ಶ್ರಾವಣ ಮಾಸದ ಕೊನೆಯ ಅಮಾವಾಸ್ಯೆಯಂದು ಕೋಲಾರದ ಅಧಿದೇವತೆ ಶ್ರೀ ಕೋಲಾರಮ್ಮ ದೇವಿಗೆ, ಬರದ ನಾಡಿಗೆ ಮಳೆಗಾಗಿ ವಿಶೇಷ ಸ್ವರ್ಣ ಕಮಲದ ಅಲಂಕಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಅಲಂಕಾರಕ್ಕಾಗಿ ಕೇರಳದ ತಿರುವನಂತಪುರದಿಂದ ವಿಮಾನದ ಮೂಲಕ 10,108 ಕೆಂದಾವರೆ ಹೂವುಗಳನ್ನು ತರಿಸಲಾಗಿದೆ.
ಕೋಲಾರ: (ಸೆ.10): ಕೋಲಾರದ ಅಧಿದೇವತೆ ಶ್ರೀ ಕೋಲಾರಮ್ಮ ದೇವಿಗೆ ಸೆ. 11ರಂದು ಶ್ರಾವಣ ಮಾಸದ ಕೊನೆಯ ಅಮಾವಾಸ್ಯೆ ಪ್ರಯುಕ್ತ ಮತ್ತು ಈ ಬರದ ನಾಡಿಗೆ ವರುಣನ ಕೃಪೆಗಾಗಿ ವಿಶೇಷ ಸ್ವರ್ಣ ಕಮಲದ ಅಲಂಕಾರ ಹಮ್ಮಿಕೊಳ್ಳಲಾಗಿದೆ.
ಕೋಲಾರಮ್ಮನಿಗೆ ವಿಮಾನದ ಮೂಲಕ ತಂದ ಕೆಂದಾವರೆ ಹೂಗಳು!
ಕೇರಳ ರಾಜ್ಯದ ತಿರುವನಂತಪುರದಿಂದ ಕೆಂದಾವರೆ ಹೂವುಗಳನ್ನು ವಿಮಾನದ ಮೂಲಕ ತರಿಸಲಾಗಿದೆ. ಸುಮಾರು 10,108 ತಾವರೆ ಮೊಗ್ಗುಗಳನ್ನು ಈ ಅಲಂಕಾರಕ್ಕಾಗಿ ಬಳಸಲಾಗುತ್ತಿರುವುದು ವಿಶೇಷವಾಗಿದೆ. ಈ ಹೂವುಗಳು ಕೋಲಾರ ನಗರವಾಸಿಗಳಿಗೆ ದರ್ಶನ ಭಾಗ್ಯ ನೀಡಲಿವೆ.
ಈ ವಿಶೇಷ ಅಲಂಕಾರದ ಸೇವೆ ಶ್ರೀ ಸೋಮಶೇಖರ್ ದೀಕ್ಷಿತ್ ಮತ್ತು ವಿನಯ್ ದೀಕ್ಷಿತ್ ಅವರ ನೇತೃತ್ವದಲ್ಲಿ ಹಲವಾರು ಸ್ವಯಂಸೇವಕ ಭಕ್ತರು ನೆರವೇರಿಸುತ್ತಿದ್ದಾರೆ. ಅಮ್ಮನವರಿಗೆ ಹೂವಿನ ಸರಬರಾಜನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಗಲ್ ಪೇಟೆಯ ಕೃಷ್ಣಪ್ಪ ಮತ್ತು ಅವರ ಮಗ ಸೂರಿ ಉತ್ಸುಕರಾಗಿದ್ದಾರೆ.
ದೇವಿಯ ಅಲಂಕಾರ, ಅಭಿಷೇಕ ಮತ್ತು ಇತರ ಸೇವೆಗಳನ್ನು ಮಾಡಿಸಲು ಭಕ್ತರು ಅರ್ಚಕರನ್ನು ಸಂಪರ್ಕಿಸಬಹುದಾಗಿದೆ.
ಸ್ವರ್ಣ ಕಮಲದ ಅಲಂಕಾರ
ಈ ಸ್ವರ್ಣ ಕಮಲದ ಅಲಂಕಾರ ಈ ಹಿಂದೆ ಬೆಂಗಳೂರಿನ ನಗರದೇವತೆ ಬನಶಂಕರಿಯಮ್ಮ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಿಗೆ ನಡೆದಿರುವುದು ವಿಶೇಷವಾಗಿದೆ. ಕೋಲಾರದಲ್ಲಿ ಈ ಅಲಂಕಾರ ೨ನೇ ಬಾರಿ ನಡೆಯುತ್ತಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.

