Yash On Horror Movies: ಹಾರರ್ ಸಿನಿಮಾಗಳ ಬಗ್ಗೆ ಮಾತನಾಡಿದ್ದ ಯಶ್‌, "ನಾನು ಎಲ್ಲಾ ರೀತಿಯ ಸಿನಿಮಾಗಳನ್ನು ನೋಡುತ್ತೇನೆ. ಆದರೆ ಹಾರರ್ ಸಿನಿಮಾಗಳನ್ನು ಮಾತ್ರ ಹೆಚ್ಚಾಗಿ ನೋಡುವುದಿಲ್ಲ.

'ಕೆಜಿಎಫ್' ಮೂಲಕ ದೇಶಾದ್ಯಂತ ಅಭಿಮಾನಿಗಳ ಮನ ಗೆದ್ದಿರುವ ರಾಕಿಂಗ್ ಸ್ಟಾರ್ ಯಶ್, ಈಗ 'ರಾಮಾಯಣ' ಸಿನಿಮಾದಲ್ಲಿ ರಾವಣನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೇಲರ್‌ನಲ್ಲಿ ಅವರ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಹೆಸರೇ ಟ್ರೆಂಡ್ ಆಗಿದೆ. ಆದರೆ ಇದೇ ಯಶ್‌ಗೆ ಒಂದು ಸಿನಿಮಾ ಜಾನರ್ ಮಾತ್ರ ಇಷ್ಟವಿಲ್ಲ ಎಂಬ ವಿಚಾರ ಈಗ ಮತ್ತೆ ವೈರಲ್ ಆಗಿದೆ.

ಹೌದು, ಆ್ಯಕ್ಷನ್ ಪಾತ್ರಗಳಲ್ಲಿ ಮಿಂಚುವ ಯಶ್‌ಗೆ ಹಾರರ್ ಸಿನಿಮಾಗಳನ್ನು ನೋಡುವುದು ಇಷ್ಟವಿಲ್ಲ. ಈ ವಿಷಯವನ್ನು ಅವರು ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದರು. ಆದರೆ ಇದರಿಂದ ತಾವು ಹಾರರ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದರ್ಥವಲ್ಲ ಎಂದೂ ಅವರು ಹೇಳಿದ್ದರು.

'ಭಯಪಡುವುದು ನನಗೆ ಇಷ್ಟವಿಲ್ಲ'

ಹಾರರ್ ಸಿನಿಮಾಗಳ ಬಗ್ಗೆ ಮಾತನಾಡಿದ್ದ ಯಶ್, "ನಾನು ಎಲ್ಲಾ ರೀತಿಯ ಸಿನಿಮಾಗಳನ್ನು ನೋಡುತ್ತೇನೆ. ಆದರೆ ಹಾರರ್ ಸಿನಿಮಾಗಳನ್ನು ಮಾತ್ರ ಹೆಚ್ಚಾಗಿ ನೋಡುವುದಿಲ್ಲ. ಸಿನಿಮಾ ನೋಡಲು ಹೋಗುವುದು ಮನರಂಜನೆಗಾಗಿ. ಭಯಪಟ್ಟು ಹೊರಬರುವುದು ನನಗೆ ಇಷ್ಟವಿಲ್ಲ. ಹಾರರ್ ಸಿನಿಮಾ ನೋಡಿದಾಗ ವಿಚಿತ್ರ ಅನುಭವವಾಗುತ್ತದೆ. ಅದಕ್ಕಾಗಿಯೇ ಆ ಜಾನರ್‌ನಿಂದ ಸ್ವಲ್ಪ ದೂರ ಇರುತ್ತೇನೆ," ಎಂದು ಹೇಳಿದ್ದರು.

ಅದೇ ವೇಳೆ, ಉತ್ತಮ ಕಥೆ ಸಿಕ್ಕರೆ ಹಾರರ್ ಸಿನಿಮಾದಲ್ಲಿ ನಟಿಸಲು ಯಾವುದೇ ಹಿಂಜರಿಕೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು. "ನಟನಾಗಿ ನನಗೆ ಯಾವುದೇ ಜಾನರ್ ಬಗ್ಗೆ ಭಯವಿಲ್ಲ. ಕಥೆ ಮತ್ತು ಪಾತ್ರ ಇಷ್ಟವಾದರೆ ಹಾರರ್ ಸಿನಿಮಾದಲ್ಲೂ ಖಂಡಿತ ನಟಿಸುತ್ತೇನೆ. ನಾನು ನೋಡುವುದನ್ನು ಇಷ್ಟಪಡುವುದಿಲ್ಲ ಅಷ್ಟೇ ಹೊರತು, ನಟಿಸುವುದಕ್ಕೆ ಯಾವುದೇ ವಿರೋಧವಿಲ್ಲ," ಎಂದು ಯಶ್ ತಿಳಿಸಿದ್ದರು.

ಆ್ಯಕ್ಷನ್ ಸಿನಿಮಾಗಳೇ ಫೇವರಿಟ್

ಆ್ಯಕ್ಷನ್ ಸಿನಿಮಾಗಳ ಬಗ್ಗೆ ಮಾತನಾಡಿದ ಯಶ್, "ಯಾವಾಗ ಬೇಕಾದರೂ ಆ್ಯಕ್ಷನ್ ಸಿನಿಮಾ ನೋಡಲು ನಾನು ಸಿದ್ಧ. ಆ ರೀತಿಯ ಸಿನಿಮಾಗಳು ನನಗೆ ತುಂಬಾ ಇಷ್ಟ. ಹಾರರ್ ಹೊರತುಪಡಿಸಿ ಉಳಿದ ಎಲ್ಲ ಜಾನರ್‌ಗಳ ಸಿನಿಮಾಗಳನ್ನೂ ಆಸ್ವಾದಿಸುತ್ತೇನೆ," ಎಂದಿದ್ದರು.

'ರಾಮಾಯಣ' ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ

ಸದ್ಯ ಯಶ್ ಅಭಿನಯದ 'ರಾಮಾಯಣ: ಭಾಗ 1' ಚಿತ್ರದ ಟ್ರೇಲರ್ ದೇಶ-ವಿದೇಶಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಚಿತ್ರದಲ್ಲಿ ಯಶ್ ಲಂಕಾಧಿಪತಿ ರಾವಣನಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಮೊದಲ ಝಲಕ್‌ಗೇ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ.

ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಹಾಗೂ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡಿರುವುದು ಚಿತ್ರದ ಮತ್ತೊಂದು ವಿಶೇಷ. ಇನ್ನು ಯಶ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಕೂಡ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ಈ ಎರಡು ಸಿನಿಮಾಗಳ ಮೂಲಕ ಯಶ್ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸ ಅಭಿಮಾನಿಗಳಲ್ಲಿದೆ.