ಮನೆಯಲ್ಲಿ ಇರುವೆಗಳ ಕಾಟವೆ? ಒಂದು ಚಿಟಿಕೆ ಈ ಪುಡಿ ಹಾಕಿ… ಮನೆ ಹತ್ರಾನೂ ಸುಳಿಯಲ್ಲ
How to Get Rid of Ants: ಮಳೆಗಾಲದಲ್ಲಿ ಇರುವೆಗಳ ಸಮಸ್ಯೆ ಸಾಮಾನ್ಯ. ಅವು ಅಡುಗೆಮನೆಯಲ್ಲಿ ಸಿಹಿ ತಿನಿಸುಗಳು ಮಾತ್ರ ಅಲ್ಲ, ಎಲ್ಲಾ ವಸ್ತುಗಳ ಸುತ್ತಲೂ ಗುಂಪುಗೂಡುತ್ತವೆ, ಇದರಿಂದ ಆಹಾರ ಹಾಳಾಗುತ್ತದೆ. ನೀವು ಕೆಮಿಕಲ್ ಬಳಸಲು ಬಯಸದೇ ಇದ್ದರೆ, ಈ ಒಂದು ಪುಡಿ ಟ್ರೈ ಮಾಡಿ ನೋಡಿ.

ಇರುವೆಗಳ ಕಾಟಕ್ಕೆ ದಾಲ್ಚಿನ್ನಿಯೇ ಮನೆಮದ್ದು!
ಮಳೆಗಾಲ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಈ ಸಮಯದಲ್ಲಿ ಬಿಸಿಲಿನ ತಾಪವನ್ನು ಎದುರಿಸುವ ಅಗತ್ಯವೂ ಇರುವುದಿಲ್ಲ, ಚಳಿಯಿಂದ ನಡುಗುವ ಪರಿಸ್ಥಿತಿಯೂ ಇರುವುದಿಲ್ಲ. ಹೀಗಾಗಿ ಮುಂಗಾರು ಕಾಲವನ್ನು ಹಲವರು ಆಹ್ಲಾದಕರ ಋತು ಎಂದು ಪರಿಗಣಿಸುತ್ತಾರೆ. ಆದರೆ ಈ ಸಮಯದಲ್ಲಿ ಕೆಲವು ಸಮಸ್ಯೆಗಳೂ ಎದುರಾಗುತ್ತವೆ. ಅವುಗಳಲ್ಲಿ ಮನೆಯೊಳಗೆ ಇರುವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಕೂಡ ಒಂದು.
ಮನೆಮದ್ದುಗಳನ್ನು ಟ್ರೈ ಮಾಡಿ
ಇರುವೆಗಳ ಕಾಟ ಕೇವಲ ಮಳೆಗಾಲಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಅಡುಗೆಮನೆಯಲ್ಲಿ ಸಕ್ಕರೆ, ಸಿಹಿತಿಂಡಿ, ಹಣ್ಣು ಅಥವಾ ಯಾವುದೇ ಸಿಹಿ ಪದಾರ್ಥವನ್ನು ಇಟ್ಟಿದ್ದರೆ ಸಾಕು, ಇರುವೆಗಳ ಸಾಲು ಕಾಣಿಸಿಕೊಳ್ಳುತ್ತದೆ. ಗೋಡೆ, ನೆಲ ಹಾಗೂ ಪಾತ್ರೆಗಳ ಮೇಲೆ ಹರಿದಾಡುವ ಇರುವೆಗಳನ್ನು ನೋಡಿದರೆ ಕಿರಿಕಿರಿಯಾಗುತ್ತದೆ. ಇರುವೆಗಳನ್ನು ಓಡಿಸಲು ಹಲವರು ಕೀಟನಾಶಕ ಸ್ಪ್ರೇ ಬಳಸುತ್ತಾರೆ. ಆದರೆ ಇಂತಹ ರಾಸಾಯನಿಕ ಸ್ಪ್ರೇಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು, ವಿಶೇಷವಾಗಿ ಮಕ್ಕಳು ಮತ್ತು ಸಾಕುಪ್ರಾಣಿಗಳಿರುವ ಮನೆಗಳಲ್ಲಿ ಇದರಿಂದ ಅಪಾಯವೇ ಹೆಚ್ಚು. ಇಂತಹ ಸಂದರ್ಭದಲ್ಲಿ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಈ ಒಂದು ಪುಡಿಯಿಂದ ಇರುವೆ ದೂರ
ಮನೆಯಲ್ಲೇ ಸಾಮಾನ್ಯವಾಗಿ ಸಿಗುವ ಒಂದು ವಸ್ತುವಿನಿಂದ ಇರುವೆಗಳನ್ನು ದೂರವಿಡಬಹುದು. ಅದೇ ದಾಲ್ಚಿನ್ನಿ. ಹೌದು, ಅಡುಗೆಮನೆಯಲ್ಲಿ ಇರುವ ದಾಲ್ಚಿನ್ನಿಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಇರುವೆಗಳು ಮನೆಯ ಸುತ್ತಮುತ್ತ ಸುಳಿಯದಂತೆ ಮಾಡಬಹುದು. ದಾಲ್ಚಿನ್ನಿಯಲ್ಲಿರುವ ತೀಕ್ಷ್ಣವಾದ ವಾಸನೆ ಇರುವೆಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಅವು ಆ ದಾರಿಯಲ್ಲಿ ಸಾಗುವುದನ್ನು ತಪ್ಪಿಸುತ್ತವೆ. ಇದು ನೈಸರ್ಗಿಕ ವಿಧಾನ ಆಗಿರೋದರಿಂದ ಯಾವುದೇ ಅಪಾಯ ಕೂಡ ಇಲ್ಲ.
ದಾಲ್ಚಿನ್ನಿಯನ್ನು ಹೇಗೆ ಬಳಸಬೇಕು?
ದಾಲ್ಚಿನ್ನಿಯನ್ನು ಬಳಸುವುದು ತುಂಬಾ ಸುಲಭ. ಇದು ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಸಿಗುವುದರಿಂದ ಹೊರಗೆ ಹೋಗಿ ಖರೀದಿಸುವ ಅಗತ್ಯವೂ ಇರುವುದಿಲ್ಲ. ದಾಲ್ಚಿನ್ನಿ ಪುಡಿಯನ್ನು ತೆಗೆದುಕೊಂಡು ಇರುವೆಗಳು ಹೆಚ್ಚಾಗಿ ಓಡಾಡುವ ಜಾಗಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಿಂಪಡಿಸಿ.
ಈ ಭಾಗಗಳಲ್ಲಿ ಪುಡಿಯನ್ನು ಸಿಂಪಡಿಸಿ
ಬಾಗಿಲಿನ ಕೆಳಭಾಗ, ಕಿಟಕಿಯ ಅಂಚುಗಳು, ಅಡುಗೆಮನೆಯ ಮೂಲೆಗಳು, ಸಿಂಕ್ ಸುತ್ತಮುತ್ತ, ಸಕ್ಕರೆ ಮತ್ತು ಸಿಹಿತಿಂಡಿಗಳನ್ನು ಇಡುವ ಸ್ಥಳಗಳು. ಈ ಜಾಗಗಳಲ್ಲಿ ದಾಲ್ಚಿನ್ನಿ ಪುಡಿಯನ್ನು ಹಾಕಬಹುದು. 2-3 ದಿನಗಳ ಕಾಲ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಸಿಂಪಡಿಸುತ್ತಾ ಹೋದರೆ, ಇರುವೆಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗುವುದನ್ನು ಗಮನಿಸಬಹುದು.
ದಾಲ್ಚಿನ್ನಿಯನ್ನು ಬಳಸುವ ಇನ್ನೊಂದು ವಿಧಾನ
ದಾಲ್ಚಿನ್ನಿ ಪುಡಿ ಇಲ್ಲದಿದ್ದರೆ ಅದರ ಸಣ್ಣ ತುಂಡುಗಳು ಅಥವಾ ಸ್ಟಿಕ್‌ಗಳನ್ನು ಬಳಸಬಹುದು. ಇವುಗಳನ್ನು ಅಡುಗೆಮನೆಯ ಮೂಲೆಗಳಲ್ಲಿ, ಅಲಮಾರಿಯೊಳಗೆ ಮತ್ತು ಆಹಾರ ಪದಾರ್ಥಗಳ ಡಬ್ಬಿಗಳ ಬಳಿ ಇಡಬಹುದು. ಇದನ್ನು ಸ್ಪ್ರೇ ರೂಪದಲ್ಲಿಯೂ ಬಳಸಬಹುದು. ಒಂದು ಗ್ಲಾಸ್ ನೀರಿಗೆ ಒಂದು ಚಿಕ್ಕ ಚಮಚ ದಾಲ್ಚಿನ್ನಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ಸ್ಪ್ರೇ ಬಾಟಲಿಗೆ ಹಾಕಿ, ಇರುವೆಗಳು ಓಡಾಡುವ ಜಾಗಗಳಲ್ಲಿ ಸಿಂಪಡಿಸಬಹುದು.
ಕೆಲವೇ ದಿನಗಳಲ್ಲಿ ಪರಿಣಾಮ ಕಾಣಿಸಬಹುದು
ಕೆಲವರು ದಾಲ್ಚಿನ್ನಿ ಪುಡಿಯನ್ನು ಬಳಸಿದ ಚಹಾ ಎಲೆಗಳೊಂದಿಗೆ ಬೆರೆಸಿ ಮನೆಯ ಮೂಲೆಗಳಲ್ಲಿ ಇಡುತ್ತಾರೆ. ಇದರಿಂದಲೂ ಇರುವೆಗಳ ಕಾಟ ಕಡಿಮೆಯಾಗಲು ಸಹಾಯವಾಗಬಹುದು. ಈ ಮನೆಮದ್ದುಗಳನ್ನು ಬಳಸಿದ 1-2 ದಿನಗಳಲ್ಲಿ ಇರುವೆಗಳ ಸಂಖ್ಯೆ ಕಡಿಮೆಯಾಗಬಹುದು. 4-5 ದಿನಗಳ ಕಾಲ ನಿಯಮಿತವಾಗಿ ಬಳಸಿದರೆ ಮತ್ತಷ್ಟು ಪರಿಣಾಮ ಕಾಣಿಸಬಹುದು. ಮನೆಯಲ್ಲಿ ಇರುವೆಗಳ ಕಾಟ ಹೆಚ್ಚಾಗಿದ್ದರೆ ಸುಮಾರು ಒಂದು ವಾರದವರೆಗೆ ನಿರಂತರವಾಗಿ ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

