ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್ ಕಂಪನಿ ಫೋನ್‌ಪೇ, ತನ್ನ ಐಪಿಒಗಾಗಿ ಸೆಬಿಯಿಂದ ಅನುಮೋದನೆ ಪಡೆದಿದ್ದು, ಸುಮಾರು ₹12,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಈ 'ಆಫರ್ ಫಾರ್ ಸೇಲ್' (OFS) ಮೂಲಕ, ವಾಲ್‌ಮಾರ್ಟ್ ತನ್ನ ಪಾಲನ್ನು ಕಡಿಮೆ ಮಾಡಲಿದೆ.
ಮುಂಬೈ (ಜ.22): ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್ ಕಂಪನಿಯಾದ ಫೋನ್‌ಪೇ, ತನ್ನ ಐಪಿಒಗಾಗಿ ಅಪ್‌ಡೇಟ್ ಆಗಿರುವ ಡಿಆರ್‌ಎಚ್‌ಪಿ (ಯುಡಿಆರ್‌ಎಚ್‌ಪಿ) ಎಂಬ ಹೊಸ ದಾಖಲೆಗಳನ್ನು ಸಲ್ಲಿಸಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಕಂಪನಿಗೆ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲು ಅನುಮೋದನೆ ಕೂಡ ನೀಡಿದೆ. ಈ ಐಪಿಒ ಶುದ್ಧ "ಆಫರ್ ಫಾರ್ ಸೇಲ್" (ಒಎಫ್‌ಎಸ್) ಆಗಿರುತ್ತದೆ, ಅಂದರೆ ಕಂಪನಿಯು ಯಾವುದೇ ಹೊಸ ಷೇರುಗಳನ್ನು ನೀಡುವುದಿಲ್ಲ. ಬದಲಾಗಿ, ಅಸ್ತಿತ್ವದಲ್ಲಿರುವ ಹೂಡಿಕೆದಾರರು ತಮ್ಮ ಪಾಲನ್ನು ಮಾರಾಟ ಮಾಡುತ್ತಾರೆ. ಈ ಐಪಿಒ ಮೂಲಕ ಕಂಪನಿಯು ಸುಮಾರು ₹12,000 ಕೋಟಿ ಸಂಗ್ರಹಿಸಲು ಯೋಜಿಸಿದೆ.
ಪಾಲು ಕಡಿಮೆ ಮಾಡಲಿರುವ ವಾಲ್‌ಮಾರ್ಟ್, ಇಬ್ಬರು ಹೂಡಿಕೆದಾರರು ಎಕ್ಸಿಟ್
ಫೋನ್‌ಪೇಯ ಅತಿದೊಡ್ಡ ಷೇರುದಾರರಾದ ಯುಎಸ್ ರಿಟೇಲ್ ದೈತ್ಯ ವಾಲ್‌ಮಾರ್ಟ್, ಈ ಐಪಿಒ ಮೂಲಕ ತನ್ನ ಪಾಲನ್ನು ಸುಮಾರು 9.06% ಅಥವಾ 45.9 ಮಿಲಿಯನ್ ಷೇರುಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಟೆಕ್ ದೈತ್ಯ ಮೈಕ್ರೋಸಾಫ್ಟ್ ಮತ್ತು ಹೂಡಿಕೆ ಸಂಸ್ಥೆ ಟೈಗರ್ ಗ್ಲೋಬಲ್ ಈ ಐಪಿಒ ಮೂಲಕ ಕಂಪನಿಯಿಂದ ಸಂಪೂರ್ಣವಾಗಿ ನಿರ್ಗಮಿಸಲಿವೆ. ಈ ಕಂಪನಿಗಳು ಒಟ್ಟಾಗಿ ಸುಮಾರು 4.7 ಮಿಲಿಯನ್ ಷೇರುಗಳನ್ನು ಮಾರಾಟ ಮಾಡುತ್ತವೆ. ಪ್ರಸ್ತುತ, ವಾಲ್ಮಾರ್ಟ್ ಫೋನ್‌ಪೇಯಲ್ಲಿ ಸುಮಾರು 71.77% ಪಾಲನ್ನು ಹೊಂದಿದೆ.
1.33 ಲಕ್ಷ ಕೋಟಿ ಮೌಲ್ಯದ ಕಂಪನಿ ಆಗಲಿದೆ ಫೋನ್‌ಪೇ
ಮಾರುಕಟ್ಟೆ ತಜ್ಞರ ಪ್ರಕಾರ, ಫೋನ್‌ಪೇ ತನ್ನ ಐಪಿಒ ಮೂಲಕ ಸುಮಾರು $15 ಬಿಲಿಯನ್ (ಸುಮಾರು ₹1.37 ಲಕ್ಷ ಕೋಟಿ) ಮೌಲ್ಯದ ಗುರಿಯನ್ನು ಹೊಂದಿದೆ. ಇದು ಸಂಭವಿಸಿದಲ್ಲಿ, ಪೇಟಿಎಂ ನಂತರ ಭಾರತೀಯ ಫಿನ್‌ಟೆಕ್ ವಲಯದಲ್ಲಿ ಇದು ಎರಡನೇ ಅತಿದೊಡ್ಡ ಐಪಿಒ ಆಗಲಿದೆ. ಕಂಪನಿಯು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಗೌಪ್ಯ ಮಾರ್ಗದ ಮೂಲಕ ಕರಡು ಪತ್ರಗಳನ್ನು ಸಲ್ಲಿಸಿತ್ತು, ಈಗ ಅದಕ್ಕೆ ಸೆಬಿಯಿಂದ ಹಸಿರು ನಿಶಾನೆ ಸಿಕ್ಕಿದೆ.
2026ರ ಮಧ್ಯದಲ್ಲಿ ಲಿಸ್ಟಿಂಗ್
ಸೆಬಿ ಅನುಮೋದನೆ ಪಡೆದ ನಂತರ, ಕಂಪನಿಯು ಈಗ ಕಂಪನಿಗಳ ನೋಂದಣಿ ಅಧಿಕಾರಿ (ಆರ್‌ಒಸಿ) ಗೆ ಆರ್‌ಎಚ್‌ಪಿ ಸಲ್ಲಿಸುತ್ತದೆ. ಫೋನ್‌ಪೇ 2026 ರ ಮಧ್ಯಭಾಗದಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಬಹುದು ಎಂದು ನಂಬಲಾಗಿದೆ. ಕೋಟಕ್ ಮಹೀಂದ್ರಾ ಕ್ಯಾಪಿಟಲ್, ಸಿಟಿ ಬ್ಯಾಂಕ್, ಮಾರ್ಗನ್ ಸ್ಟಾನ್ಲಿ ಮತ್ತು ಜೆಪಿ ಮಾರ್ಗನ್ ನಂತಹ ಪ್ರಮುಖ ಹೂಡಿಕೆ ಬ್ಯಾಂಕ್‌ಗಳು ಈ ಐಪಿಒ ಕುರಿತು ಸಲಹೆ ನೀಡುತ್ತಿವೆ.
ಕಡಿಮೆಯಾದ ನಷ್ಟ, ಆದಾಯ ಶೇ. 41ರಷ್ಟು ಏರಿಕೆ
IPO ಗೂ ಮುನ್ನ ಕಂಪನಿಯ ಆರ್ಥಿಕ ಸ್ಥಿತಿ ಸುಧಾರಿಸಿದೆ. 2024-25ನೇ ಆರ್ಥಿಕ ವರ್ಷದಲ್ಲಿ PhonePe ಆದಾಯವು ಶೇ. 41 ರಷ್ಟು ಹೆಚ್ಚಾಗಿ ₹7,148.6 ಕೋಟಿಗೆ ತಲುಪಿದೆ, ಕಳೆದ ವರ್ಷದ ₹5,064.1 ಕೋಟಿ ರೂಪಾಯಿ ಇತ್ತು. ಕಂಪನಿಯ ನಷ್ಟವೂ ₹1,720 ಕೋಟಿಗೆ ಇಳಿದಿದೆ. ESOP ವೆಚ್ಚಗಳನ್ನು ಹೊರತುಪಡಿಸಿ, ಹೊಂದಾಣಿಕೆಯ ಲಾಭವು ಐದು ಪಟ್ಟು ಹೆಚ್ಚಾಗಿ ₹630 ಕೋಟಿಗೆ ತಲುಪಿದೆ ಎಂದು ಕಂಪನಿ ಇತ್ತೀಚೆಗೆ ವರದಿ ಮಾಡಿದೆ.
ಯುಪಿಐ ಮಾರುಕಟ್ಟೆಯಲ್ಲಿ ಶೇ. 45ರಷ್ಟು ಪಾಲು
ಭಾರತೀಯ ಡಿಜಿಟಲ್ ಪೇಮೆಂಟ್ ಮಾರುಕಟ್ಟೆಯಲ್ಲಿ PhonePe ಪ್ರಾಬಲ್ಯ ಮುಂದುವರಿಸಿದೆ. ಡಿಸೆಂಬರ್ 2025 ರ ಹೊತ್ತಿಗೆ, UPI ವಹಿವಾಟುಗಳಲ್ಲಿ PhonePe ಸರಿಸುಮಾರು 45% ಮಾರುಕಟ್ಟೆ ಪಾಲನ್ನು ಹೊಂದಿತ್ತು.ಕಂಪನಿಯು 600 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ವ್ಯಾಪಾರಿಗಳಿಗೆ ಸೇವೆ ಸಲ್ಲಿಸುತ್ತದೆ. ಪ್ರತಿ ತಿಂಗಳು, ಸುಮಾರು 10 ಬಿಲಿಯನ್ ವಹಿವಾಟುಗಳು ಅದರ ವೇದಿಕೆಯಲ್ಲಿ ನಡೆಯುತ್ತವೆ.


