Black Sesame Ladoo: ಉಂಡೆ ಮಾಡಲು ಅಡುಗೆ ಮನೆಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯಬೇಕು ಅಥವಾ ನೂರಾರು ಸಾಮಗ್ರಿಗಳು ಬೇಕು ಎಂದೇನಿಲ್ಲ. ಕೇವಲ 5-6 ಪದಾರ್ಥಗಳನ್ನು ಬಳಸಿ ಅತಿ ಸುಲಭವಾಗಿ ಮಾಡಬಹುದಾದ ಪೌಷ್ಟಿಕಾಂಶದ ಗಣಿಯೇ ಈ 'ಕಪ್ಪು ಎಳ್ಳಿನ ಉಂಡೆ'.

ಇಂದಿನ ಒತ್ತಡದ ಜೀವನಶೈಲಿ ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗಿ ಕೂದಲು ಉದುರುವುದು, ಚರ್ಮದ ಕಾಂತಿ ಕಡಿಮೆಯಾಗುವುದು ಹಾಗೂ ಮಹಿಳೆಯರಲ್ಲಿ PCOD ಯಂತಹ ಹಾರ್ಮೋನ್ ಸಮಸ್ಯೆಗಳು ಸರ್ವಸಾಮಾನ್ಯವಾಗಿವೆ. ಇವೆಲ್ಲದಕ್ಕೂ ಒಂದೇ ಒಂದು ಲಡ್ಡುವಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಪ್ರಸಿದ್ಧ ಶೆಫ್ ಅರುಣಾ ವಿಜಯ್. ಸಕ್ಕರೆ ಅಥವಾ ಬೆಲ್ಲವನ್ನು ಬಳಸದೆ, ಕೇವಲ ನೈಸರ್ಗಿಕ ಪೋಷಕಾಂಶಗಳನ್ನು ಬಳಸಿ ಅವರು ತಯಾರಿಸಿದ ಈ ಕಪ್ಪು ಎಳ್ಳಿನ ಲಡ್ಡು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೋಷಕಾಂಶಗಳ ಗಣಿ
ಈ ಲಡ್ಡುಗಳಲ್ಲಿ ಆರೋಗ್ಯಕರ ಕೊಬ್ಬುಗಳು (Good Fats), ಅಮೈನೋ ಆಮ್ಲಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಲಡ್ಡುಗಳಲ್ಲಿ ಬಳಸಿರುವ ಕಪ್ಪು ಎಳ್ಳು ಕ್ಯಾಲ್ಸಿಯಂನ ಗಣಿಯಾಗಿದ್ದು, ಮೂಳೆಗಳ ಆರೋಗ್ಯಕ್ಕೆ ಉತ್ತಮ. ಹಾಗೆಯೇ ಅಗಸೆ ಬೀಜ (Flax Seeds)ದಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ಫೈಬರ್ ಹೇರಳವಾಗಿದೆ. ದಿನಕ್ಕೊಂದು ಲಡ್ಡು ಸೇವಿಸುವುದರಿಂದ ಆಯಾಸ ದೂರವಾಗುತ್ತದೆ, ಹಾರ್ಮೋನ್ ಸಮತೋಲನದಲ್ಲಿರುತ್ತದೆ ಮತ್ತು ಕೂದಲು ಹಾಗೂ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಬೆಳೆಯುವ ಮಕ್ಕಳಿಗೆ ದಿನಕ್ಕೊಂದು ಲಡ್ಡು ನೀಡುವುದರಿಂದ ಅವರ ಸ್ಮರಣಶಕ್ತಿ ಮತ್ತು ಮೂಳೆಗಳ ಬಲ ಹೆಚ್ಚಾಗುತ್ತದೆ.

ಎಳ್ಳಿನ ಲಡ್ಡಿಗೆ ಬೇಕಾಗುವ ಸಾಮಗ್ರಿಗಳು

ಶುದ್ಧ ತುಪ್ಪ-1 ಟೇಬಲ್ ಚಮಚ
ಕಪ್ಪು ಎಳ್ಳು - ಅರ್ಧ ಕಪ್
ಅಗಸೆ ಬೀಜ - ಕಾಲು ಕಪ್
ವಾಲ್‌ನಟ್ಸ್ (Walnuts) - ಅರ್ಧ ಕಪ್
ಕುಂಬಳಕಾಯಿ ಬೀಜ (Pumpkin seeds) - 30 ರಿಂದ 40 ಗ್ರಾಂ
ಬೀಜ ತೆಗೆದ ಖರ್ಜೂರ - 12

ತಯಾರಿಸುವ ವಿಧಾನ

*ಮೊದಲಿಗೆ ದಪ್ಪ ತಳದ ಬಾಂಡ್ಲಿಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಕಪ್ಪು ಎಳ್ಳು, ಅಗಸೆ ಬೀಜ, ವಾಲ್‌ನಟ್ಸ್ ಮತ್ತು ಕುಂಬಳಕಾಯಿ ಬೀಜಗಳನ್ನು ಹಾಕಿ ಸಣ್ಣ ಉರಿಯಲ್ಲಿ 3-4 ನಿಮಿಷ ಹೊಂಬಣ್ಣ ಬರುವವರೆಗೆ ಹುರಿಯಿರಿ. ಘಮಘಮಿಸುವ ವಾಸನೆ ಬರುವವರೆಗೆ ಕೈ ಆಡಿಸುತ್ತಿರಿ.
*ಹುರಿದ ಮಿಶ್ರಣವನ್ನು ಒಂದು ತಟ್ಟೆಗೆ ಹಾಕಿ ಪೂರ್ತಿಯಾಗಿ ತಣ್ಣಗಾಗಲು ಬಿಡಿ.
*ಈಗ ಮಿಕ್ಸಿ ಜಾರ್‌ಗೆ ಬೀಜ ತೆಗೆದ ಖರ್ಜೂರಗಳು ಮತ್ತು ತಣ್ಣಗಾದ ಬೀಜಗಳ ಮಿಶ್ರಣವನ್ನು ಹಾಕಿ ಸ್ವಲ್ಪ ತರಿತರಿಯಾಗಿ (Crunchy) ರುಬ್ಬಿಕೊಳ್ಳಿ. ಖರ್ಜೂರದ ಜಿಗುಟುತನದಿಂದ ಮಿಶ್ರಣವು ಉಂಡೆ ಕಟ್ಟಲು ಹದವಾಗಿ ಬರುತ್ತದೆ.
*ಈ ಮಿಶ್ರಣದಿಂದ ನಿಮಗೆ ಬೇಕಾದ ಗಾತ್ರದ ಉಂಡೆಗಳನ್ನು ತಯಾರಿಸಿ. ಲಡ್ಡು ಕಟ್ಟಿದ ನಂತರ 10-15 ನಿಮಿಷ ಗಾಳಿಗೆ ಬಿಟ್ಟರೆ ಅವು ಚೆನ್ನಾಗಿ ಗಟ್ಟಿಯಾಗುತ್ತವೆ.
*ಈ ಲಡ್ಡುಗಳನ್ನು ಗಾಳಿಯಾಡದ ಡಬ್ಬದಲ್ಲಿ (Airtight container) ಶೇಖರಿಸಿಡಿ. ಇವು ಸಾಮಾನ್ಯ ತಾಪಮಾನದಲ್ಲಿ 10 ದಿನಗಳವರೆಗೆ ಕೆಡದೆ ಇರುತ್ತವೆ.
*ಒಂದು ವೇಳೆ ಉಂಡೆ ಕಟ್ಟುವಾಗ ಮಿಶ್ರಣವು ತುಂಬಾ ಒಣಗಿದಂತೆ (Dry) ಅನಿಸಿದರೆ, ಇನ್ನೂ ಎರಡು ಮೆತ್ತನೆಯ ಖರ್ಜೂರಗಳನ್ನು ಜಜ್ಜಿ ಸೇರಿಸಿ ಅಥವಾ ಸ್ವಲ್ಪ ಉಗುರು ಬೆಚ್ಚಗಿನ ತುಪ್ಪವನ್ನು ಬೆರೆಸಿಕೊಳ್ಳಿ. ಇದರಿಂದ ಲಡ್ಡುಗಳು ಸುಲಭವಾಗಿ ಮತ್ತು ಪರ್ಫೆಕ್ಟ್ ಆಗಿ ಬರುತ್ತವೆ. 

ಗಮನಿಸಿ
*ಕಪ್ಪು ಎಳ್ಳು ಬೇಗನೆ ಸೀದು ಹೋಗುವ ಸಾಧ್ಯತೆ ಇರುತ್ತದೆ. ಎಳ್ಳು ಚಟಪಟ ಎಂದು ಶಬ್ದ ಮಾಡಲು ಶುರುವಾದ ತಕ್ಷಣ ಸ್ಟವ್ ಆಫ್ ಮಾಡಿ. ಅತಿಯಾಗಿ ಹುರಿದರೆ ಲಡ್ಡು ಕಹಿಯಾಗಬಹುದು.
*ಈ ರೆಸಿಪಿಗೆ ಅತಿ ಮೆತ್ತಗಿರುವ ಖರ್ಜೂರಗಳನ್ನು ಬಳಸಿದರೆ ಉಂಡೆ ಕಟ್ಟಲು ಸುಲಭವಾಗುತ್ತದೆ ಮತ್ತು ತುಪ್ಪದ ಬಳಕೆ ಕಡಿಮೆ ಮಾಡಬಹುದು.
*ಮಿಶ್ರಣವನ್ನು ಪೂರ್ತಿ ನೈಸ್ ಆಗಿ ಪೌಡರ್ ಮಾಡಬೇಡಿ. ಸ್ವಲ್ಪ ತರಿತರಿಯಾಗಿದ್ದರೆ (Coarse powder) ತಿನ್ನುವಾಗ ಬೀಜಗಳ 'ಕ್ರಂಚಿ' ರುಚಿ ಸಿಗುತ್ತದೆ.

View post on Instagram