ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇಂದು (ಜುಲೈ 31) ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಮತ್ತೊಮ್ಮೆ ಸುದ್ದಿಯಲ್ಲಿದೆ.
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇಂದು (ಜುಲೈ 31) ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ 'ನಾಡಿಯಾ' ಪಾತ್ರ ನಿರ್ವಹಿಸಿರುವ ಕಿಯಾರಾ, ಆ ಪಾತ್ರದ ಬಗ್ಗೆ ಮೊದಲ ಬಾರಿಗೆ ಮನಮುಟ್ಟುವ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಿಯಾರಾ, ನಿರ್ದೇಶಕಿ ಗೀತು ಮೋಹನ್‌ದಾಸ್ ಚಿತ್ರದ ಕಥೆಯನ್ನು ವಿವರಿಸಿದ ಕ್ಷಣದಲ್ಲೇ ತಾವು ಈ ಸಿನಿಮಾದ ಭಾಗವಾಗಬೇಕೆಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
'ನಟಿಯಾಗಿ ಬಯಸುವ ಎಲ್ಲ ಭಾವನೆಗಳೂ ಈ ಪಾತ್ರದಲ್ಲಿವೆ'
'ನಾಡಿಯಾ' ಪಾತ್ರದ ಬಗ್ಗೆ ಮಾತನಾಡಿದ ಕಿಯಾರಾ, "ಕಥೆ ಕೇಳಿದಾಗ ಈ ಪಾತ್ರವನ್ನು ಎಷ್ಟು ಅದ್ಭುತವಾಗಿ ರೂಪಿಸಿದ್ದಾರೆ ಎಂಬುದು ನನ್ನನ್ನು ಸಂಪೂರ್ಣವಾಗಿ ಸೆಳೆಯಿತು. ಒಬ್ಬ ನಟಿ ಕನಸು ಕಾಣುವ ಎಲ್ಲ ರೀತಿಯ ಅಭಿನಯಕ್ಕೆ ಇಲ್ಲಿ ಅವಕಾಶವಿದೆ. ಶಕ್ತಿ, ದುರ್ಬಲತೆ, ಸಂವೇದನೆ, ಭಾವೋದ್ವೇಗ, ಹುಚ್ಚುತನ, ವಿಚಲಿತ ಮನಸ್ಥಿತಿ, ನಿರ್ಲಿಪ್ತತೆ-ಒಂದೇ ಪಾತ್ರದಲ್ಲಿ ಇಷ್ಟು ವಿಭಿನ್ನ ಭಾವನೆಗಳನ್ನು ತೋರಿಸುವ ಅವಕಾಶ ಸಿಗುವುದು ಅಪರೂಪ. ನನ್ನ ವೃತ್ತಿಜೀವನದಲ್ಲಿ ಇಂತಹ ಸವಾಲಿನ ಪಾತ್ರವನ್ನು ನಿಭಾಯಿಸುವ ಆತ್ಮವಿಶ್ವಾಸ ಈಗ ನನಗಿದೆ ಎಂಬ ಭಾವನೆ ಮೂಡಿತು," ಎಂದು ಹೇಳಿದ್ದಾರೆ.
'ಮಹಿಳಾ ಪಾತ್ರಗಳನ್ನು ಒಂದೇ ಚೌಕಟ್ಟಿನಲ್ಲಿ ನೋಡಬಾರದು'
ಚಿತ್ರಗಳಲ್ಲಿ ಮಹಿಳಾ ಪಾತ್ರಗಳ ಚಿತ್ರಣದ ಬಗ್ಗೆ ಮಾತನಾಡಿದ ಕಿಯಾರಾ, "ಮಹಿಳೆಯರನ್ನು ಒಂದೇ ರೀತಿಯ ಚೌಕಟ್ಟಿನಲ್ಲಿ ಸೀಮಿತಗೊಳಿಸುವುದು ನನಗೆ ಇಷ್ಟವಿಲ್ಲ. ನಿಜ ಜೀವನದಲ್ಲಿ ಮಹಿಳೆಯರು ಎಷ್ಟು ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೋ, ಸಿನಿಮಾಗಳಲ್ಲೂ ಅದೇ ರೀತಿ ಗಟ್ಟಿತನ, ಸಂಕೀರ್ಣತೆ ಮತ್ತು ನೈಜತೆಯೊಂದಿಗೆ ಅವರನ್ನು ತೋರಿಸಬೇಕು," ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಹನಟಿಯರ ಬಗ್ಗೆ ಕಿಯಾರಾ ಮೆಚ್ಚುಗೆ
'ಟಾಕ್ಸಿಕ್' ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನೂ ಕಿಯಾರಾ ಹಂಚಿಕೊಂಡಿದ್ದಾರೆ. "ಪ್ರತಿಯೊಬ್ಬ ನಟಿಯೂ ತಮ್ಮದೇ ಆದ ವ್ಯಕ್ತಿತ್ವ ಮತ್ತು ಶಕ್ತಿಯನ್ನು ಚಿತ್ರಕ್ಕೆ ತಂದಿದ್ದಾರೆ. ಒಂದೇ ಸಿನಿಮಾದಲ್ಲಿ ಇಷ್ಟು ವಿಭಿನ್ನ ಮಹಿಳಾ ಪಾತ್ರಗಳನ್ನು ನೋಡುವುದು ಪ್ರೇಕ್ಷಕರಿಗೆ ಹೊಸ ಅನುಭವವಾಗಲಿದೆ. ಚಿತ್ರೀಕರಣದ ವೇಳೆ ಪ್ರತಿಯೊಬ್ಬರೂ ಹೊಸದನ್ನು ಸೃಷ್ಟಿಸಬೇಕೆಂಬ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಅಂತಹ ಕ್ಷಣಗಳೇ ಸಿನಿಮಾ ಮೇಲಿನ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ," ಎಂದು ಹೇಳಿದ್ದಾರೆ.
'ಟಾಕ್ಸಿಕ್' ಬಗ್ಗೆ...
ಗೀತು ಮೋಹನ್‌ದಾಸ್ ನಿರ್ದೇಶಿಸಿರುವ ಈ ಬಹುಭಾಷಾ ಆಕ್ಷನ್ ಥ್ರಿಲ್ಲರ್‌ಗೆ ಕಥೆಯನ್ನು ಯಶ್ ಹಾಗೂ ಗೀತು ಮೋಹನ್‌ದಾಸ್ ಜಂಟಿಯಾಗಿ ರೂಪಿಸಿದ್ದಾರೆ. ತಂದೆ-ಮಗನ ನಡುವಿನ ಸಂಘರ್ಷವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಬಳಿಕ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರ್ ಹಿನ್ನೆಲೆ ಸಂಗೀತ, ಉಜ್ವಲ್ ಕುಲಕರ್ಣಿ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ. ಹಾಲಿವುಡ್‌ನ ಖ್ಯಾತ ಆಕ್ಷನ್ ನಿರ್ದೇಶಕ ಜೆ.ಜೆ. ಪೆರಿ ಹಾಗೂ ಅನ್‌ಬರಿವ್ ಮತ್ತು ಕೆಚಾ ಖಾಂಫಕ್‌ಡಿ ಚಿತ್ರದ ಸಾಹಸ ದೃಶ್ಯಗಳಿಗೆ ರೂಪ ನೀಡಿದ್ದಾರೆ. ಇನ್ನು ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ 2026ರ ಆಗಸ್ಟ್ 26ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.


