ಮುಂಬೈನಲ್ಲಿ ನಡೆದ ದುರ್ಘಟನೆ ಕಲ್ಲಂಗಡಿ ಹಣ್ಣು ತಿನ್ನೋಕೆ ಭಯ ಹುಟ್ಟಿಸಿದೆ. ಬಿಸಿಲ ಬೇಗೆ ಹೆಚ್ಚಾಗ್ತಿದ್ದಂತೆ ಜನರು ಕಲ್ಲಂಗಡಿ ಹಣ್ಣನ್ನು ಹೆಚ್ಚು ತಿಂತಾರೆ. ಆದ್ರೆ ಸರಿಯಾಗಿ ನೋಡ್ದೆ ಸಿಕ್ಕ ಎಲ್ಲ ಕಲ್ಲಂಗಡಿ ಹಣ್ಣು ತಿಂದ್ರೆ ಜೀವಕ್ಕೆ ಅಪಾಯ. ಕಲ್ಲಂಗಡಿ ಹಣ್ಣನ್ನು ತಿನ್ನುವ ಮೊದಲು ಕೆಲವೊಂದು ವಿಷ್ಯದ ಬಗ್ಗೆ ತಿಳಿದಿರಿ.
ಇತ್ತೀಚಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಸಿಗುವ ಎಲ್ಲ ಆಹಾರ ಪದಾರ್ಥಗಳು ಕಲಬೆರಿಕೆ ಆಗ್ತಿವೆ. ಯಾವುದು ಅಸಲಿ, ಯಾವುದು ನಕಲಿ ಅನ್ನೋದನ್ನು ಪತ್ತೆ ಮಾಡೋದು ಕಷ್ಟವಾಗ್ತಿದೆ. ಇದಕ್ಕೆ ಕಲ್ಲಂಗಡಿ ಕೂಡ ಹೊರತಾಗಿಲ್ಲ. ಕಲ್ಲಂಗಡಿ ಹಣ್ಣಿಗೆ ಇಂಜೆಕ್ಷನ್ ಮಾಡಲಾಗುತ್ತೆ ಅಂತ ಅನೇಕರು ಹೇಳಿದ್ದನ್ನು ನೀವು ಕೇಳಿರಬಹುದು. ಇದು ಎಲ್ಲ ಕಡೆ ಇಲ್ಲವಾದ್ರೂ ಕೆಲವು ಕಡೆ ನಡೆಯುತ್ತಿದೆ. ಕಲ್ಲಂಗಡಿ ಹಣ್ಣನ್ನು ಕೆಂಪಾಗಿಸಲು, ಅತಿ ಬೇಗ ಹಣ್ಣು ಮಾಡಲು, ಹಾಳಾಗದಂತೆ ರಕ್ಷಿಸಲು, ಆಕರ್ಷಕವಾಗಿ ಕಾಣಲು ಇಂಜೆಕ್ಷನ್ ಮಾಡಲಾಗ್ತಿದೆ.
ಕಲ್ಲಂಗಡಿ ಹಣ್ಣು ತಿನ್ನುವಾಗ ಚೆಕ್ ಮಾಡಿ
ನೀವು ಪ್ರತಿ ಬಾರಿ ಮಾರುಕಟ್ಟೆಯಿಂದ ತಂದ ಕಲ್ಲಂಗಡಿ ಹಣ್ಣನ್ನು ಪರೀಕ್ಷೆ ಮಾಡ್ದೆ ತಿನ್ನಬೇಡಿ.
• ಕಲ್ಲಂಗಡಿ ಹಣ್ಣನ್ನು ಕತ್ತರಿಸಿದಾಗ ತುಂಬಾ ಗಾಢವಾದ ಕೆಂಪು ಬಣ್ಣ ಅಥವಾ ಎಲ್ಲ ಕಡೆ ಒಂದೇ ಬಣ್ಣ ಕಾಣಿಸ್ತಿದ್ರೆ ಜಾಗರೂಕರಾಗಿ.
• ನೀವು ಒಂದು ಗ್ಲಾಸ್ ಗೆ ನೀರನ್ನು ಹಾಕಿ, ಕಲ್ಲಂಗಡಿ ಹಣ್ಣನ್ನು ಚಿಕ್ಕ ತುಂಡಾಗಿ ಕತ್ತರಿಸಿ ನೀರಿಗೆ ಹಾಕಿ. ನೀರಿನಲ್ಲಿ ಕಲ್ಲಂಗಡಿ ತುಂಡು ಬಣ್ಣ ಬಿಟ್ಟುಕೊಂಡರೆ ಅದಕ್ಕೆ ಇಂಜೆಕ್ಷನ್ ಹಾಕಲಾಗಿದೆ ಎಂದರ್ಥ.
• ನೀವು ಕತ್ತರಿಸಿದ ಕಲ್ಲಂಗಡಿ ಮೇಲೆ ಒಂದು ಬಿಳಿಯ ಶುದ್ಧ ಬಟ್ಟೆಯಿಂದ ಉಜ್ಜಿದಾಗ್ಲೂ ನಿಮಗೆ ಬಣ್ಣದ ಸತ್ಯ ಗೊತ್ತಾಗುತ್ತದೆ. ಬಣ್ಣ, ಬಟ್ಟೆಗೆ ಹಿಡಿಯುತ್ತದೆ. ಆಗ ಕಲ್ಲಂಗಡಿಗೆ ಬಣ್ಣ ಬರಲು ಇಂಜೆಕ್ಷನ್ ಹಾಕಿದ್ದಾರೆ ಅಂತ ನೀವು ನಂಬಬಹುದು.
• ವಿಚಿತ್ರವಾದ ವಾಸನೆ ಅಥವಾ ಸಾಮಾನ್ಯಕ್ಕಿಂತ ಭಿನ್ನವಾದ ರುಚಿ ಹೊಂದಿದ್ರೆ ಅದನ್ನು ತಿನ್ನಬೇಡಿ.
• ಕಲ್ಲಂಗಡಿಯನ್ನು ಕತ್ತರಿಸುವ ಮೊದಲು ಶುದ್ಧ ನೀರಿನಿಂದ ತೊಳೆಯಿರಿ.
• ಮಾರ್ಕೆಟ್ ನಲ್ಲಿ ಈಗಾಗಲೇ ಕತ್ತರಿಸಿಟ್ಟ ಹಣ್ಣನ್ನು ತಿನ್ನಲು ಹೋಗ್ಬೇಡಿ. ಬ್ಯಾಕ್ಟೀರಿಯಾದ ಬೆಳವಣಿಗೆಗೆ ಹೆಚ್ಚು ಒಳಗಾಗುತ್ತದೆ.
• ನೀವು ಮಾರ್ಕೆಟ್ ನಿಂದ ತಂದ ಕಲ್ಲಂಗಡಿ ಹಣ್ಣು ತುಂಬಾ ಬಿಸಿಯಾಗಿರುತ್ತದೆ. ಅದನ್ನು ಸಾಮಾನ್ಯ ತಾಪಮಾನದಲ್ಲಿ ಇಡಬೇಕು. ಅರ್ಜೆಂಟ್, ಈಗ್ಲೇ ತಿನ್ನಬೇಕು ಎನ್ನುವವರು ಕೆಲ ಸಮಯ ಅದನ್ನು ಸಾಮಾನ್ಯ ನೀರಿನಲ್ಲಿ ನೆನೆಹಾಕಬೇಕು. ನಂತ್ರ ಕತ್ತರಿಸಿ ತಿನ್ನಬೇಕು.
Apricot Benefits: ಏಪ್ರಿಕಾಟ್ ಹಣ್ಣಿನ ಈ ಆರೋಗ್ಯ ಲಾಭಗಳನ್ನು ಮಿಸ್ ಮಾಡ್ಕೋಬೇಡಿ!
ಈ ಬಗ್ಗೆ ಗಮನ ಇರಲಿ
ಬೇಸಿಗೆಯಲ್ಲಿ ಆಹಾರ ವಿಷವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆಹಾರದಲ್ಲಿ ಬಹುಬೇಗ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಬೇಸಿಗೆಯಲ್ಲಿ ಆರೋಗ್ಯ ಸರಿಯಾಗಿರ್ಬೇಕೆಂದ್ರೆ ಸದಾ ಶುದ್ಧ ಹಾಗೂ ತಾಜಾ ಹಣ್ಣುಗಳನ್ನು ನೀವು ಸೇವನೆ ಮಾಡ್ಬೇಕು. ಹಣ್ಣು ತಿಂದ್ಮೇಲೆ ವಾಂತಿ, ತಲೆ ಸುತ್ತು, ಹೊಟ್ಟೆ ನೋವಿನಂತ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು.
'ಡೊಳ್ಳು ಹೊಟ್ಟೆ' ಇದೆಯೇ? ಹಾಗಿದ್ರೆ ಈ ಪಾನೀಯ ಕುಡಿಯಿರಿ, ಡುಮ್ಮ-ಡುಮ್ಮಿ
ಕಲ್ಲಂಗಡಿ ಲಾಭ
ಕಲ್ಲಂಗಡಿ ಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನರಮಂಡಲದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ 6 ಇದೆ. ಇದು ದೇಹವು ನೀವು ಸೇವಿಸುವ ಪ್ರೋಟೀನ್ಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿ ಮತ್ತು ನರಮಂಡಲದ ಕಾರ್ಯವನ್ನು ಹೆಚ್ಚಿಸುತ್ತದೆ. ಕಲ್ಲಂಗಡಿ ಶೇಕಡಾ 90 ಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತದೆ. ಕಲ್ಲಂಗಡಿ ನಿಮ್ಮನ್ನು ಹೈಡ್ರೀಕರಿಸುತ್ತದೆ.


