ಅಣಬೆಗಳು (Mushrooms) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ನಮ್ಮ ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಆದರೆ ಕಾಡಿನಲ್ಲಿ ಬೆಳೆಯುವ ಕೆಲವು ಅಣಬೆಗಳು ತುಂಬಾನೇ ಡೇಂಜರ್. ಅದರಲ್ಲಿ 'ಡೆತ್ ಕ್ಯಾಪ್' (Death Cap) ಅಣಬೆ ತಿಂದರೆ ಸಾವು ಖಚಿತ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

Death Cap Mushrooms: ಈ ಅಣಬೆ ತಿಂದರೆ ಸಾವು ಗ್ಯಾರಂಟಿ, ಒಂದು ಸಣ್ಣ ತುಂಡು ಸಾಕು!

ನೋಡಲು ನಾವು ಮಾರ್ಕೆಟ್‌ನಲ್ಲಿ ಖರೀದಿಸುವ ಸಾಮಾನ್ಯ ಅಣಬೆಗಳಂತೆಯೇ ಇವು ಕಾಣಿಸುತ್ತವೆ. ಆದರೆ ಇದು ಪ್ರಪಂಚದ ಅತ್ಯಂತ ಅಪಾಯಕಾರಿ ಅಣಬೆ. ಇದರ ಹೆಸರು 'ಡೆತ್ ಕ್ಯಾಪ್ ಮಶ್ರೂಮ್'. ವೈಜ್ಞಾನಿಕವಾಗಿ ಇದನ್ನು 'ಅಮಾನಿಟಾ ಫಾಲೋಯ್ಡೆಸ್' (Amanita phalloides) ಎಂದು ಕರೆಯುತ್ತಾರೆ.

ಪ್ರಪಂಚದಾದ್ಯಂತ ಅಣಬೆ ವಿಷದಿಂದ ಸಾಯುವವರಲ್ಲಿ ಶೇ.90 ರಷ್ಟು ಜನ ಇದೇ ಅಣಬೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಿಳಿ ಹಳದಿ ಮತ್ತು ಹಸಿರು ಬಣ್ಣದಲ್ಲಿರುವ ಈ ಅಣಬೆಯನ್ನು ಎಷ್ಟೇ ಚೆನ್ನಾಗಿ ಬೇಯಿಸಿದರೂ, ಹುರಿದರೂ ಅಥವಾ ಒಣಗಿಸಿದರೂ ಇದರೊಳಗಿನ ವಿಷದ ಪ್ರಮಾಣ ಸ್ವಲ್ಪವೂ ಕಡಿಮೆಯಾಗುವುದಿಲ್ಲ.

ಕೇವಲ ಅರ್ಧ ತುಂಡು ತಿಂದರೂ ಸಾಕು, ಮನುಷ್ಯನ ಪ್ರಾಣ ಹೋಗುವುದು ಗ್ಯಾರಂಟಿ. ಅಷ್ಟೊಂದು ಭೀಕರ ವಿಷ ಇದರಲ್ಲಿದೆ.

ಡೆತ್ ಕ್ಯಾಪ್ ಅಣಬೆ ತಿಂದ ತಕ್ಷಣ ದೇಹದಲ್ಲಿ ಹಲವು ಬದಲಾವಣೆಗಳು ಶುರುವಾಗುತ್ತವೆ. ಇದರಲ್ಲಿರುವ 'ಅಮಾಟಾಕ್ಸಿನ್ಸ್' (Amatoxins) ಎಂಬ ಭೀಕರ ವಿಷಕಾರಿ ವಸ್ತುಗಳು ದೇಹದ ಜೀವಕೋಶಗಳ ಕೆಲಸವನ್ನು ಹಾಳುಮಾಡುತ್ತವೆ. ತಿಂದ 6 ರಿಂದ 12 ಗಂಟೆಗಳ ನಂತರ ವಿಪರೀತ ಹೊಟ್ಟೆನೋವು, ವಾಂತಿ, ಭೇದಿ ಶುರುವಾಗಿ ದೇಹ ಸುಸ್ತಾಗುತ್ತದೆ. ಮರುದಿನ ವಾಂತಿ ಕಡಿಮೆಯಾಗಿ, ರೋಗಿ ಗುಣಮುಖನಾಗುತ್ತಿದ್ದಾನೆ ಎಂಬ ಭ್ರಮೆ ಹುಟ್ಟಿಸುತ್ತದೆ. ಆದರೆ ಒಳಗಡೆ ಆ ವಿಷ ಸದ್ದಿಲ್ಲದೆ ಲಿವರ್ ಮತ್ತು ಕಿಡ್ನಿಗಳ ಜೀವಕೋಶಗಳನ್ನು ಸಂಪೂರ್ಣವಾಗಿ ನಾಶಮಾಡುತ್ತಿರುತ್ತದೆ.

ಕಾಡಿನಲ್ಲಿ ಸಿಗುವ ಅಣಬೆಗಳ ಬಗ್ಗೆ ಎಚ್ಚರ

ಕೊನೆಯ ಹಂತ ತಲುಪುವಷ್ಟರಲ್ಲಿ ಪರಿಸ್ಥಿತಿ ಸಂಪೂರ್ಣ ಕೈಮೀರಿರುತ್ತದೆ. ಲಿವರ್ ಮತ್ತು ಕಿಡ್ನಿಗಳು ಕೆಲಸ ಮಾಡುವುದನ್ನೇ ನಿಲ್ಲಿಸುತ್ತವೆ. ಕಾಮಾಲೆ ರೋಗ ಬರುವುದು, ದೇಹದ ಒಳಗೆ ರಕ್ತಸ್ರಾವ ಶುರುವಾಗಿ ರೋಗಿಗಳು ಕೋಮಾಗೆ ಹೋಗುತ್ತಾರೆ. ಸರಿಯಾದ ಸಮಯಕ್ಕೆ ತುರ್ತು ಚಿಕಿತ್ಸೆ ಸಿಗದಿದ್ದರೆ ಸಾವು ಖಚಿತ. ಕಾಡಿನಲ್ಲಿ ಮರಗಳ ಬುಡದಲ್ಲಿ ಬೆಳೆಯುವ ಈ 'ಡೆತ್ ಕ್ಯಾಪ್' ಅಣಬೆಗಳನ್ನು ಸಾಮಾನ್ಯ ಅಣಬೆಗಳೆಂದು ತಪ್ಪಾಗಿ ತಿಳಿದು ಎಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕಾಡಿನಲ್ಲಿ ಸಿಗುವ ಅಪರಿಚಿತ ಅಣಬೆಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.