- Home
- Sports
- IPL
- IPL 2027 ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ 5 ಮಹತ್ವದ ಅಪ್‌ಡೇಟ್ಸ್..! ರೋಹಿತ್ ಶರ್ಮಾ ಹೆಗಲೇರಿದ ಮಹತ್ವದ ಜವಾಬ್ದಾರಿ
IPL 2027 ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ 5 ಮಹತ್ವದ ಅಪ್‌ಡೇಟ್ಸ್..! ರೋಹಿತ್ ಶರ್ಮಾ ಹೆಗಲೇರಿದ ಮಹತ್ವದ ಜವಾಬ್ದಾರಿ
ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಿಂದ ಐದು ಮಹತ್ವದ ಅಪ್‌ಡೇಟ್ಸ್‌ಗಳು ಹೊರಬಿದ್ದಿವೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

ಮುಂಬೈ ಇಂಡಿಯನ್ಸ್ ತಂಡದಿಂದ ಮಹತ್ವದ ಅಪ್‌ಡೇಟ್ಸ್
ಮುಂಬೈ ಇಂಡಿಯನ್ಸ್ ತಂಡವು 2020ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಕಳೆದ ಆರು ಸೀಸನ್‌ನಿಂದಲೂ ಐಪಿಎಲ್ ಟ್ರೋಫಿ ಗೆಲ್ಲಲು ಪರದಾಡುತ್ತಿದೆ. ಇನ್ನು ಇದೆಲ್ಲದರ ನಡುವೆ ರೋಹಿತ್ ಶರ್ಮಾ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟಿದ ಬಳಿಕವಂತೂ ಮುಂಬೈ ಇಂಡಿಯನ್ಸ್ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಹೀಗಿರುವಾಗಲೇ 2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ ಮಹತ್ವದ ಅಪ್‌ಡೇಟ್ಸ್ ಹೊರಬಿದ್ದಿದೆ.
1. ಹೆಡ್ ಕೋಚ್ ಆಗಿಯೇ ಮುಂದುವರೆಯಲಿದ್ದಾರೆ ಮಹೆಲಾ ಜಯವರ್ಧನೆ:
ಮುಂಬೈ ಇಂಡಿಯನ್ಸ್ ತಂಡವು ಕಳೆದ ಕೆಲವು ವರ್ಷಗಳಿಂದ ನೀರಸ ಪ್ರದರ್ಶನದ ಬೆನ್ನಲ್ಲೇ ಅವರ ತಲೆದಂಡವಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮುಂಬೈ ಫ್ರಾಂಚೈಸಿಯು ಜಯವರ್ಧನೆ ಅವರನ್ನು ಹೆಡ್ ಕೋಚ್ ಆಗಿಯೇ ಮುಂದುವರೆಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಮುಂಬೈ ಫ್ರಾಂಚೈಸಿಯು ಜಯವರ್ಧನೆಗೆ ಮತ್ತೊಂದು ಅವಕಾಶ ನೀಡಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
2. ಸೂರ್ಯಕುಮಾರ್ ಯಾದವ್ ಅವರ ಬಗ್ಗೆಯೂ ಮಹತ್ವದ ತೀರ್ಮಾನ:
ಕಳೆದ ಸೀಸನ್ ಐಪಿಎಲ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿತ್ತು. ಮುಂಬೈ ಇಂಡಿಯನ್ಸ್ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದ ಸೂರ್ಯಗೆ ಫ್ರಾಂಚೈಸಿ ನಿರಾಸೆ ಮೂಡಿಸಿತ್ತು ಎಂದೆಲ್ಲಾ ವರದಿಯಾಗಿತ್ತು. ಆದರೆ ಇದೀಗ ಸೂರ್ಯಕುಮಾರ್ ಯಾದವ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಡುವಿನ ಮಾತುಕತೆ ಫಲಪ್ರದವಾಗಿದ್ದು, ಆಟಗಾರನಾಗಿ ಮುಂಬೈ ತಂಡದ ಜತೆಗಿರಲು ಸೂರ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.
3. ನಾಯಕನಾಗಿ ಅಲ್ಲ, ಆಟಗಾರನಾಗಿ ಮುಂಬೈ ಪರ ಆಡಲಿರುವ ಹಾರ್ದಿಕ್ ಪಾಂಡ್ಯ:
ಇನ್ನು ಕಳೆದ ಮೂರು ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕರಾಗಿ ಮುಂಬೈ ಇಂಡಿಯನ್ಸ್ ತಂಡ ಮುನ್ನಡೆಸಿದ್ದರು. ಆದರೆ ಮುಂಬೈಗೆ ನಾಯಕನಾಗಿ ಕಪ್ ಗೆಲ್ಲಿಸಿಕೊಡಲು ಪಾಂಡ್ಯ ವಿಫಲರಾದರು. ಇದರ ಬೆನ್ನಲ್ಲೇ ಪಾಂಡ್ಯರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಕೆಕೆಆರ್, ಸಿಎಸ್‌ಕೆ ಫ್ರಾಂಚೈಸಿಗಳು ಪ್ರಯತ್ನಪಡುತ್ತಿವೆ ಎಂದೆಲ್ಲಾ ವರದಿಯಾಗಿತ್ತು. ಆದರೆ ಮುಂಬೈ ಫ್ರಾಂಚೈಸಿ ಪಾಂಡ್ಯರಲ್ಲಿ ಓರ್ವ ಆಟಗಾರನಾಗಿ ಮಾತ್ರ ಉಳಿಸಿಕೊಳ್ಳಲು ಎದುರು ನೋಡುತ್ತಿದೆ ಎನ್ನಲಾಗಿದೆ.
4. ರೋಹಿತ್ ಶರ್ಮಾ ಹೆಗಲೇರಿದ ಮಹತ್ವದ ಜವಾಬ್ದಾರಿ
ಇನ್ನು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಫ್ರಾಂಚೈಸಿಗೆ ತಪ್ಪು ಎನ್ನುವುದು ಅರಿವಾದಂತಿದೆ. ಹೀಗಾಗಿ ಹಿಟ್‌ಮ್ಯಾನ್‌ಗೆ ಮುಂಬೈ ಫ್ರಾಂಚೈಸಿ ಮಹತ್ವದ ಜವಾಬ್ದಾರಿ ನೀಡಿದೆ. ರೋಹಿತ್ ಶರ್ಮಾ ಆಟಗಾರನಾಗಿ ಮಾತ್ರವಲ್ಲದೇ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಇದಷ್ಟೇ ಅಲ್ಲದೇ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನ ನೇಮಕ ವಿಚಾರದಲ್ಲೂ ರೋಹಿತ್ ಶರ್ಮಾ ಮಹತ್ವದ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ.
5. ಯಾರಾಗಲಿದ್ದಾರೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್?
ಸದ್ಯ ಈಗಿನ ಮಾಧ್ಯಮಗಳ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡದ ನೂತನ ಕ್ಯಾಪ್ಟನ್ ರೇಸ್‌ನಲ್ಲಿ ತಿಲಕ್ ವರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಮುಂಚೂಣಿಯಲ್ಲಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಮುಂಬೈ ಫ್ರಾಂಚೈಸಿಯು ಬುಮ್ರಾಗೆ ನಾಯಕತ್ವ ನೀಡಿ ತಿಲಕ್‌ಗೆ ಉಪನಾಯಕನನ್ನಾಗಿ ಮಾಡುವ ಚಿಂತನೆಯಲ್ಲಿದೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

