Papanna Mutton Stall: ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ‘ಪಾಪಣ್ಣ ಮಟನ್ ಸ್ಟಾಲ್’ಗೆ ಬರೋಬ್ಬರಿ 70 ವರ್ಷಗಳ ಇತಿಹಾಸವಿದೆ. 1957ರಲ್ಲಿ ಆರಂಭವಾದ ಈ ಅಂಗಡಿಯಲ್ಲಿ ಹಬ್ಬಗಳ ದಿನಗಳಲ್ಲಿ ಅರ್ಧ ಕಿಲೋಮೀಟರ್‌ವರೆಗೂ ಕ್ಯೂ ಇರುತ್ತದೆ. ಟೋಲ್ ಕಟ್ಟಿಕೊಂಡು ದೂರದೂರುಗಳಿಂದ ಗ್ರಾಹಕರು ಬರುವ ಈ ಪ್ರಸಿದ್ಧ ಮಟನ್ ಅಂಗಡಿಯ ರೋಚಕ ಕಥೆ ಇಲ್ಲಿದೆ.

ಬೆಂಗಳೂರು: ‘ಪಾಪಣ್ಣ ಅಂದ್ರೆ ಮಟನ್, ಮಟನ್ ಅಂದ್ರೆ ಪಾಪಣ್ಣ’ ಎಂಬಷ್ಟರ ಮಟ್ಟಿಗೆ ರಾಜಧಾನಿಯಲ್ಲಿ ಖ್ಯಾತಿ ಗಳಿಸಿರುವ ಮೈಸೂರು ರಸ್ತೆಯ ಬ್ಯಾಟರಾಯನಪುರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆ ಇರುವ ‘ಪಾಪಣ್ಣ ಮಟನ್ ಸ್ಟಾಲ್’ಗೆ ಇದೀಗ ಸುಮಾರು 70 ವರ್ಷಗಳ ಸುದೀರ್ಘ ಇತಿಹಾಸವಿದೆ. 1957ರಲ್ಲಿ ಪಾಪಣ್ಣ ಅವರು ಆರಂಭಿಸಿದ ಈ ಅಂಗಡಿಯನ್ನು ಸದ್ಯ ಅವರ ಪುತ್ರ ಮಾಣಿಕ್ಯಂ (ಮಣಿ) ಹಾಗೂ ಕುಟುಂಬದ ಮುಂದಿನ ತಲೆಮಾರು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಗುಣಮಟ್ಟದಲ್ಲಿ ಎಳ್ಳಷ್ಟೂ ರಾಜಿಯಾಗದ ಕಾರಣ ದಶಕಗಳು ಕಳೆದರೂ ಇಲ್ಲಿನ ಬೇಡಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ.

ಕುಟುಂಬಕ್ಕಾಗಿ ಶುರುವಾಗಿ ಹೆಮ್ಮರವಾದ ಕಥೆ

ಮೂಲತಃ ದೀವಟಿಗೆ ರಾಮನಹಳ್ಳಿಯವರಾದ (ಈಗಿನ ದೀಪಾಂಜಲಿ ನಗರ) ಪಾಪಣ್ಣ ಅವರು, ಆರಂಭದಲ್ಲಿ ತಮ್ಮ ನಾಲ್ಕೈದು ಕುಟುಂಬಗಳಿಗಾಗಿ ಕಂಟೋನ್ಮೆಂಟ್ ಭಾಗದಿಂದ ಕುರಿ ತಂದು ಹಂಚಿಕೊಳ್ಳುತ್ತಿದ್ದರು. ಸುತ್ತಮುತ್ತಲಿನವರ ಬೇಡಿಕೆ ಹೆಚ್ಚಾದಂತೆ 1957ರಲ್ಲಿ ಅಂಗಡಿ ಪ್ರಾರಂಭವಾಯಿತು. 1985-90ರ ದಶಕದಿಂದ ವ್ಯಾಪಾರ ಭಾರಿ ವೇಗ ಪಡೆಯಿತು. ವಿಶೇಷವೆಂದರೆ, ಇವರಿಗೆ ಬೇರೆಲ್ಲೂ ಶಾಖೆಗಳಿಲ್ಲ. ಕೋವಿಡ್ ಸಮಯದಲ್ಲಿ ಸಾಮಾಜಿಕ ಅಂತರಕ್ಕಾಗಿ ಪಕ್ಕದಲ್ಲೇ ಮತ್ತೊಂದು ಸ್ವಂತ ಕಟ್ಟಡ ನಿರ್ಮಿಸಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪಾಪಣ್ಣ ಅವರು 2010ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದ ಬಳಿಕ, ಕುಟುಂಬಸ್ಥರು ಅದೇ ಶ್ರದ್ಧೆಯಿಂದ ವ್ಯಾಪಾರ ಮುಂದುವರಿಸಿದ್ದಾರೆ.

ವಿಶೇಷವೆಂದರೆ, ಕುಟುಂಬದವರೆಲ್ಲರೂ ಉನ್ನತ ಶಿಕ್ಷಣ ಪಡೆದಿದ್ದು, ಮಾಣಿಕ್ಯಂ ಅವರ ಸಹೋದರರು ಸರ್ಕಾರಿ ಅಧಿಕಾರಿಗಳಾಗಿದ್ದರು (ಐಟಿ, ಸಿಟಿಒ). ಇವರ ಇಬ್ಬರು ಹೆಣ್ಣುಮಕ್ಕಳು ಡಾಕ್ಟರ್ ಹಾಗೂ ಇಂಜಿನಿಯರ್ ಆಗಿದ್ದಾರೆ. ಆದರೆ ಅವರು ಈ ವೃತ್ತಿಗೆ ಬಂದಿಲ್ಲ, ತಂದೆಯೊಂದಿಗೆ ನಿಂತು ಅಂಗಡಿ ಬೆಳೆಸಿದ ಮಾಣಿಕ್ಯಂ, ಸದ್ಯ ಅಣ್ಣನ ಮಗನ ಜೊತೆಗೂಡಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

ಗುಣಮಟ್ಟಕ್ಕೆ ಮೊದಲ ಆದ್ಯತೆ

ಈ ಅಂಗಡಿಯಲ್ಲಿ ಕೇವಲ ಮಟನ್ ಮಾತ್ರ ಮಾರಾಟವಾಗುತ್ತದೆ (ಚಿಕನ್ ಅಥವಾ ಫಿಶ್ ಇಲ್ಲಿಲ್ಲ). ಶೇ. 98ರಷ್ಟು ಗಂಡು ಕುರಿ (ಟಗರು) ಮತ್ತು ಗಂಡು ಮೇಕೆ (ವಾತ) ಮಾಂಸವನ್ನು ಮಾತ್ರ ನೀಡಲಾಗುತ್ತದೆ. ಕಡಿಮೆ ಕೊಬ್ಬು ಹಾಗೂ ಉತ್ತಮ ಗುಣಮಟ್ಟಕ್ಕಾಗಿ ಸದ್ಯ ಗೌರಿಬಿದನೂರಿನಿಂದ ಏಜೆಂಟ್‌ಗಳ ಮೂಲಕ ಕುರಿಗಳನ್ನು ತರಿಸಲಾಗುತ್ತದೆ. ಸಮಾಧಾನ ಇಲ್ಲದ ಕುರಿಗಳು ಬಂದರೆ ತಕ್ಷಣವೇ ತಿರಸ್ಕರಿಸಿ ಗ್ರಾಹಕರಿಗೆ ಉತ್ತಮ ಮಾಂಸವನ್ನೇ ನೀಡುವುದು ಇವರ ನಿಯಮ. 24-25 ಮಂದಿ ಸಿಬ್ಬಂದಿ ಬೆಳಗಿನ ಜಾವ 3:30ಕ್ಕೇ ಕೆಲಸ ಆರಂಭಿಸಿ, 5 ಗಂಟೆಗೆ ಕೌಂಟರ್ ತೆರೆಯುತ್ತಾರೆ. ಅನುಭವಿ ಕಟಿಂಗ್ ಮಾಸ್ಟರ್‌ಗಳು ಒಬ್ಬೊಬ್ಬರೇ ದಿನಕ್ಕೆ 500 ಕೆಜಿಯವರೆಗೂ ಮಾಂಸ ಕತ್ತರಿಸಿ ಗ್ರಾಹಕರಿಗೆ ನೀಡುತ್ತಾರೆ. ತೊಡೆ ಮಾಂಸ, ಚಾಪ್ಸ್, ಲಿವರ್ ಹಾಗೂ ಮಿಷಿನ್ ಕೈಮಾ ಇಲ್ಲಿನ ವಿಶೇಷ (ಮಟನ್ ಕೆಜಿಗೆ ₹900, ತಲೆ-ಕಾಲು ಕೆಜಿಗೆ ₹350).

ಅರ್ಧ ಕಿ.ಮೀ ಕ್ಯೂ ಮತ್ತು ದಾಖಲೆ ಆರ್ಡರ್

ಸಾಮಾನ್ಯ ಭಾನುವಾರಗಳಂದು ಇಲ್ಲಿ 100ರಿಂದ 150 ಕುರಿಗಳು ಮಾರಾಟವಾಗುತ್ತವೆ. ಯುಗಾದಿ, ಆಯುಧಪೂಜೆ ಹಾಗೂ ಬೀಗರ ಊಟದ ದಿನಗಳಲ್ಲಿ ಅರ್ಧ ಕಿಲೋಮೀಟರ್‌ವರೆಗೂ ಕ್ಯೂ ಇರುತ್ತದೆ. ಆದರೆ ಏಕಾದಶಿ, ಅಮಾವಾಸ್ಯೆ, ಪೌರ್ಣಮಿಯಂತಹ ದಿನಗಳಲ್ಲಿ ವ್ಯಾಪಾರ ಕಡಿಮೆ ಇರುತ್ತದೆ. ಎಷ್ಟೇ ಪರಿಚಯವಿದ್ದರೂ ಇಲ್ಲಿ ಸಾಲಿನಲ್ಲಿ ನಿಂತೇ ಮಟನ್ ಪಡೆಯಬೇಕು. ಹಿಂದೆ ನಟ ರವಿಚಂದ್ರನ್ ಅವರಿಗೆ 1,000 ಕೆಜಿ ಹಾಗೂ ಎಂಎಲ್‌ಎ ಲೇಔಟ್ ಕೃಷ್ಣಪ್ಪ ಅವರ ಕಾರ್ಯಕ್ರಮಕ್ಕೆ ಬರೋಬ್ಬರಿ 12,000 ಕೆಜಿ (800 ಕುರಿ) ಮಟನ್ ಪೂರೈಸಿದ ದಾಖಲೆಯೂ ಈ ಅಂಗಡಿಗಿದೆ. ವೈಟ್‌ಫೀಲ್ಡ್‌ನಿಂದ ಅಂದರೆ 20 ಕಿ.ಮೀ ದೂರದಿಂದ, ಸದಾಶಿವನಗರದಿಂದ ಹಾಗೂ ಕೆಂಗೇರಿಯಿಂದ ನೈಸ್ ರೋಡ್ ಟೋಲ್ ಕಟ್ಟಿ ಬರುವ ಗ್ರಾಹಕರಷ್ಟೇ ಅಲ್ಲದೆ, 80 ವರ್ಷದ ಹಿರಿಯರೂ ತಲೆಮಾರುಗಳಿಂದ ಇಲ್ಲಿಗೆ ಬರುತ್ತಿರುವುದು ಈ ಅಂಗಡಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.