- Home
- Karnataka Districts
- ಉಡುಪಿ: ಭ್ರಷ್ಟಾಚಾರ ವರದಿ ಮಾಡಿದ್ದಕ್ಕೆ 'ಕನ್ನಡಪ್ರಭ' ವರದಿಗಾರನ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ!
ಉಡುಪಿ: ಭ್ರಷ್ಟಾಚಾರ ವರದಿ ಮಾಡಿದ್ದಕ್ಕೆ 'ಕನ್ನಡಪ್ರಭ' ವರದಿಗಾರನ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ!
ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ವರದಿ ಪ್ರಕಟಿಸಿದ್ದಕ್ಕೆ ಕನ್ನಡಪ್ರಭ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಪತ್ನಿಯ ಎದುರೇ ಹೋಟೆಲ್‌ನಲ್ಲಿ ನಡೆದ ಈ ಘಟನೆಯನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ಸರಣಿ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ, ‘ಕನ್ನಡಪ್ರಭ’ ದಿನಪತ್ರಿಕೆಯ ಕುಂದಾಪುರ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಸರ್ಕಾರಿ ವೈದ್ಯರೊಬ್ಬರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ಪತ್ರಕರ್ತರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ. ಇನ್ನು ಹಲ್ಲೆ ಮಾಡುವ ದೃಶ್ಯವೂ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೋಟೆಲ್ ಸಿಬ್ಬಂದಿ ಹಲ್ಲೆಯಾಗುವುದನ್ನು ತಡೆದಿದ್ದಾರೆ.
ಪತ್ನಿ ಎದುರಲ್ಲೇ ಏಕಾಏಕಿ ಹಲ್ಲೆ:
ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರು ತಮ್ಮ ಪತ್ನಿಯೊಂದಿಗೆ ಕುಂದಾಪುರದ ಹೋಟೆಲೊಂದರಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಡಾ. ಮಹೇಂದ್ರ ಶೆಟ್ಟಿ, ಏಕಾಏಕಿ ಆಕ್ರೋಶ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. 'ನನ್ನ ವಿರುದ್ಧವೇ ವರದಿ ಪ್ರಕಟಿಸುತ್ತೀಯಾ?' ಎಂದು ಬೆದರಿಕೆ ಹಾಕಿ, ಪತ್ನಿಯ ಎದುರಲ್ಲೇ ಶ್ರೀಕಾಂತ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ವರದಿ ಮತ್ತು ವರ್ಗಾವಣೆಯ ದ್ವೇಷ:
ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಮತ್ತು ಡಾ. ಮಹೇಂದ್ರ ಶೆಟ್ಟಿ ಅವರ ಭ್ರಷ್ಟಾಚಾರದ ಕುರಿತು ಶ್ರೀಕಾಂತ್ ಹೆಮ್ಮಾಡಿ ಅವರು ಇತ್ತೀಚೆಗೆ ತನಿಖಾ ವರದಿಗಳನ್ನು ಪ್ರಕಟಿಸಿದ್ದರು. ಈ ವರದಿಗಳು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ವರದಿಯು ಸರ್ಕಾರಕ್ಕೂ ತಲುಪಿದ್ದು, ಇದರ ಪರಿಣಾಮವಾಗಿ ಸರ್ಕಾರವು ಕೂಡಲೇ ಡಾ. ಮಹೇಂದ್ರ ಶೆಟ್ಟಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ವೈದ್ಯ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ
ಕರ್ತವ್ಯನಿರತ ಪತ್ರಕರ್ತನ ಮೇಲೆ ವೈದ್ಯನೊಬ್ಬ ಗೂಂಡಾವರ್ತನೆ ತೋರಿ ಹಲ್ಲೆ ನಡೆಸಿರುವುದನ್ನು ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥ ವೈದ್ಯನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದೆ.

