ಅಲ್ಲು ಅರ್ಜುನ್ ಅಭಿನಯದ ಅಟ್ಲೀ ನಿರ್ದೇಶನದ ‘ರಾಕಾ’ ಸಿನಿಮಾ ಬಿಡುಗಡೆಗೂ ಮುನ್ನವೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. ಈ ಸಾಧನೆಯ ಕುರಿತು ಅಲ್ಲು ಅರ್ಜುನ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಪುಷ್ಪ 2’ ಬಳಿಕ ತೆರೆಕಾಣಲಿರುವ ಸಿನಿಮಾ ಆಗಿರುವುದರಿಂದ ‘ರಾಕಾ’ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಹಾಗೂ ಗ್ಲಿಂಪ್ಸ್‌ಗಳು ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ಈ ನಡುವೆ ಪ್ಯಾನ್ ವರ್ಲ್ಡ್ ಸಿನಿಮಾ ‘ರಾಕಾ’ ಕುರಿತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ, ಕಾಲಿವುಡ್‌ನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ರಾಕಾ’. ಹಾಲಿವುಡ್‌ ಮಟ್ಟದ ಸೋಷಿಯೋ ಫ್ಯಾಂಟಸಿ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಆಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಈಗಾಗಲೇ ಚಿತ್ರದ ಪೋಸ್ಟರ್‌ಗಳು ಹಾಗೂ ಗ್ಲಿಂಪ್ಸ್‌ಗಳು ಬಿಡುಗಡೆಯಾಗಿ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿವೆ. ಇದೀಗ ಸಿನಿಮಾ ಬಿಡುಗಡೆಯಾಗುವ ಮುನ್ನವೇ ವಿಶೇಷ ಸಾಧನೆಯೊಂದನ್ನು ಮಾಡಿದೆ. ‘ರಾಕಾ’ ಚಿತ್ರತಂಡವು ಒಂದೇ ಸಮಯದಲ್ಲಿ 37 ಮಂದಿ ಕಲಾವಿದರನ್ನು ಚಿತ್ರೀಕರಿಸಿ, ನೈಜ ಸಮಯದಲ್ಲಿ ಅತಿ ಹೆಚ್ಚು ಜನರ ಚಲನವಲನಗಳನ್ನು ಸೆರೆಹಿಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.

ಈ ಐತಿಹಾಸಿಕ ಸಾಧನೆಯ ಹಿನ್ನೆಲೆಯಲ್ಲಿ ಚಿತ್ರತಂಡ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಅಲ್ಲು ಅರ್ಜುನ್ ‘ರಾಕಾ’ ಸಿನಿಮಾದ ಗಿನ್ನಿಸ್ ದಾಖಲೆಯ ಕುರಿತು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

‘ರಾಕಾ’ ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡ ಸೃಷ್ಟಿಸಲಿದೆ

‘ರಾಕಾ’ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ. ಸಿನಿಮಾ ತಂಡವು ಇಂತಹ ಅದ್ಭುತ ಸಾಧನೆ ಮಾಡಿರುವುದಕ್ಕೆ ನಮಗೆ ಹೆಮ್ಮೆ ಇದೆ. ಇದು ವಿಶ್ವ ಸಿನಿಮಾರಂಗದಲ್ಲಿ ಹೊಸ ಮಾನದಂಡವನ್ನು ಸೃಷ್ಟಿಸಲಿದೆ. ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ‘ರಾಕಾ’ ಮೂಲಕ ನಾವು ಕೇವಲ ಭಾರತೀಯ ಸಿನಿಮಾದ ಮಾನದಂಡಗಳನ್ನು ಮಾತ್ರವಲ್ಲದೆ, ಜಾಗತಿಕ ಸಿನಿಮಾದ ಮಿತಿಗಳನ್ನೂ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ಅಪರೂಪದ ಗೌರವವನ್ನು ನಮಗೆ ನೀಡಿದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನಿರ್ದೇಶಕ ಅಟ್ಲೀ ಅವರ ದೃಷ್ಟಿಕೋನವಿಲ್ಲದೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಅವರ ಕಾರಣದಿಂದಲೇ ಇಂದು ನಾವು ಇಂತಹ ತಾಂತ್ರಿಕ ಸಾಧನೆಯನ್ನು ಮಾಡಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ಭಾರತೀಯ ಸಿನಿಮಾದ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದು ನಮ್ಮೆಲ್ಲರನ್ನೂ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಅಟ್ಲೀ ಅವರಿಗೆ ಧನ್ಯವಾದಗಳು. ನೀವು ಈ ಅದ್ಭುತ ಯಶಸ್ಸಿನ ಜೊತೆಗೆ ಇನ್ನೂ ಅನೇಕ ಸಾಧನೆಗಳನ್ನು ಮಾಡಬೇಕು ಎಂದು ಹಾರೈಸುತ್ತೇನೆ.

‘ರಾಕಾ’ ಸಿನಿಮಾದ ಛಾಯಾಗ್ರಾಹಕ ವಿಷ್ಣು, ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್, ಪ್ರೊಡಕ್ಷನ್ ಡಿಸೈನರ್ ಹಾಗೂ ಫೈಟ್ ಮಾಸ್ಟರ್ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರವಿಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಈ ಸಿನಿಮಾಗಾಗಿ ನಾವು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇವೆ ಎಂಬುದು ನನಗೆ ತಿಳಿದಿದೆ. ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮಾವನ್ನು ನೀಡಲು ನಾವು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದೇವೆ.

ಆದ್ದರಿಂದ ಪ್ರತಿಯೊಬ್ಬರೂ ಸ್ವಲ್ಪ ತಾಳ್ಮೆಯಿಂದ ಕಾಯಬೇಕೆಂದು ವಿನಂತಿಸಿಕೊಳ್ಳುತ್ತೇನೆ. ನಮಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತಿರುವ ಸನ್ ಪಿಕ್ಚರ್ಸ್ ಸಂಸ್ಥೆಗೆ ಧನ್ಯವಾದಗಳು. ‘ರಾಕಾ’ ಸಿನಿಮಾ ಪ್ರತಿಯೊಬ್ಬರನ್ನೂ ಅಚ್ಚರಿಗೊಳಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.