ಕನ್ನಡ ಚಿತ್ರರಂಗದ 'ಉಪೇಂದ್ರ' ನಟಿ ಪ್ರೇಮಾ ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪ್ರೇಮಾಗೆ ಕ್ಯಾನ್ಸರ್ ಇದೆ ಮತ್ತು ಚಿಕಿತ್ಸೆಗಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಪ್ರೇಮಾ ಕೂಡ ಒಬ್ಬರು. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, ಹೋಮ್ಲಿ ಲುಕ್ ಹಾಗೂ ಅದ್ಭುತ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವಿಶೇಷವಾಗಿ ಕೋಡಿ ರಾಮಕೃಷ್ಣ ನಿರ್ದೇಶನದ ‘ದೇವಿ’ ಸಿನಿಮಾ ಪ್ರೇಮಾ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತ್ತು. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದರು.

ಇದಕ್ಕೂ ಮುನ್ನ ‘ಧರ್ಮಚಕ್ರಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ನೀಡಿದ್ದ ಪ್ರೇಮಾ, ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ತೆಲುಗು ಮಾತ್ರವಲ್ಲದೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿರುವ ಪ್ರೇಮಾ, ನಾಯಕಿಯಾಗಿ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

2006ರಲ್ಲಿ ಉದ್ಯಮಿ ಜೀವನ್ ಅಪ್ಪಚುನ್ ಅವರನ್ನು ವಿವಾಹವಾಗಿದ್ದ ಅವರು, ಬಳಿಕ 2016ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. ವೈಯಕ್ತಿಕ ಜೀವನದ ಕೆಲವು ಕಾರಣಗಳಿಂದಾಗಿ ಕೆಲಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಪ್ರೇಮಾ, ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಾಯಿ, ಅಕ್ಕ, ಅತ್ತಿಗೆ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಟಿವಿ ಶೋಗಳಲ್ಲೂ ಸಕ್ರಿಯರಾಗಿದ್ದಾರೆ.

ಪ್ರೇಮಾ ಆರೋಗ್ಯದ ಬಗ್ಗೆ ಹರಿದಾಡಿದ್ದ ರೂಮರ್ ಏನು?

ಇತ್ತೀಚಿನ ವರ್ಷಗಳಲ್ಲಿ ಪ್ರೇಮಾ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ರೀತಿಯ ಸುದ್ದಿಗಳು ಮತ್ತು ವದಂತಿಗಳು ಹರಿದಾಡಿದ್ದವು. ಅವರು ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳ ಜೊತೆಗೆ, ಅವರ ಆರೋಗ್ಯದ ಬಗ್ಗೆಯೂ ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದವು. ಪ್ರೇಮಾಗೆ ಕ್ಯಾನ್ಸರ್ ಇದೆ. ಅದಕ್ಕಾಗಿ ಅವರು ನ್ಯೂಜಿಲೆಂಡ್‌ಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರಿಂದ ಅವರ ಅಭಿಮಾನಿಗಳು ಸಹ ಆತಂಕಕ್ಕೊಳಗಾಗಿದ್ದರು. ಆದರೆ ಇದೀಗ ಈ ಎಲ್ಲಾ ಸುದ್ದಿಗಳಿಗೆ ನಟಿ ಪ್ರೇಮಾ ಅವರೇ ಸ್ಪಷ್ಟನೆ ನೀಡಿದ್ದಾರೆ.

‘ದೇವರ ದಯೆಯಿಂದ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ’

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಮಾತನಾಡಿರುವ ಪ್ರೇಮಾ, ನ್ಯೂಜಿಲೆಂಡ್‌ಗೆ ತೆರಳಿದ್ದರ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಸೃಷ್ಟಿಸಿದ್ದಾರೆ. ನಾನು ನ್ಯೂಜಿಲೆಂಡ್‌ಗೆ ನನ್ನ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಹೋಗಿ ಬಂದಿದ್ದೆ. ದೇವರ ದಯೆಯಿಂದ ನನಗೆ ಯಾವುದೇ ಅನಾರೋಗ್ಯವಿಲ್ಲ. ಆದರೆ ಕೆಲವರು ಈ ವಿಚಾರವನ್ನು ಅತಿರೇಕವಾಗಿ ಬಿಂಬಿಸುತ್ತಿದ್ದಾರೆ ಎಂದು ಪ್ರೇಮಾ ಹೇಳಿದ್ದಾರೆ.

‘ಈ ವದಂತಿಗಳಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇನೆ’

ತಮ್ಮ ಬಗ್ಗೆ ಕೇಳಿಬರುವ ಮಾತುಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಪ್ರೇಮಾ, ಇಂತಹ ಪರಿಸ್ಥಿತಿಗಳೇ ತಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿವೆ ಎಂದು ಹೇಳಿದ್ದಾರೆ. ಇಂತಹ ವದಂತಿಗಳಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇನೆ. ನನ್ನ ತಂದೆ-ತಾಯಿ ಪ್ರತಿಯೊಂದು ವಿಚಾರದಲ್ಲೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಯಾರಾದರೂ ನನ್ನ ಬಗ್ಗೆ ಏನಾದರೂ ಮಾತನಾಡಿದರೆ, ಅದಕ್ಕೆ ಹೇಗೆ ಉತ್ತರಿಸಬೇಕು ಎಂಬುದೂ ನನಗೆ ಚೆನ್ನಾಗಿ ಗೊತ್ತು ಎಂದು ಅವರು ಹೇಳಿದ್ದಾರೆ.

‘ನನ್ನ ಸ್ನೇಹಿತರು ನನ್ನನ್ನು ಸ್ಟಾರ್‌ನಂತೆ ನೋಡುವುದಿಲ್ಲ’

ತಮ್ಮ ಜೀವನದಲ್ಲಿ ಸ್ನೇಹಿತರ ಪಾತ್ರದ ಬಗ್ಗೆಯೂ ಪ್ರೇಮಾ ಮಾತನಾಡಿದ್ದಾರೆ. ನನಗೆ ಒಳ್ಳೆಯ ಸ್ನೇಹಿತರಿದ್ದಾರೆ. ಅವರು ನನ್ನನ್ನು ಸ್ಟಾರ್‌ನಂತೆ ನೋಡುವುದಿಲ್ಲ. ಅವರೊಂದಿಗೆ ನನ್ನ ಜೀವನದ ಪ್ರತಿಯೊಂದು ವಿಚಾರವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತೇನೆ ಎಂದು ಪ್ರೇಮಾ ಹೇಳಿದ್ದಾರೆ. ಸದ್ಯ ಹಿರಿಯ ನಟಿಯ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ವತಃ ಪ್ರೇಮಾ ಅವರೇ ತೆರೆ ಎಳೆದಿರುವುದು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.