ಹಿರಿಯ ನಟ ಮತ್ತು ನಿರ್ಮಾಪಕ ಜಿವಿ ನಾರಾಯಣ ರಾವು (73) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿಯವರ ಆಪ್ತ ಸ್ನೇಹಿತರಾಗಿದ್ದ ಇವರು, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಹಪಾಠಿಯಾಗಿದ್ದು, ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಟಾಲಿವುಡ್ ಹಿರಿಯ ನಟ, ನಿರ್ಮಾಕ 73 ವರ್ಷದ ಜಿವಿ ನಾರಾಯಣ ರಾವು ಇನ್ನಿಲ್ಲ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾರಾಯಣ್ ರಾವು ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ಈ ಕುರಿತ ಮಾಹಿತಿಯನ್ನು ನಟಿ ಕರಾಟೆ ಕಲ್ಯಾಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಿರಂಜೀವಿ, ರಜನಿ ಆಪ್ತ ನಟನ ಪಯಣ ಅಂತ್ಯ
'ಸ್ವಲ್ಪ ಸಮಯದ ಹಿಂದೆ, ಮತ್ತೊಬ್ಬ ಮಹಾನ್ ವ್ಯಕ್ತಿ ಶಿವನ ಸಾನ್ನಿಧ್ಯ ಸೇರಲು ಈ ಲೋಕವನ್ನು ತೊರೆದಿದ್ದಾರೆ. ಅವರು ನಮ್ಮ ಪ್ರೀತಿಯ ನಟ ಚಿರಂಜೀವಿ ಅವರ ಬಾಲ್ಯದ ಸ್ನೇಹಿತರಾಗಿದ್ದರು. ಯಾರೊಂದಿಗೂ ವೈಷಮ್ಯವಿಲ್ಲದ, ಎಲ್ಲರನ್ನೂ ಆತ್ಮೀಯತೆ ಹಾಗೂ ಪ್ರೀತಿಯಿಂದ ಕಾಣುವ ವ್ಯಕ್ತಿತ್ವ ಅವರದಾಗಿತ್ತು. ಇಂತಹ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ. ನಮ್ಮನ್ನು ಅಗಲುವವರು ನಿಜಕ್ಕೂ ಒಳ್ಳೆಯ ಮನುಷ್ಯರಾಗಿರುತ್ತಾರೆ; ಅವರು ಬಿಟ್ಟುಹೋಗುವ ಮಧುರ ನೆನಪುಗಳು ಮಾತ್ರ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಓಂ ಶಾಂತಿ' ಎಂದು ನಟಿ ಕರಾಟೆ ಕಲ್ಯಾಣಿ ಬರೆದುಕೊಂಡಿದ್ದಾರೆ.
ಜಿವಿ ನಾರಾಯಣ ರಾವು 19534ಲ್ಲಿ ಜನಿಸಿದ್ದರು. ಅವರ ಬಾಲ್ಯ, ಶಿಕ್ಷಣ ಹೈದರಾಬಾದ್‌ನಲ್ಲಿ ನಡೆದಿತ್ತು. ಇವರ ತಂದೆ ಜಿ ಪ್ರಸಾದರಾವು ಅವರು ಸಿನಿಮಾ ರಂಗದಲ್ಲಿ ಡಿಸ್ಟ್ರಿಬ್ಯೂಟರ್, ಸಾರಥಿ ಸ್ಟುಡಿಯೋಸ್‌ಗೆ ಮ್ಯಾನೇಜಿಂಗ್ ಡೈರೆಕಟರ್ ಆಗಿ ಕೆಲಸ ಮಾಡಿದ್ದರು. ನಾರಾಯಣ ರಾವು ಅವರಿಗೆ ನಟನೆಯ ಬಗ್ಗೆ ಆಸಕ್ತಿ ಇದ್ದ ಕಾರಣ, ನಾಟಕ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 1973ರಲ್ಲಿ ಮದ್ರಾಸ್ ಫೀಲಂ ಚೇಂಜರ್ ನೇತೃತ್ವದಲ್ಲಿ ನಡೆದ ಫಿಲ್ಮಿ ಇನ್‌ಸ್ಟಿಟ್ಯೂಟ್ ಮೊದಲ ಬ್ಯಾಚ್‌ನಲ್ಲಿ ಶಿಕ್ಷಣ ಪಡೆದುಕೊಂಡಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಬೆಂಚ್‌ಮೇಟ್ ಕೂಡ ಆಗಿದ್ದರು. ಅಲ್ಲಿಂದಲೇ ಇಬ್ಬರ ಸ್ನೇಹ ಆರಂಭವಾಗಿತ್ತು.
ನಂದಿ ಪ್ರಶಸ್ತಿ ಪುರಸ್ಕೃತ ನಟ
1976ರಲ್ಲಿ ಕೆ ಬಾಲಚಂದರ್ ನಿರ್ದೇಶನ ಮಾಡಿದ್ದ 'ಅಂತುಲೇನಿ ಕಥ' ಸಿನಿಮಾ ಮೂಲಕ ಬೆಳ್ಳಿಪರದೆಗೆ ಪರಿಚಯವಾಗಿದ್ದರು. ಆ ಬಳಿಕ ಹಲವ ಸಿನಿಮಾಗಳಲ್ಲಿ ನಟಿಸಿದ್ದರು. 'ತಾಳಿಕಟ್ಟು ಶುಭವೇಳ' ಸಿನಿಮಾಗೆ ಆಂಧ್ರ ಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಜಿವಿ ನಾರಾಯಣ ರಾವು ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು, ಹಲವು ಧಾರಾವಾಹಿಗಳಲ್ಲಿಯೂ ಕೂಡ ನಟಿಸಿದ್ದರು.
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಆತ್ಮೀಯರಾಗಿದ್ದ ಜಿವಿ ನಾರಾಯಣ ರಾವು, ಅವರೊಂದಿಗೆ 'ಚಟ್ಟಾನಿಕಿ ಕಳ್ಳುಲೇವು', 'ಮಂಚು ಪಲ್ಲಕಿ', 'ರಾಜಾ ವಿಕ್ರಮಾರ್ಕ', 'ಹಿಟ್ಲರ್' ನಂತರ ಸಿನಿಮಾಗಳಲ್ಲಿ ಚಿರಂಜೀವಿ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದರು. ನಿರ್ಮಾಪಕರಿಗೂ ಕೆಲಸ ಮಾಡಿದ್ದ ಜಿವಿ ನಾರಾಯಣ ರಾವು ಅವರು, 'ದೇವಾಂತಕುಡು', 'ಯಮುಡಿಕಿ ಮೊಗುಡು' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಆ ಬಳಿಕ ಚಿರಂಜೀವಿ ಅವರ ಸಿನಿಮಾವನ್ನು ತಮಿಳಿನಲ್ಲಿ ರಜನಿಕಾಂತ್ ಅವರೊಂದಿಗೆ ರಿಮೇಕ್ ಮಾಡಿದ್ದರು. ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದ ನಾರಾಯಣ ರಾವು ಅವರು, ರಜನಿಕಾಂತ್ ಹಾಗೂ ಚಿರಂಜೀವಿ ಅವರೊಂದಿಗೆ ಇದ್ದ ಆತ್ಮೀಯತೆ ಹಾಗೂ ಸ್ನೇಹದ ಕುರಿತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದರು.


