ಅವರು ಪ್ರೀತಿಸಿದ್ದು ನನ್ನ ಬಳಿಯಲ್ಲಿದ್ದ ಹಣ: ಬದುಕಿನ ಕರಾಳ ಸತ್ಯ ಹೇಳಿದ ನಟಿ ಶಕೀಲಾ
ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಲೆ ಸೃಷ್ಟಿಸಿದ್ದ ನಟಿ ಶಕೀಲಾ, ತಮ್ಮ ಕೋಟ್ಯಂತರ ರೂಪಾಯಿ ಸಂಪಾದನೆಯನ್ನು ಸ್ವಂತ ಅಕ್ಕನೇ ಕಸಿದುಕೊಂಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ಶಕೀಲಾ
ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ಶಕೀಲಾ, ತಮ್ಮ ಸಂಪಾದನೆಯ ಕೋಟ್ಯಂತರ ರೂಪಾಯಿ ಹಣವನ್ನು ಸ್ವಂತ ಅಕ್ಕಾ ಕಸಿದುಕೊಂಡಿದ್ದಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ನೋವು ತೋಡಿಕೊಂಡಿದ್ದಾರೆ. ಈಗ ಆಕೆಗೆ ಕೊಡಲು ನನ್ನ ಬಳಿ ಹಣವಿಲ್ಲ, ಹಾಗಾಗಿ ಆಕೆ ಹಿಂತಿರುಗಿ ಬರಬಾರದು ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಈ ಮಾತುಗಳು ಚಿತ್ರರಂಗದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿವೆ
ಸ್ಟಾರ್ ಪಟ್ಟಕ್ಕೇರಿದ ನಟಿ
2000ನೇ ಇಸವಿಯಿಂದ ಮಲಯಾಳಂ ಚಿತ್ರರಂಗದಲ್ಲಿ ಮುನ್ನಲೆಗೆ ಬಂದ ಶಕೀಲಾ, ಕೆಲವೇ ದಿನಗಳಲ್ಲಿಯೇ ಸ್ಟಾರ್ ಪಟ್ಟಕ್ಕೇರಿದ ನಟಿ. ಮೋಹನ್‌ಲಾಲ್, ಮಮ್ಮುಟ್ಟಿ ಅಂತಹ ಸ್ಟಾರ್‌ಗಳ ರೀತಿಯಲ್ಲಿ ಜನರನ್ನು ಥಿಯೇಟರ್‌ಗೆ ಬರುವಂತೆ ಶಕೀಲಾ ಮಾಡುತ್ತಿದ್ದರು. 2000ರಲ್ಲಿ ತೆರೆಕಂಡ 'ಕಿನ್ನರತುಂಬಿಕಳ್' ಚಿತ್ರವನ್ನು ಕೇವಲ 12 ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು, ಆದರೆ ಅದು ಸುಮಾರು 4 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆಯಿತು. ಈ ಯಶಸ್ಸು ಮಲಯಾಳಂ ಚಿತ್ರರಂಗದಲ್ಲಿ 'ಶಕೀಲಾ ತರಂಗಂ' (ಶಕೀಲಾ ಅಲೆ) ಎಂಬ ಹೊಸ ಟ್ರೆಂಡ್ ಸೃಷ್ಟಿಸಿತು. ಶಕೀಲಾ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಸುಮಾರು 4 ಕೋಟಿ ರೂಪಾಯಿ ಸಂಪಾದಿಸಿದ್ದಾಗಿ ಹೇಳಿದ್ದಾರೆ.
ಸಂಪಾದಿಸಿದ ಹಣವೆಲ್ಲ ಎಲ್ಲಿ ಹೋಯಿತು?
ಸಂಪಾದಿಸಿದ ಹಣವೆಲ್ಲ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ, 'ನನ್ನ ಅಕ್ಕನ ಬಳಿ ಎಲ್ಲವೂ ಸುರಕ್ಷಿತವಾಗಿದೆ, ಆಕೆ ಖುಷಿಯಾಗಿ ಸೆಟಲ್ ಆಗಿದ್ದಾಳೆ' ಎಂದು ಶಕೀಲಾ ವ್ಯಂಗ್ಯವಾಗಿ ಉತ್ತರಿಸಿದ್ದಾರೆ. 'ನಿಮಗೆ ಹೆಚ್ಚು ಮೋಸ ಮಾಡಿದ್ದು ಯಾರು?' ಎಂದು ಕೇಳಿದಾಗ, 'ನನ್ನ ಅಕ್ಕನೇ' ಎಂದು ಅವರು ಸ್ಪಷ್ಟವಾಗಿ ಹೇಳಿದರು. ಮೊದಲೆಲ್ಲಾ ಆಕೆ ತನ್ನನ್ನು ನೋಡಲು ಬರಲಿಲ್ಲ ಎಂದು ಬೇಸರವಾಗಿತ್ತು, ಆದರೆ ಈಗ ಆಕೆಗೆ ಕೊಡಲು ನನ್ನ ಬಳಿ ಹಣವಿಲ್ಲದ ಕಾರಣ, ಆಕೆ ಬರದೇ ಇರುವುದೇ ಒಳ್ಳೆಯದು ಎಂದು ಹೇಳಿದ್ದಾರೆ.
ನಾನು ಅಪರಾಧಿಯಲ್ಲ
ಹಲವು ವರ್ಷಗಳ ಹಿಂದೆ ಬರೆದ ಆತ್ಮಚರಿತ್ರೆಯಲ್ಲಿ, 'ನಾನು ಅಪರಾಧಿಯಲ್ಲ, ಆದರೆ ನನಗೆ ದುಃಖವಿದೆ' ಎಂದು ಶಕೀಲಾ ಬರೆದಿದ್ದರು. ತನ್ನ ಸುತ್ತಮುತ್ತಲಿನವರು ತನ್ನನ್ನು ಪ್ರೀತಿಸದೆ, ತನ್ನ ಹಣವನ್ನು ಮಾತ್ರ ಪ್ರೀತಿಸಿದ್ದೇ ಆ ದುಃಖಕ್ಕೆ ಕಾರಣ ಎಂಬುದನ್ನು ಈ ಸಂದರ್ಶನದಲ್ಲಿ ಅವರು ಮತ್ತೊಮ್ಮೆ ಖಚಿತಪಡಿಸಿದ್ದಾರೆ.
ನನಗೆ ಒಳ್ಳೆಯ ಸಂಬಳ ಸಿಕ್ಕಿದೆ
ಚಿತ್ರರಂಗ ತನ್ನನ್ನು ಬಳಸಿಕೊಂಡಿತು ಎಂಬ ಆರೋಪವನ್ನು ಶಕೀಲಾ ನಿರಾಕರಿಸುತ್ತಾರೆ. ನಾನು ಮಾಡಿದ ಕೆಲಸಕ್ಕೆ ನನಗೆ ಒಳ್ಳೆಯ ಸಂಬಳ ಸಿಕ್ಕಿದೆ. ಹಾಗಾಗಿ ಅವರು ನನ್ನನ್ನು ಬಳಸಿಕೊಳ್ಳಲಿಲ್ಲ. ಕೇರಳದ ದೊಡ್ಡ ಸ್ಟಾರ್‌ಗಳು ತನ್ನ ಬೆಳವಣಿಗೆಯನ್ನು ತಡೆದರು ಎಂಬ ಮಾತನ್ನೂ ಅವರು ನಂಬುವುದಿಲ್ಲ. 'ಅವರ ಮುಂದೆ ನಾನು ಒಂದು ಸಣ್ಣ ಹುಲ್ಲಿನ ಕಡ್ಡಿಯಂತೆ. ಅವರು ದೊಡ್ಡ ವ್ಯಕ್ತಿಗಳು, ದೊಡ್ಡ ಮನಸ್ಸುಳ್ಳವರು, ಹಾಗೆಲ್ಲಾ ಮಾಡುವುದಿಲ್ಲ' ಎಂದು ಅವರು ಹೇಳುತ್ತಾರೆ. ತನ್ನ ಜನಪ್ರಿಯತೆಯ ಕಾಲ ಒಂದು ಅಲೆಯಂತೆ ಇತ್ತು, ಅದು ಒಂದು ದಿನ ಕೊನೆಗೊಳ್ಳುತ್ತದೆ ಎಂದು ತನಗೆ ಮೊದಲೇ ತಿಳಿದಿತ್ತು ಎಂದೂ ಅವರು ಹೇಳಿದ್ದಾರೆ.
ಮತ್ತೆ ಹುಟ್ಟಿದರೆ ಐಪಿಎಸ್ ಅಧಿಕಾರಿ ಆಗುವೆ
ತಾನು ನಟಿಸಿದ ಚಿತ್ರಗಳ ಬಗ್ಗೆ ತನಗೆಂದೂ ಪಶ್ಚಾತ್ತಾಪವಿಲ್ಲ ಎಂದು ಹೇಳುವ ಶಕೀಲಾ, ಅದರಿಂದಲೇ ಅಲ್ವಾ 26 ವರ್ಷಗಳ ನಂತರವೂ ನೀವು ನನ್ನನ್ನು ಸಂದರ್ಶನ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸುತ್ತಾರೆ. ಆದರೂ, ಜೀವನವನ್ನು ಮತ್ತೆ ಬದುಕಲು ಅವಕಾಶ ಸಿಕ್ಕರೆ, ಇದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ. ಬದಲಿಗೆ, ಚಿಕ್ಕಂದಿನಿಂದಲೇ ಚೆನ್ನಾಗಿ ಓದಿ ಐಪಿಎಸ್ ಅಧಿಕಾರಿಯಾಗಬೇಕೆಂಬುದು ತನ್ನ ಆಸೆಯಾಗಿತ್ತು. ಶಾಲಾ ದಿನಗಳಲ್ಲಿ ಶಿಕ್ಷಕರು ಹೊಡೆಯುತ್ತಿದ್ದರಿಂದ ಓದಿನ ಮೇಲೆ ಬೇಸರ ಬಂದಿತ್ತು, ಆದರೆ ಈಗ ತನ್ನ ಜ್ಞಾಪಕಶಕ್ತಿ ಚೆನ್ನಾಗಿರುವುದರಿಂದ ಏನನ್ನಾದರೂ ಸುಲಭವಾಗಿ ಕಲಿಯಬಲ್ಲೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

