ಮಂಕಿಪಾಕ್ಸ್ ಚಿಕನ್ ಪಾಕ್ಸ್ ಗಿಂತ ಹೇಗೆ ಭಿನ್ನ? ಗುಣಲಕ್ಷಣಗಳೇನು?
ಕರೋನಾ ಪ್ರಕರಣಗಳು ಸಂಪೂರ್ಣವಾಗಿ ಮುಗಿದಿಲ್ಲ, ಈ ನಡುವೆ ಮತ್ತೊಂದು ಅಪರೂಪದ ರೋಗ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದೆ. ಈ ರೋಗಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. ಈ ರೋಗ ಇಲ್ಲಿಯವರೆಗೆ ಸುಮಾರು 70 ದೇಶಗಳಿಗೆ ಹರಡಿದೆ. ಮಂಕಿಪಾಕ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ತುಂಬಾನೆ ಇದೆ. ಈ ಮಂಕಿ ಪಾಕ್ಸ್ ನೋಡಿದಾಗ, ಚಿಕನ್ ಪಾಕ್ಸ್ ರೀತಿಯೇ ಇರುತ್ತದೆ, ಇವೆರಡೂ ತುಂಬಾನೆ ಎಚ್ಚರಿಕೆ ವಹಿಸಬೇಕಾದ ರೋಗವಾಗಿದೆ. ಆದಾಗ್ಯೂ, ಎರಡರ ನಡುವೆ ಅನೇಕ ವ್ಯತ್ಯಾಸಗಳಿವೆ. ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇಲ್ಲಿ ತಿಳಿಯಿರಿ.
ಚಿಕನ್ ಪಾಕ್ಸ್ ಮತ್ತು ಮಂಕಿಪಾಕ್ಸ್(Monkey pox) ನಡುವಿನ ವ್ಯತ್ಯಾಸ
ಆರ್ಥೋಪಾಕ್ಸ್ ವೈರಸ್ ನಿಂದಾಗಿ ಮಂಕಿಪಾಕ್ಸ್ ಹರಡುತ್ತೆ ಎಂದು ವೈದ್ಯರು ಹೇಳುತ್ತಾರೆ. ಹಾಗೆ, ಚಿಕನ್ ಪಾಕ್ಸ್ ವೆರಿಸೆಲ್ಲಾ-ಜೋಸ್ಟರ್ ವೈರಸ್ನಿಂದ ಹರಡುತ್ತೆ, ಇದು ಸಾಕಷ್ಟು ಸಾಂಕ್ರಾಮಿಕವಾಗಿದೆ. ಬೇಗನೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಮಂಕಿಪಾಕ್ಸ್ ಹೊಂದಿರುವ ರೋಗಿಗಳು 1 ರಿಂದ 5 ದಿನಗಳ ನಡುವೆ ದೇಹದ ಮೇಲೆ ದದ್ದುಗಳನ್ನು ಹೊಂದಲು ಪ್ರಾರಂಭಿಸುತ್ತಾರೆ. ಈ ದದ್ದುಗಳು ಮುಖದಿಂದ ಪ್ರಾರಂಭವಾಗುತ್ತೆ ಮತ್ತು ಕ್ರಮೇಣ ದೇಹದ ಇತರ ಭಾಗಗಳಿಗೆ ಹರಡಲು ಪ್ರಾರಂಭಿಸುತ್ತೆ . ಆದರೆ , ಚಿಕನ್ಪಾಕ್ಸ್(Chicken pox) ದದ್ದುಗಳು ಎದೆಯಿಂದ, ಹಿಂದೆ ಮತ್ತು ನಂತರ ಮುಖದಲ್ಲಿ ಕಾಣಿಸಿಕೊಳ್ಳುತ್ತದೆ, ಇದು ಕ್ರಮೇಣ ದೇಹದಾದ್ಯಂತ ಹರಡುತ್ತೆ.
ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಗೆ ಜ್ವರದಿಂದ(Fever) ಬಳಲುತ್ತಿರುವ 1 ರಿಂದ 5 ದಿನಗಳ ನಂತರ ದದ್ದುಗಳು ಕಾಣಿಸಿಕೊಳ್ಳುತ್ತವೆ. ಆದರೆ, ಚಿಕನ್ ಪಾಕ್ಸ್ ನಲ್ಲಿ ದದ್ದುಗಳು ಮೊದಲು ಕಾಣಿಸಿಕೊಳ್ಳುತ್ತೆ. ಸುಮಾರು 1 ರಿಂದ 2 ದಿನಗಳ ನಂತರ, ವ್ಯಕ್ತಿಗೆ ಜ್ವರ ಬರುತ್ತೆ.
ಮಂಕಿಪಾಕ್ಸ್ ನಲ್ಲಿ, ಲಿಂಫ್ ನೋಡ್ಸ್ ಸಾಕಷ್ಟು ಉರಿಯೂತವನ್ನು ನೀಡುತ್ತದೆ. ಆದರೆ, ಚಿಕನ್ ಪಾಕ್ಸ್ ನ ಲಿಂಫ್ ನೋಡ್ಸ್ ಊದಿಕೊಳ್ಳೋದಿಲ್ಲ. ಆದರೆ ಅದು ಮೂರರಿಂದ ಐದು ದಿನ ಹೆಚ್ಚಾಗುತ್ತಾ ಹೋಗುತ್ತದೆ. ನಂತರ ಕ್ರಮೇಣ ಒಣಗುತ್ತಾ ಬಂದಂತೆ ತುರಿಕೆ(Itching) ಪ್ರಾರಂಭವಾಗುತ್ತದೆ.
ಮಂಕಿಪಾಕ್ಸ್ ನ ಇನ್ಕ್ಯುಬೇಷನ್ ಪಿರಿಯಡ್ ಸುಮಾರು 5 ರಿಂದ 21 ದಿನಗಳು. ಆದರೆ, ಚಿಕನ್ ಪಾಕ್ಸ್ ನ ಇನ್ಕ್ಯುಬೇಷನ್ ಪಿರಿಯಡ್ 4 ರಿಂದ 7 ದಿನಗಳವರೆಗೆ ಇರುತ್ತೆ. ತಿನ್ನುವ ಆಹಾರದ ಕಡೆಗೆ ಗಮನ ಹರಿಸಿದರೆ ಈ ಸಮಸ್ಯೆ ಬೇಗನೆ ಗುಣಮುಖವಾಗುತ್ತೆ.
ಮಂಕಿಪಾಕ್ಸ್ ವೈರಸ್ ಹಾನಿಗೊಳಗಾದ ಚರ್ಮ, ಉಸಿರಾಟ ಮತ್ತು ಮ್ಯೂಕಸ್ ಮೆಂಬ್ರೇನ್ ಮೂಲಕ ದೇಹವನ್ನು ಪ್ರವೇಶಿಸಿದರೆ, ಚಿಕನ್ಪಾಕ್ಸ್ ವೈರಸ್ ಮುಖ್ಯವಾಗಿ ಉಸಿರಾಟದ(Breathing) ಮೂಲಕ ದೇಹವನ್ನು ಪ್ರವೇಶಿಸುತ್ತೆ. ಇದು ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ.