- Home
- Life
- Health
- ಯುಟ್ಯೂಬ್, ರೀಲ್ಸ್ ನೋಡಿ ಷೇರು ವ್ಯವಹಾರ; ಡ್ರಗ್ಸ್ ರೀತಿ ಟ್ರೇಡಿಂಗ್ ಚಟಕ್ಕೂ ನಿಮ್ಹಾನ್ಸ್ ಚಿಕಿತ್ಸೆ!
ಯುಟ್ಯೂಬ್, ರೀಲ್ಸ್ ನೋಡಿ ಷೇರು ವ್ಯವಹಾರ; ಡ್ರಗ್ಸ್ ರೀತಿ ಟ್ರೇಡಿಂಗ್ ಚಟಕ್ಕೂ ನಿಮ್ಹಾನ್ಸ್ ಚಿಕಿತ್ಸೆ!
NIMHANS Treats Trading Addiction: Youth Lost ₹80 Lakh in Stocks ಯುಟ್ಯೂಬ್ ನೋಡಿ ಷೇರು ವ್ಯವಹಾರಕ್ಕೆ ಇಳಿದ ಯುವಕನೊಬ್ಬ, ಚಟಕ್ಕೆ ಬಿದ್ದು ₹80 ಲಕ್ಷ ಸಾಲ ಮಾಡಿಕೊಂಡಿದ್ದ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈತನಿಗೆ ನಿಮ್ಹಾನ್ಸ್ ವೈದ್ಯರು ವಿಶೇಷ ಚಿಕಿತ್ಸೆ ನೀಡಿದ್ದಾರೆ.

ಯುಟ್ಯೂಬ್, ರೀಲ್ಸ್ ನೋಡಿಕೊಂಡು ಷೇರು ವ್ಯವಹಾರಕ್ಕೆ (ಟ್ರೇಡಿಂಗ್) ಇಳಿದು ಬಳಿಕ ಅದೇ ಗೀಳಿಗೆ ತುತ್ತಾಗಿ ಬರೋಬ್ಬರಿ ₹80 ಲಕ್ಷ ಸಾಲದ ಹೊರೆ ಹೊತ್ತು, ತೀವ್ರ ಖಿನ್ನತೆ ಸೇರಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಯುವಕನನ್ನು ನಿಮ್ಹಾನ್ಸ್ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಮೊಬೈಲ್ ಗೇಮಿಂಗ್, ಮದ್ಯಪಾನ, ಧೂಮಪಾನದ ಚಟದಂತೆ ಷೇರು ಮಾರುಕಟ್ಟೆಯ ವ್ಯವಹಾರವನ್ನೆ ಚಟವಾಗಿಸಿಕೊಂಡು ಮಾನಸಿಕವಾಗಿ ಬಳಲಿದ ಯುವಕನ ಕತೆಯಿದು.
ಬೆಂಗಳೂರು ಮೂಲದ ಶ್ರೀಮಂತ ಕುಟುಂಬ ಹಿನ್ನೆಲೆಯ ಹಾಗೂ ಉತ್ತಮ ಉದ್ಯೋಗದಲ್ಲಿದ್ದ ಈತ 4 ವರ್ಷದ ಹಿಂದೆ ಷೇರು ವ್ಯವಹಾರಕ್ಕೆ ಇಳಿದಿದ್ದ. ಆರಂಭದಲ್ಲಿ ಒಂದಿಷ್ಟು ಲಾಭ ಗಳಿಸಿದ ಬಳಿಕ ಸ್ಟಾಕ್ಸ್‌ನಿಂದ ಫ್ಯೂಚರ್ ಆ್ಯಂಡ್ ಆಪ್ಷನ್, ಇಂಟ್ರಾಡೇ ವ್ಯವಹಾರಕ್ಕೆ ಮುಂದಾಗಿದ್ದಾನೆ. ಒಂದಿಷ್ಟು ದಿನ ಲಾಭ ಗಳಿಸಿದ್ದಾನೆ. ಆದರೆ, ಬಳಿಕ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆ್ಯಪ್ ಮೂಲಕ ನಷ್ಟ ಸರಿಪಡಿಸಿಕೊಳ್ಳಲು ಲಕ್ಷಾಂತರ ಸಾಲ ಮಾಡಿಕೊಂಡಿದ್ದಾನೆ.
ಷೇರು ವ್ಯವಹಾರ ಕ್ರಮೇಣ ಗೀಳಾಗಿ ಮಾರ್ಪಟ್ಟಿದೆ. ಮನೆ, ಕಚೇರಿಯ ಕೆಲಸದ ಸಮಯದಲ್ಲೂ ಮತ್ತು ಅದರ ನಂತರವೂ ಗಂಟೆಗಟ್ಟಲೆ ಮೊಬೈಲ್ ನೋಡುತ್ತಾ, ಯುಟ್ಯೂಬ್‌ನಲ್ಲಿ ಬರುವ ಷೇರು ವ್ಯವಹಾರದ ವಿಡಿಯೋ ನೋಡುವುದು ಚಟವಾಗಿದೆ. ನಿದ್ದೆಗೆಟ್ಟು ಷೇರು ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸುವುದೇ ಕಾಯಕವಾಗಿತ್ತು.
ಟ್ರೇಡಿಂಗ್ ಮಾಡದ ಸಮಯದಲ್ಲಿ ಉದ್ವೇಗಕ್ಕೆ ಒಳಗಾಗಿ ವಿಪರೀತ ಆತಂಕ, ಕೈಕಾಲು ನಡುಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆ ಕಾಣಿಸಿಕೊಂಡಿವೆ. ಆನ್‌ಲೈನ್ ಟ್ರೇಡಿಂಗ್ ಆ್ಯಪ್ ಜೂಜಿನಂತೆ ಆತನನ್ನು ಆವರಿಸಿಕೊಂಡಿದೆ. ಲಾಭಕ್ಕಿಂತ ನಷ್ಟವೇ ಹೆಚ್ಚಾದಾಗ ₹ 80 ಲಕ್ಷ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ನಷ್ಟ ಮುಚ್ಚಿಡಲು ಕುಟುಂಬದವರಿಗೆ ಕುಟುಂಬ ಮತ್ತು ಸಮಾಜದಿಂದ ದೂರ ಉಳಿದು ಒಂಟಿತನಕ್ಕೆ ಜಾರಿದ್ದಾನೆ.
ಇದು ಮನೆಯವರ ಗಮನಕ್ಕೆ ಬಂದು ನಿಮ್ಹಾನ್ಸ್‌ಗೆ ಚಿಕಿತ್ಸೆಗೆ ಕರೆತಂದರು. ನಿಮ್ಹಾನ್ಸ್‌ನ 'ಷಟ್' ( ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ) ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಮನೋಜ್ ಕೆ. ಶರ್ಮಾ ಮತ್ತು ಸಂಶೋಧಕರಾದ ಸುಬ್ರಮಣಿಯನ್ ಶಾರದ, ರಾಜೇಶ್ ಕುಮಾರ್ ಅವರ ತಂಡ ಈತನಿಗೆ ಚಿಕಿತ್ಸೆ ನೀಡಿದೆ. ಗೇಮಿಂಗ್ ಚಟಕ್ಕೆ ನೀಡುವ ಚಿಕಿತ್ಸಾ ವಿಧಾನವನ್ನೇ ಮಾರ್ಪಡಿಸಿ, ಈ ಯುವಕನಿಗೆ 'ಮಲ್ಟಿಮೋಡಲ್ ಬಿಹೇವಿಯರಲ್ ಇಂಟರ್ವೆನ್ಷನ್' ಎಂಬ ವಿಶೇಷ ಚಿಕಿತ್ಸೆ ನೀಡಲಾಯಿತು.
ಒಟ್ಟು 10 ಸೆಷನ್‌ಗಳಲ್ಲಿ ಸಮಾಲೋಚನೆ ನಡೆಸಲಾಯಿತು. ಡಿಜಿಟಲ್ ಉಪವಾಸ ಅಂದರೆ ಟ್ರೇಡಿಂಗ್ ಆ್ಯಪ್‌ಗಳಿಂದ ಸಂಪೂರ್ಣವಾಗಿ ದೂರವಿರಿಸಿ, ಹಣಕಾಸು ನಿಯಂತ್ರಣ ಬದಲು, ಯುವಕನ ಹಣಕಾಸಿನ ವ್ಯವಹಾರಗಳ ಅಧಿಕಾರವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿ, ಟ್ರೇಡಿಂಗ್ ನಿಯಂತ್ರಣ. ಟ್ರೇಡಿಂಗ್‌ಗೆ ಪ್ರೇರೇಪಿಸುವ ಅಂಶಗಳಿಂದ ದೂರವಿರಿಸಲಾಯಿತು.
ಪುನಃ ಟ್ರೇಡಿಂಗ್ ಗೀಳಿಗೆ ತುತ್ತಾಗದಂತೆ ತಡೆಯಲು ವೈದ್ಯರು '4ಡಿ' ಸೂತ್ರ ತಿಳಿಸಿಕೊಟ್ಟಿದ್ದಾರೆ. ದೀರ್ಘ ಉಸಿರಾಟ, ಟ್ರೇಡಿಂಗ್ ಮಾಡುವ ತುಡಿತ ಬಂದಾಗ ಮನಸ್ಸನ್ನು ಶಾಂತಗೊಳಿಸಲು ಕಲಿಸಿದ್ದಾರೆ. ದೈಹಿಕವಾಗಿ ಗಮನ ಬೇರೆಡೆ ಸೆಳೆಯಲು ಚರ್ಚೆ ಕುಟುಂಬದವರೊಂದಿಗೆ ಬೆರೆಯುವಂತೆ ಹೇಳಿದ್ದಾರೆ. ಮುಖ್ಯವಾಗಿ ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಿ ಅನಗತ್ಯವಾಗಿ ಫೋನ್ ನೋಡುವುದನ್ನು ಬಿಡುವುದು ಕಲಿಸಿದ್ದಾರೆ.
ಯುವಕ ಟ್ರೇಡಿಂಗ್‌ನಿಂದ ಮಾನಸಿಕ ಖಿನ್ನತೆ ಸೇರಿ ಹಲವು ಸಮಸ್ಯೆಗೆ ಒಳಗಾಗಿದ್ದ. ಮಲ್ಟಿಮೋಡಲ್ ಬಿಹೇವಿಯರಲ್ ಇಂಟರ್ವೆನ್ಷನ್ ಎಂಬ ವಿಶೇಷ ಚಿಕಿತ್ಸೆ ಮೂಲಕ ಗುಣಪಡಿಸಿದ್ದೇವೆ ಎಂದು ನಿಮ್ಹಾನ್ಸ್ ಷಟ್ ವಿಭಾಗದ ಡಾ.ರಾಜೇಶ್ ಕುಮಾರ್ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

