ಮಂಕಿಪಾಕ್ಸ್ ಪ್ರಕರಣ ದಿಢೀರ್ ಏರಿಕೆ, WHOನಿಂದ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ!
ಕೋವಿಡ್ ಬಳಿಕ ಇದೀಗ ವಿಶ್ವಆರೋಗ್ಯ ಸಂಸ್ಥೆ ಮತ್ತೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದೆ. ಇದೀಗ ಮಂಕಿಪಾಕ್ಸ್ ಪ್ರಕರಣಗಳ ಏರಿಕೆಯಿಂದ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಈಗಾಗಲೇ ಭಾರತದಲ್ಲಿ 3 ಪ್ರಕರಣಗಳು ಖಚಿತಗೊಂಡಿತ್ತು, ಆತಂಕ ಹೆಚ್ಚಾಗಿದೆ.
ನವದೆಹಲಿ(ಜು.23): ಕೋವಿಡ್ ಸ್ಫೋಟ ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇದಾದ ಬಳಿಕ ಚೇತರಿಸಿಕೊಂಡ ವಿಶ್ವನಿಧಾನವಾಗಿ ಚೇತರಿಕೆಯತ್ತ ಸಾಗಿತ್ತು. ಇದೀಗ ವಿಶ್ವದ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಏರಿಕೆಯಾಗುತ್ತಿದೆ. ಈ ಕುರಿತು ಈಗಾಗಲೇ ಹಲವು ಸಭೆ ನಡೆಸಿದ್ದ ವಿಶ್ವ ಆರೋಗ್ಯ ಸಂಸ್ಥೆ ಇಂದು ತಜ್ಞ ವೈದ್ಯರ ಜೊತೆ ಸಭೆ ನಡೆಸಿ ಮಹತ್ವದ ಘೋಷಣೆ ಮಾಡಿದೆ. ಮಂಕಿಪಾಕ್ಸ್ ಪ್ರಕರಣ ಏರಿಕೆಯಿಂದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದೆ. ಮಂಕಿಪಾಕ್ಸ್ ಪ್ರಕರಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಲವು ರಾಷ್ಟ್ರಗಳಲ್ಲಿ ಪ್ರಕರಣಗಳು ಹೊಸದಾಗಿ ಕಾಣಿಸಿಕೊಂಡಿದೆ. ಇದು ಮಾರಕವಾಗಬಲ್ಲ ಸಾಧ್ಯತೆ ದಟ್ಟವಾಗುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿ ಘೋಷಿಸುತ್ತಿದೆ ಎಂದು WHO ಡೈರೆಕ್ಟರ್ ಜನರಲ್ ಟೆಡ್ರೋಸ್ ಅದಮೊನ್ ಗೆಬ್ರಿಯಸೆಸ್ ಹೇಳಿದ್ದಾರೆ. ಮಂಕಿಪಾಕ್ಸ್ ಪ್ರಕರಣ ಇದೀಗ 70 ದೇಶದಲ್ಲಿ ಕಾಣಿಸಿಕೊಂಡಿದೆ. ನಿಯಂತ್ರಣ ಮೀರಿ ಮಂಕಿಪಾಕ್ಸ್ ಪ್ರಕರಣ ದೇಶಗಳನ್ನು ವ್ಯಾಪಿಸುತ್ತಿದೆ. ಈಗಾಗಲೇ 15,800ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ. ಆದರೆ ಮಾರಕ ವೈರಸ್ ಇದಾಗಿದ್ದು, ಅತೀವ ಎಚ್ಚರಿಕೆ ವಹಿಸುವ ಅಗತ್ಯವಿದೆ. ತೀವ್ರಗತಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಹರಡುತ್ತಿದೆ. ಆರಂಭದಲ್ಲೇ ಈ ಕುರಿತು ಎಚ್ಚರಿಕೆ ವಹಿಸದಿದ್ದರೆ ಎಲ್ಲಾ ದೇಶಕ್ಕೆ ಮಾರಕವಾಗಬುಹುದು ಎಂದು ಸುದ್ದಿಗೋಷ್ಠಿಯಲ್ಲಿ ಟೆಡ್ರೋಸ್ ಹೇಳಿದ್ದಾರೆ.
ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸುವ(global health emergency ) ಅನಿವಾರ್ಯತೆ ಇದೆ. ಇದರಿಂದ ಎಲ್ಲಾ ದೇಶಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿ ಕೈಮೀರಿದರೆ ಮಂಕಿಪಾಕ್ಸ್(monkeypox outbreak) ನಿಯಂತ್ರಣ ಮಾಡುವುದು ಸವಾಲಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಎಚ್ಚರಿಸಿದೆ. ಸದ್ಯ ಮಂಕಿಪಾಕ್ಸ್ ಪ್ರಕರಣಕ್ಕೆ ಯಾವುದೇ ವಿಶೇಷ ಚಿಕಿತ್ಸೆ ಇಲ್ಲ. ಮಂಕಿಪಾಕ್ಸ್ ಪ್ರಕರಣಕ್ಕೆ ಸೂಕ್ತ ಲಸಿಕೆಯೂ ಇಲ್ಲ. ಜ್ವರ ಸೇರಿದಂತೆ ಇತರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಿ ಮಂಕಿಪಾಕ್ಸ್ ಸೋಂಕಿತನನ್ನು ಅಪಾಯದಿಂದ ಪಾರು ಮಾಡಬಹುದು. ಹೀಗಾಗಿ ಸೋಂಕು ಹರಡದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಭಾರತದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ದೃಢ, ಕೇರಳದಲ್ಲಿ ಹೈ ಅಲರ್ಟ್!
ಭಾರತದಲ್ಲಿ 3 ಮಂಕಿಪಾಕ್ಸ್ ಪ್ರಕರಣ ಖಚಿತ
ದೇಶದಲ್ಲಿ(India Monkeypox Case) ಇದುವರೆಗೆ 3 ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಜೊತೆಗೆ ಎಲ್ಲಾ ಮೂರೂ ಪ್ರಕರಣಗಳು ಕೇರಳದಲ್ಲೇ(Kerala) ದೃಢಪಟ್ಟಿವೆ. ಮಲಪ್ಪುರಂ ಮೂಲದ ವ್ಯಕ್ತಿಯೊಬ್ಬರು ಜು.6ಕ್ಕೆ ಯುಎಇನಿಂದ ತವರಿಗೆ ಮರಳಿದ್ದರು. ಅವರಿಗೆ ಜು.13ಕ್ಕೆ ಜ್ವರ ಕಾಣಿಸಿಕೊಂಡಿತ್ತು. ಜು.15ರಂದು ಅವರಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಪತ್ತೆಯಾಗಿತ್ತು. ತಪಾಸಣೆ ವೇಳೆ ಅವರಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಸದ್ಯ ಅವರನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಆರೋಗ್ಯ ಸ್ಥಿರವಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಕೆಲಸ ನಡೆಯುತ್ತಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾಜ್‌ರ್ ಮಾಹಿತಿ ನೀಡಿದ್ದಾರೆ.
ಕೋವಿಡ್, ಮಂಕಿಪಾಕ್ಸ್ ಬಳಿಕ ಕೇರಳದಲ್ಲಿ ಸ್ವೈನ್ ಫ್ಲೂ ಪತ್ತೆ: 300 ಹಂದಿ ಹತ್ಯೆ
ಯುಎಇನಿಂದ ಮರಳಿದ್ದ ಕಣ್ಣೂರು ಮೂಲದ ವ್ಯಕ್ತಿಯೊಬ್ಬರಲ್ಲಿ ಜು.14ರಂದು ಸೋಂಕು ಖಚಿತಪಟ್ಟಿತ್ತು. ಅದು ದೇಶದ ಮೊದಲ ಪ್ರಕರಣವಾಗಿತ್ತು. ನಂತರ ದುಬೈನಿಂದ ಮರಳಿದ್ದ ಕಣ್ಣೂರು ಮೂಲದ ಇನ್ನೊಬ್ಬ ವ್ಯಕ್ತಿಯಲ್ಲೂ ಜು.18ರಂದು ಸೋಂಕು ದೃಢಪಟ್ಟಿತ್ತು. ಈ ಇಬ್ಬರು ಸೋಂಕಿತರ ಆರೋಗ್ಯ ಸದ್ಯ ಸ್ಥಿರವಾಗಿದೆ. ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಪ್ರತ್ಯೇಕವಾಗಿ ಇರಿಸಿ, ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.