ಇಶಾ ಫೌಂಡೇಶನ್ ಮತ್ತು 'ದಿ ಲೆಜೆಂಡ್ ಆಫ್ ಹನುಮಾನ್' ಖ್ಯಾತಿಯ ಗ್ರಾಫಿಕ್ ಇಂಡಿಯಾ ಸಂಸ್ಥೆಯು 'ಶಿವ – ದಿ ಆದಿಯೋಗಿ' ಎಂಬ ಅನಿಮೇಷನ್ ಚಲನಚಿತ್ರವನ್ನು ನಿರ್ಮಿಸುತ್ತಿವೆ. ಸದ್ಗುರುಗಳ ಬೋಧನೆಗಳನ್ನು ಆಧರಿಸಿದ ಈ ಚಿತ್ರವು ಯೋಗದ ಉಗಮ ಮತ್ತು ಆದಿಯೋಗಿಯ ಜೀವನವನ್ನು ಚಿತ್ರಿಸಲಿದೆ.
ಕೊಯಮತ್ತೂರು (ಆ.25): ಶ್ರಾವಣ ಮಾಸದ ಪವಿತ್ರ ಮುಹೂರ್ತದಲ್ಲಿ ಜಾಗತಿಕ ಮಟ್ಟದ ಶಿವಭಕ್ತರಿಗಾಗಿ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಭರ್ಜರಿ ಘೋಷಣೆ ಮಾಡಿದ್ದಾರೆ. ಯೋಗ ಪರಂಪರೆಯ ಪ್ರಥಮ ಯೋಗಿ ಹಾಗೂ ಯೋಗದ ಮೂಲವೆನಿಸಿದ ಆದಿಯೋಗಿ ಶಿವನ ಮಹಾಗಾಥೆಯನ್ನು ಸಾರುವ ‘ಶಿವ – ದಿ ಆದಿಯೋಗಿ’ (Shiva – The Adiyogi) ಎಂಬ ಬ್ರಹ್ಮಾಂಡ ಅನಿಮೇಷನ್ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.ದೇಶಾದ್ಯಂತ ಗೆಲುವಿನ ಅಲೆ ಸೃಷ್ಟಿಸಿದ್ದ ‘ದಿ ಲೆಜೆಂಡ್ ಆಫ್ ಹನುಮಾನ್’ ಅನಿಮೇಷನ್ ಸಿರೀಸ್ ಹಿಂದಿರುವ ಭಾರತದ ಪ್ರಮುಖ ಸಂಸ್ಥೆ 'ಗ್ರಾಫಿಕ್ ಇಂಡಿಯಾ' (Graphic India) ಜೊತೆ ಕೈಜೋಡಿಸಿ ಇಶಾ ಫೌಂಡೇಶನ್ ಈ ಬಿಗ್ ಬಜೆಟ್ ಸಿನಿಮಾವನ್ನು ತೆರೆಗೆ ತರುತ್ತಿದೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ಸಿನಿಮಾ 2027ರಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಯೋಗದ ಉಗಮ ಮತ್ತು ಆದಿಯೋಗಿಯ ಕಥೆ
ಸದ್ಗುರು ವಿವರಿಸಿರುವ ಯೋಗ ಪರಂಪರೆಯ ಕಥೆಗಳನ್ನು ಆಧರಿಸಿ ಈ ಸಿನಿಮಾವನ್ನು ಸಿದ್ಧಪಡಿಸಲಾಗುತ್ತಿದೆ. ಅತ್ಯಾಧುನಿಕ ಅನಿಮೇಷನ್ ತಂತ್ರಜ್ಞಾನ ಹಾಗೂ ಅದ್ಭುತ ದೃಶ್ಯ ವೈಭವದೊಂದಿಗೆ ಯೋಗದ ಉಗಮ ಮತ್ತು ಆದಿಯೋಗಿ ಶಿವನ ಜೀವನ ಪ್ರಸಂಗಗಳನ್ನು ಈ ಸಿನಿಮಾ ಪ್ರೇಕ್ಷಕರ ಮುಂದೆ ತೆರೆದಿಡಲಿದೆ. ಗ್ರಾಫಿಕ್ ಇಂಡಿಯಾದ ಸಹ ಸಂಸ್ಥಾಪಕ ಶರದ್ ದೇವರಾಜನ್ ಅವರು ಈ ಚಿತ್ರದ ನಿರ್ಮಾಪಕರಾಗಿ, ಸಹ ಬರಹಗಾರರಾಗಿ ಹಾಗೂ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಥಿಯೇಟ್ರಿಕಲ್ ರಿಲೀಸ್ ಆಗಿ 2027ರಲ್ಲಿ ಈ ಸಿನಿಮಾ ಬೆಳ್ಳಿಪರದೆಗೆ ಅಪ್ಪಳಿಸಲಿದೆ.
ಶಿವ ದೇವರಿಗಿಂತ ಮಿಗಿಲಾಗಿ ಮೊದಲ ಯೋಗಿ: ಸದ್ಗುರು
ಶಿವನ ಕುರಿತಾದ ಯೋಗ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲಿರುವ ಸದ್ಗುರು, ಯೋಗ ಸಂಸ್ಕೃತಿಯಲ್ಲಿ ಶಿವನನ್ನು ಕೇವಲ ದೇವರಾಗಿ ನೋಡಲಾಗುವುದಿಲ್ಲ. ನಮಗೆ ಶಿವ ಎಂದರೆ ಮೊದಲ ಯೋಗಿಯಾದ 'ಆದಿಯೋಗಿ' ಹಾಗೂ ಮೊದಲ ಗುರುವಾದ 'ಆದಿಗುರು'. ಮಾನವಕುಲದ ಇತಿಹಾಸದಲ್ಲೇ ಮೊದಲ ಬಾರಿಗೆ, ನಿಸರ್ಗದ ಸರಳ ನಿಯಮಗಳು ಮನುಷ್ಯನಿಗೆ ಶಾಶ್ವತ ತಡೆಗೋಡೆಗಳಲ್ಲ ಎಂಬ ಕಲ್ಪನೆಯನ್ನು ನೀಡಿದ್ದೇ ಆದಿಯೋಗಿ ಶಿವ. ಒಬ್ಬ ವ್ಯಕ್ತಿ ಪ್ರಯತ್ನಿಸಲು ಸಿದ್ಧನಿದ್ದರೆ, ತನ್ನ ಎಲ್ಲಾ ಮಿತಿಗಳನ್ನು ಮೀರಿ ಮುಕ್ತಿ ಪಡೆಯಬಹುದು. ಭೌತಿಕ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸುವುದೇ ಒಂದು ಆಧ್ಯಾತ್ಮಿಕ ಪ್ರಕ್ರಿಯೆ. ಈ ಅರ್ಥದಲ್ಲಿ ನಾವೆಲ್ಲರೂ ನಿಯಮ ಉಲ್ಲಂಘಿಸುವವರು ಮತ್ತು ಶಿವನೇ ಜಗತ್ತಿನ ಅತಿ ದೊಡ್ಡ ನಿಯಮ ಉಲ್ಲಂಘಕ ಎಂದು ಹೇಳಿದ್ದಾರೆ.
ಪ್ರಸಿದ್ಧ ಕ್ರಿಯೇಟಿವ್ ಪ್ರತಿಭೆ ಶರದ್ ದೇವರಾಜನ್
ಭಾರತೀಯ ಅನಿಮೇಷನ್ ರಂಗದ ಪ್ರಮುಖ ನಿರ್ಮಾಪಕರಾದ ಶರದ್ ದೇವರಾಜನ್ ಅವರು 'ದಿ ಲೆಜೆಂಡ್ ಆಫ್ ಹನುಮಾನ್', 'ಬಾಹುಬಲಿ: ದಿ ಲಾಸ್ಟ್ ಲೆಜೆಂಡ್ಸ್' ಹಾಗೂ 'ಬಾಹುಬಲಿ: ಕ್ರೌನ್ ಆಫ್ ಬ್ಲಡ್'ನಂತಹ ಸೂಪರ್ ಹಿಟ್ ಅನಿಮೇಷನ್ ಸರಣಿಗಳ ರೂವಾರಿಯಾಗಿದ್ದಾರೆ. ಜೊತೆಗೆ, ಮಾರ್ವೆಲ್ ಸಂಸ್ಥೆಗಾಗಿ ಭಾರತೀಯ ಸ್ಪೈಡರ್‌ಮ್ಯಾನ್ 'ಪವಿತ್ರ ಪ್ರಭಾಕರ್' ಪಾತ್ರವನ್ನು ಸೃಷ್ಟಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇಷ್ಟೇ ಅಲ್ಲದೆ, ಆಸ್ಕರ್ ನಾಮನಿರ್ದೇಶನಗೊಂಡಿದ್ದ 'ಸ್ಪೈಡರ್‌ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್' ಚಿತ್ರದ ಹಿಂದೆಯೂ ಇವರು ಕಾರ್ಯನಿರ್ವಹಿಸಿದ್ದಾರೆ.
ಭಾರತದ ಆಧ್ಯಾತ್ಮಿಕ ಹಾಗೂ ಯೋಗಿಕ ಪಾರಂಪರಿಕ ಶ್ರೀಮಂತಿಕೆಗೆ ಯಾವುದೇ ಕುಂದು ಬಾರದಂತೆ, ಎಲ್ಲ ತಲೆಮಾರಿನ ಹಾಗೂ ಸಂಸ್ಕೃತಿಯ ಪ್ರೇಕ್ಷಕರು ಆನಂದಿಸುವಂತೆ ಜಾಗತಿಕ ಮಾನದಂಡದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ ಎಂದು ಶರದ್ ದೇವರಾಜನ್ ಸ್ಪಷ್ಟಪಡಿಸಿದ್ದಾರೆ. ಬಿರುಸಿನಿಂದ ಕೆಲಸ ಸಾಗುತ್ತಿರುವ ಈ ವಿಶ್ವಮಟ್ಟದ ಅನಿಮೇಷನ್ ಚಿತ್ರ 2027ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.


