಸರಿಗೆ ವಿಶೇಷ ಸ್ಥಾನವಿದೆ. ಹಿಂದಿಯಲ್ಲಿ ‘ದಹಿ’ ಎಂದು ಕರೆಯುವ ಮೊಸರು ಹಾಲಿನಿಂದ ತಯಾರಿಸುವ ಸಾಂಪ್ರದಾಯಿಕ ಆಹಾರ. ಮೊಸರನ್ನು ಅನ್ನದೊಂದಿಗೆ ತಿನ್ನುವುದರಿಂದ ಹಿಡಿದು ಮಜ್ಜಿಗೆ, ಲಸ್ಸಿ, ಸೇರಿದಂತೆ ಹಲವು ಖಾದ್ಯಗಳಲ್ಲಿ ಬಳಸಲಾಗುತ್ತದೆ. ಬಿರಿಯಾನಿ ಮತ್ತು ಕಬಾಬ್‌ಗಳಂತಹ ಖಾದ್ಯಕ್ಕೂ ಮೊಸರು ವಿಶೇಷ ರುಚಿ ಕೊಡುತ್ತದೆ.
ಮೊದಲೆಲ್ಲ ಮನೆಯಲ್ಲಿ ಹಸುಗಳು ಸಾಕುತ್ತಿದ್ದರಿಂದ ಮನೆಯಲ್ಲಿ ಹಾಲು, ಹಾಲು ಬಿಸಿ ಮಾಡಿ ರಾತ್ರಿ ಹುಳಿ ಹೆಪ್ಪು ಹಾಕಿಕೊಂಡು ಮನೆಯಲ್ಲೇ ಮೊಸರು ತಯಾರಿಸುವುದು ಸಾಮಾನ್ಯವಾಗಿತ್ತು ಆದರೆ ಇಂದು ಮೊಸರಿಗೆ ಡೈರಿ ಅಂಗಡಿಯನ್ನೇ ಅವಲಂಬಿಸಿದ್ದೇವೆ. ನಂದಿನಿ ಪಾಕೆಟ್‌ನಲ್ಲಿ ಸಿಗುವ ಮೊಸರನ್ನೇ ತರುತ್ತವೆ. ಅದರ ಬದಲು ಮನೆಯಲ್ಲೇ ಗಟ್ಟಿ ಮೊಸರು ಮಾಡಿದರೆ ಹೇಗೆ? ಇದು ಕಷ್ಟವೇನಲ್ಲಿ ಮನೆಯಲ್ಲಿ ಮೊಸರು ತಯಾರಿಸುವುದು ತುಂಬಾ ಸುಲಭ. ಇದಕ್ಕೆ ಹಾಲು ಮತ್ತು ಸ್ವಲ್ಪ ಮೊಸರು ಎಂಬ ಎರಡು ಪ್ರಮುಖ ಪದಾರ್ಥಗಳಷ್ಟೇ ಸಾಕು. ಆದರೆ ಮೊಸರು ದಪ್ಪವಾಗಿ, ಹೋಟೆಲ್ ಸ್ಟೈಲ್ ಗಟ್ಟಿ ಅಥವಾ ಕ್ರೀಮ್‌ನಂತೆ ಕಾಣಲು ಹಾಲಿನ ಆಯ್ಕೆ, ಬಿಸಿ, ಹೆಪ್ಪುಗಟ್ಟಿಸುವ ಸಮಯ ಬಹಳ ಮುಖ್ಯವಾಗುತ್ತದೆ.
ಗಟ್ಟಿ ಮೊಸರು ಮಾಡಲು ಬೇಕಾಗುವ ಪದಾರ್ಥಗಳು
1 ಲೀಟರ್ ಪೂರ್ಣ ಕೊಬ್ಬಿನ ಹಾಲು
1 ಟೀಸ್ಪೂನ್ ಮೊಸರು ಅಥವಾ ದಹಿ - ಸ್ಟಾರ್ಟರ್ ಆಗಿ
ಚಳಿಗಾಲದಲ್ಲಿ ¾ ರಿಂದ 1 ಟೇಬಲ್‌ಸ್ಪೂನ್‌ವರೆಗೆ ಸ್ಟಾರ್ಟರ್ ಬಳಸಬಹುದು.
ಮನೆಯಲ್ಲಿ ಗಟ್ಟಿ ಮೊಸರು ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿಕೊಳ್ಳಿ. ನಂತರ ಅದಕ್ಕೆ 1 ಲೀಟರ್ ಹಾಲು ಹಾಕಿ ಮಧ್ಯಮ-ಕಡಿಮೆ ಉರಿಯಲ್ಲಿ ಕುದಿಸಿ.
ಹಾಲು ಕುದಿಯಲು ಆರಂಭಿಸಿದ ನಂತರ ಉರಿಯನ್ನು ಕಡಿಮೆ ಮಾಡಿ ಸುಮಾರು 10ರಿಂದ 15 ನಿಮಿಷಗಳ ಕಾಲ ನಿಧಾನವಾಗಿ ಕುದಿಯಲು ಬಿಡಿ. ನಡುವೆ ಆಗಾಗ ಕಲುಕುತ್ತಾ ಇರಿ. ಈ ರೀತಿ ಹಾಲನ್ನು ಸ್ವಲ್ಪ ಸಮಯ ಕುದಿಸುವುದರಿಂದ ಮೊಸರು ಹೆಚ್ಚು ದಪ್ಪವಾಗಿ ಮತ್ತು ರುಚಿಯಾಗಿ ಬರುತ್ತದೆ. ಹಾಲಿನ ಮೇಲೆ ಗಟ್ಟಿ ಕೆನೆ ಪದರ ಬೇಡವೆಂದರೆ ಹಾಲನ್ನು ಆಗಾಗ ಕಲಕಬಹುದು. ಕೆನೆ ಬೇಕಿದ್ದರೆ ಹಾಗೆ ಬಿಡಬಹುದು.
ಗಟ್ಟಿ ಮೊಸರು ಮಾಡುವ ವಿಧಾನ
ಹಾಲು ಕುದಿದ ನಂತರ ಸ್ಟೌವ್‌ನಿಂದ ಕೆಳಗಿಳಿಸಿ. ಈಗ ಹಾಲು ಸ್ವಲ್ಪ ತಣ್ಣಗಾಗಿ ಬೆಚ್ಚಗಿನ ಸ್ಥಿತಿಗೆ ಬರಬೇಕು. ಹಾಲು ತುಂಬಾ ಬಿಸಿಯಾಗಿರಬಾರದು. ಹೆಚ್ಚು ಬಿಸಿಯಾಗಿದ್ದರೆ ಮೊಸರನ್ನು ಹೆಪ್ಪುಗಟ್ಟಿಸುವ ಬ್ಯಾಕ್ಟೀರಿಯಾ ನಾಶವಾಗಬಹುದು. ಹೀಗಾಗಿ ಹಾಲಿನ ತಾಪಮಾನ ಸುಮಾರು 110ರಿಂದ 115°F ಅಥವಾ 43ರಿಂದ 46°C ಇರಬೇಕು. ಥರ್ಮಾಮೀಟರ್ ಇಲ್ಲದಿದ್ದರೆ ಕೈ ತೊಳೆದು ಬೆರಳನ್ನು ಹಾಲಿನಲ್ಲಿ ಅದ್ದಿ ಪರೀಕ್ಷಿಸಬಹುದು. ಬೆರಳಿಗೆ ಬೆಚ್ಚಗೆ ಅನ್ನಿಸಬೇಕು, ಸುಡುವಷ್ಟು ಬಿಸಿಯಾಗಿರಬಾರದು.
ಮುಂದಿನ ಹಂತ:
1. ಟೀಸ್ಪೂನ್ ಮೊಸರನ್ನು ಸ್ಟಾರ್ಟರ್ ಆಗಿ ಸೇರಿಸಿ. ಹಾಲಿನಲ್ಲಿ ಮೊಸರು ಸಂಪೂರ್ಣವಾಗಿ ಬೆರೆಯುವಂತೆ ಚೆನ್ನಾಗಿ ಕಲಸಿ. ನಂತರ ಪಾತ್ರೆಯನ್ನು ಮುಚ್ಚಿ ಬೆಚ್ಚಗಿನ ಸ್ಥಳದಲ್ಲಿ 6ರಿಂದ 10 ಗಂಟೆಗಳ ಕಾಲ ಇಡಿ. ಮೊಸರು ಹೆಪ್ಪುಗಟ್ಟುವವರೆಗೆ ಪಾತ್ರೆಯನ್ನು ಕದಲಿಸಬೇಡಿ. ಮೊಸರು ಚೆನ್ನಾಗಿ ಹೆಪ್ಪುಗಟ್ಟಿದ ನಂತರ ಫ್ರಿಡ್ಜ್‌ನಲ್ಲಿ ಇಡಿ. ಫ್ರಿಡ್ಜ್‌ನಲ್ಲಿ ಇಟ್ಟ ಬಳಿಕ ಮೊಸರು ಇನ್ನಷ್ಟು ಗಟ್ಟಿಯಾಗುತ್ತದೆ.
ಗಟ್ಟಿ ಮೊಸರು ಮಾಡಲು ಈ ಟಿಪ್ಸ್ ಪಾಲಿಸಿ
ಗಟ್ಟಿ ಮೊಸರು ಬೇಕೆಂದರೆ ಫುಲ್ ಫ್ಯಾಟ್ ಮಿಲ್ಕ್ ಬಳಸಿ. ಇದರಿಂದ ಗಟ್ಟಿ ಮೊಸರು ತಯಾರಿಸುವುದು ಸುಲಭ. ಕಡಿಮೆ ಕೊಬ್ಬಿನ ಹಾಲಿನಲ್ಲಿ ಮೊಸರು ತೆಳುವಾಗುವ ಸಾಧ್ಯತೆ ಹೆಚ್ಚು.
ಕೆಲವೊಮ್ಮೆ ಗಟ್ಟಿ ಮೊಸರು ಜಿಗುಟಾಗುವುದು ಏಕೆ?
2. ಹಾಲನ್ನು ಸ್ವಲ್ಪ ಹೆಚ್ಚು ಕುದಿಸಿ:
ಹಾಲು ಕುದಿದ ನಂತರ 10 ರಿಂದ 15 ನಿಮಿಷ ಕಡಿಮೆ ಉರಿಯಲ್ಲಿ ಸಿಮ್ಮರ್ ಮಾಡುವುದರಿಂದ ಮೊಸರಿನ ದಪ್ಪ ಹೆಚ್ಚಾಗುತ್ತದೆ. ಗಟ್ಟಿ ಮೊಸರು ಮಾಡುವಾಗ ತಾಪಮಾನ ಬಹಳ ಮುಖ್ಯ. ಹಾಲು ತುಂಬಾ ಬಿಸಿಯಾಗಿರುವಾಗ ಮೊಸರು ಸೇರಿಸಬೇಡಿ. ಅದೇ ರೀತಿ ಹಾಲು ಸಂಪೂರ್ಣ ತಣ್ಣಗಾದರೂ ಹೆಪ್ಪುಗಟ್ಟಲು ಹೆಚ್ಚು ಸಮಯ ಬೇಕಾಗಬಹುದು. ಮೊಸರು ಹೆಪ್ಪುಗಟ್ಟುವವರೆಗೆ ಪಾತ್ರೆಯನ್ನು ಕದಲಿಸಬೇಡಿ. ಪಾತ್ರೆಯನ್ನು ಪದೇಪದೇ ಸರಿಸಿದರೆ ಮೊಸರು ಸರಿಯಾಗಿ ಸೆಟ್ ಆಗದಿರಬಹುದು.
3.ಬೆಚ್ಚಗಿನ ಸ್ಥಳದಲ್ಲಿ ಇಡಿ
ಚಳಿಯ ವಾತಾವರಣದಲ್ಲಿ ಮೊಸರು ಹೆಪ್ಪುಗಟ್ಟಲು ಹೆಚ್ಚು ಸಮಯ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪಾತ್ರೆಯನ್ನು ಕ್ಯಾಸರೋಲ್ ಅಥವಾ ಥರ್ಮೋಕೋಲ್ ಬಾಕ್ಸ್‌ನಲ್ಲಿ ಇಡಬಹುದು. ಬೆಚ್ಚಗಿನ ಬಟ್ಟೆ ಸುತ್ತುವುದು ಬೆಸ್ಟ.
ಕೆಲವೊಮ್ಮೆ ಮನೆಯಲ್ಲಿ ಮಾಡಿದ ಮೊಸರು ಗಟ್ಟಿ ಮೊಸರು ಆಗುವ ಬದಲು ಜಿಗುಟಾಗುತ್ತದೆ ಇದಕ್ಕೆ ಬಳಸುವ ಸ್ಟಾರ್ಟರ್ ಕೂಡ ಕಾರಣವಾಗಬಹುದು. ಗ್ರೀಕ್ ಯೋಗರ್ಟ್ ಅಥವಾ ಈಗಾಗಲೇ ಜಿಗುಟಾಗಿರುವ ಮೊಸರನ್ನು ಸ್ಟಾರ್ಟರ್ ಆಗಿ ಬಳಸುವುದನ್ನು ತಪ್ಪಿಸಿ. ಇನ್ನೊಂದು ಕಾರಣವೆಂದರೆ ಹಾಲಿನ ಗುಣಮಟ್ಟ. ಒಂದು ಬ್ರ್ಯಾಂಡ್‌ನ ಹಾಲಿನಲ್ಲಿ ಸಮಸ್ಯೆ ಕಂಡುಬಂದರೆ ಮತ್ತೊಂದು ಬ್ರ್ಯಾಂಡ್‌ನ ಪೂರ್ಣ ಕೊಬ್ಬಿನ ಹಾಲನ್ನು ಪ್ರಯತ್ನಿಸಬಹುದು.
ಮೊಸರು ಚೆನ್ನಾಗಿ ಹೆಪ್ಪುಗಟ್ಟದಿದ್ದರೆ ಏನು ಮಾಡಬೇಕು?
ಮೊಸರು ಸರಿಯಾಗಿ ಹೆಪ್ಪುಗಟ್ಟಲು ಬಳಸುವ ಹಾಲು, ಸ್ಟಾರ್ಟರ್ ಮತ್ತು ಹವಾಮಾನ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಹೋಮೋಜಿನೈಸ್ಡ್ ಹಾಲಿಗೆ ಕೆಲವೊಮ್ಮೆ ಸ್ವಲ್ಪ ಹೆಚ್ಚು ಸ್ಟಾರ್ಟರ್ ಬೇಕಾಗಬಹುದು. ಸ್ಟಾರ್ಟರ್‌ನಲ್ಲಿ ಜೆಲಟಿನ್‌ನಂತಹ ಪದಾರ್ಥಗಳಿದ್ದರೆ ಪ್ರಮಾಣದಲ್ಲೂ ವ್ಯತ್ಯಾಸವಾಗಬಹುದು. ಚಳಿಗಾಲದಲ್ಲಿ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಸ್ಟಾರ್ಟರ್ ಬೇಕಾಗುವ ಸಾಧ್ಯತೆಯಿದೆ.
ಸ್ಟಾರ್ಟರ್ ಇಲ್ಲದೆ ಮೊಸರು ಮಾಡಬಹುದೇ?
ಹೌದು. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಅನುಸರಿಸುವ ಸಾಂಪ್ರದಾಯಿಕ ವಿಧಾನದಲ್ಲಿ ಸ್ಟಾರ್ಟರ್ ಮೊಸರಿನ ಬದಲಿಗೆ ಒಣ ಕೆಂಪು ಮೆಣಸಿನಕಾಯಿಯ ಕಾಂಡಗಳನ್ನು ಬಳಸುತ್ತಾರೆ. ಹಾಲನ್ನು ಕುದಿಸಿ ಬೆಚ್ಚಗಾದ ನಂತರ ಪ್ರತಿ ಅರ್ಧದಿಂದ ಮುಕ್ಕಾಲು ಕಪ್ ಹಾಲಿಗೆ ಸುಮಾರು 8ರಿಂದ 10 ಕೆಂಪು ಮೆಣಸಿನಕಾಯಿ ಕಾಂಡಗಳನ್ನು ಹಾಕಿ ಬೆಚ್ಚಗಿನ ಸ್ಥಳದಲ್ಲಿ ಇಡಬಹುದು. ಈ ವಿಧಾನದಲ್ಲಿ ಮೊಸರು ಹೆಪ್ಪುಗಟ್ಟಲು ಸುಮಾರು 5 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು. ನಂತರ ಈ ರೀತಿ ತಯಾರಾದ ಮೊಸರನ್ನು ಹೊಸ ಮೊಸರು ಮಾಡಲು ಸ್ಟಾರ್ಟರ್ ಆಗಿ ಬಳಸಬಹುದು. ಕೆಂಪು ಮೆಣಸಿನಕಾಯಿ ಕಾಂಡಗಳನ್ನು ಹಾಕುವುದರಿಂದ ಮೊಸರು ಖಾರವಾಗುವುದಿಲ್ಲ.
ಪ್ರತ್ಯೇಕ ಬಟ್ಟಲುಗಳಲ್ಲಿ ಮೊಸರು ಮಾಡುವುದು
ಒಂದೇ ದೊಡ್ಡ ಪಾತ್ರೆಯಲ್ಲಿ ಮೊಸರು ಮಾಡುವ ಬದಲು ಸಣ್ಣ ಸಣ್ಣ ಬಟ್ಟಲುಗಳಲ್ಲಿ ಮೊಸರು ಮಾಡಬಹುದು. ಇದರಿಂದ ಪ್ರತಿ ಬಾರಿ ದೊಡ್ಡ ಪಾತ್ರೆಯಿಂದ ಮೊಸರನ್ನು ತೆಗೆದುಕೊಳ್ಳುವ ಅಗತ್ಯ ಬೀಳುವುದಿಲ್ಲ. ಮೊಸರು ಪದೇಪದೇ ಕದಡುವುದಿಲ್ಲ. ಪ್ರತಿ ಅರ್ಧ ಕಪ್ ಹಾಲಿಗೆ ಸುಮಾರು ಕಾಲು ಟೀಸ್ಪೂನ್ ಮೊಸರು ಸ್ಟಾರ್ಟರ್ ಆಗಿ ಬಳಸಬಹುದು. ನಂತರ ಬಟ್ಟಲುಗಳನ್ನು ಮುಚ್ಚಿ ಬೆಚ್ಚಗಿನ ಸ್ಥಳದಲ್ಲಿ ಹೆಪ್ಪುಗಟ್ಟಲು ಬಿಡಿ.
ಮನೆಯಲ್ಲಿ ಮೊಸರು ಮಾಡುವಾಗ ಇದನ್ನು ನೆನಪಿಡಿ:
- ಯಾವಾಗಲೂ ಪೂರ್ಣ ಕೊಬ್ಬಿನ ಹಾಲು ಬಳಸುವುದು ಉತ್ತಮ.
- ಹಾಲನ್ನು ಚೆನ್ನಾಗಿ ಕುದಿಸಿ.
- ಗಟ್ಟಿ ಮೊಸರು ಬೇಕಾದರೆ ಕುದಿಸಿದ ನಂತರ 10-15 ನಿಮಿಷ ಸಿಮ್ಮರ್ ಮಾಡಿ.
- ಹಾಲು ಬೆಚ್ಚಗಾದ ನಂತರ ಮಾತ್ರ ಸ್ಟಾರ್ಟರ್ ಸೇರಿಸಿ.
- ಮೊಸರು ಸೇರಿಸಿದ ನಂತರ ಚೆನ್ನಾಗಿ ಕಲಸಿ.
- ಪಾತ್ರೆಯನ್ನು ಮುಚ್ಚಿ ಬೆಚ್ಚಗಿನ ಸ್ಥಳದಲ್ಲಿ ಇಡಿ.
- ಮೊಸರು ಹೆಪ್ಪುಗಟ್ಟುವವರೆಗೆ ಪಾತ್ರೆಯನ್ನು ಕದಲಿಸಬೇಡಿ.
- ಹೆಪ್ಪುಗಟ್ಟಿದ ನಂತರ ಫ್ರಿಡ್ಜ್‌ನಲ್ಲಿ ಇಡಿ.
- ಫ್ರಿಡ್ಜ್‌ನಲ್ಲಿ ಇಟ್ಟ ಬಳಿಕ ಮೊಸರು ಇನ್ನಷ್ಟು ಗಟ್ಟಿಯಾಗುತ್ತದೆ.
ಮನೆಯಲ್ಲಿ ಗಟ್ಟಿ ಮೊಸರು ಮಾಡಲು ದೊಡ್ಡ ತಯಾರಿ ಅಥವಾ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಉತ್ತಮ ಗುಣಮಟ್ಟದ ಕೊಬ್ಬಿನ ಹಾಲು, ಸರಿಯಾದ ಪ್ರಮಾಣದ ಸ್ಟಾರ್ಟರ್ ಮತ್ತು ಸರಿಯಾದ ತಾಪಮಾನ ಇವಿಷ್ಟನ್ನು ಗಮನಿಸಿದರೆ ಮನೆಯಲ್ಲೇ ದಪ್ಪ, ಕ್ರೀಮಿ ಮತ್ತು ರುಚಿಯಾದ ಮೊಸರನ್ನು ಸುಲಭವಾಗಿ ತಯಾರಿಸಬಹುದು. ಇದನ್ನು ಓದಿದ ಬಳಿಕ ಮನೆಯಲ್ಲೇ ಟ್ರೈ ಮಾಡಿ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

