ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಅಪ್‌ಡೇಟ್ ಹೊರಬರುತ್ತಿದ್ದು, ಇದೀಗ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಅಪ್‌ಡೇಟ್ ಹೊರಬರುತ್ತಿದ್ದು, ಇದೀಗ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಕಿಯಾರಾ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಈ ವಿಶೇಷ ಪೋಸ್ಟರ್ ಅನಾವರಣಗೊಳಿಸಿದ್ದು, ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರದಲ್ಲಿ 'ನಾಡಿಯಾ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿಯಾರಾ ಅಡ್ವಾಣಿ ಅವರ ಹೊಸ ಲುಕ್ ಸಖತ್ ಗಮನ ಸೆಳೆದಿದೆ. ನಿರ್ಮಾಣ ಸಂಸ್ಥೆ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು, "ನಮ್ಮ ನಾಡಿಯಾ ಕಿಯಾರಾ ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. -ಟೀಮ್ ಟಾಕ್ಸಿಕ್" ಎಂದು ಶುಭ ಕೋರಿದೆ.
ಆಕರ್ಷಕ ಉಡುಪಿನಲ್ಲಿ ಕಿಯಾರಾ
ಬಿಡುಗಡೆಯಾದ ಪೋಸ್ಟರ್‌ನಲ್ಲಿ ಕೆಂಪು ಬಣ್ಣದ ಆಕರ್ಷಕ ಉಡುಪಿನಲ್ಲಿ ಕಿಯಾರಾ ಮಿಂಚಿದ್ದು, ಕೈಯಲ್ಲಿ ಕೆಂಪು ಬಣ್ಣದ ಜಪಾನೀಸ್ ಶೈಲಿಯ ಸಕುರಾ ಹ್ಯಾಂಡ್ ಫ್ಯಾನ್ ಹಿಡಿದು ವಿಭಿನ್ನ ಹಾಗೂ ರಾಜಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹೊಸ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿದೆ.
ಇದಕ್ಕೂ ಮೊದಲು ಚಿತ್ರತಂಡ 'ತಬಾಹಿ' (Tabaahi) ಹಾಡನ್ನು ಬಿಡುಗಡೆ ಮಾಡಿತ್ತು. ಈ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ನಡುವಿನ ರೊಮ್ಯಾಂಟಿಕ್ ಕೆಮಿಸ್ಟ್ರಿ ಸಿನಿಪ್ರಿಯರ ಗಮನ ಸೆಳೆದಿತ್ತು. ಹಾಡಿನ ದೃಶ್ಯಗಳು ಹಾಗೂ ಇಬ್ಬರ ಸ್ಟೈಲಿಶ್ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.
'ಟಾಕ್ಸಿಕ್'ನಲ್ಲಿ ಕಿಯಾರಾ ಅಡ್ವಾಣಿ ಮಾತ್ರವಲ್ಲದೆ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಲೇಡೀಸ್ & ಲೇಡೀಸ್' ಟೀಸರ್ ಚಿತ್ರದ ಮಹಿಳಾ ಪಾತ್ರಗಳ ಸುತ್ತ ಕಥೆಯ ಮತ್ತೊಂದು ಮುಖವನ್ನು ಪರಿಚಯಿಸಿತ್ತು. ಟೀಸರ್‌ನಲ್ಲಿದ್ದ ಮಹಿಳಾ ಧ್ವನಿ, "ಪ್ರೀತಿ ಮಹಿಳೆಯರನ್ನು ರಾಕ್ಷಸರನ್ನಾಗಿಸುತ್ತದೆ. ಅದರ ಮೋಸದ ಆಳವನ್ನು ಅರ್ಥ ಮಾಡಿಕೊಂಡರೆ ಅದು ಸುಂದರ ಭ್ರಮೆ. ಆದರೂ ನಾವು ಅವನ ಪ್ರೀತಿಯ ತುಣುಕುಗಳಿಗಾಗಿ ಹೋರಾಡುತ್ತಿದ್ದೇವೆ" ಎಂಬ ಸಂಭಾಷಣೆ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿತ್ತು.
ಚಿತ್ರದಲ್ಲಿ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಹಾಗೂ ಅಮಿತ್ ತಿವಾರಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶಿಸಿರುವ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಬಳಿಕ ಹಲವು ಭಾರತೀಯ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಚಿತ್ರಕ್ಕೆ ವಿಶಾಲ್ ಮಿಶ್ರಾ, ರವಿ ಬಸ್ರೂರ್ ಹಾಗೂ ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜಿಸಿದ್ದು, 2026ರ ಆಗಸ್ಟ್ 26ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ.


