ರಾಮಾಯಣ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನಟ ಯಶ್ ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಆಡಿದ ಪ್ರೀತಿಯ ಮಾತುಗಳು ಇದೀಗ ವೈರಲ್ ಆಗಿವೆ. ವೇದಿಕೆಯಿಂದಲೇ ‘ಮುದ್ದೂ ಬಾರಮ್ಮ ಇಲ್ಲಿ’ ಎಂದು ರಾಧಿಕಾ..
ನಟ ಯಶ್ ಸಿನಿಮಾ ವಿಚಾರಕ್ಕೆ ಬಂದಾಗ ಎಷ್ಟು ಸೀರಿಯಸ್ ಆಗಿರುತ್ತಾರೋ, ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಮಾತನಾಡುವಾಗ ಅಷ್ಟೇ ಭಾವುಕರಾಗುತ್ತಾರೆ. ಇದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದು ‘ರಾಮಾಯಣ’ ಚಿತ್ರದ ಪ್ರಚಾರ ಕಾರ್ಯಕ್ರಮ. ಬೆಂಗಳೂರಿನಲ್ಲಿ ನಡೆದ ‘ರಾಮಾಯಣ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಯಶ್ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ‘ಟಾಕ್ಸಿಕ್’ ಸಿನಿಮಾದ ಬೆಳವಣಿಗೆ, ಸೋಷಿಯಲ್ ಮೀಡಿಯಾದ ಟ್ರೆಂಡ್ಗಳು, ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಂಡರು.
ಆದರೆ, ಈ ಎಲ್ಲ ಮಾತುಗಳಿಗಿಂತ ಹೆಚ್ಚು ಸದ್ದು ಮಾಡಿದ್ದು ಮಾತ್ರ ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಯಶ್ ಆಡಿದ ಕೆಲವೇ ಮಾತುಗಳು. ಅದರಲ್ಲೂ ವೇದಿಕೆಯಿಂದಲೇ ‘ಮುದ್ದೂ ಬಾರಮ್ಮ ಇಲ್ಲಿ...’ ಎಂದು ರಾಧಿಕಾ ಅವರನ್ನು ಮುದ್ದಾಗಿ ಕರೆದ ಕ್ಷಣ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
‘ಮುದ್ದೂ ಬಾರಮ್ಮ ಇಲ್ಲಿ...’ ಎಂದ ಯಶ್
‘ರಾಮಾಯಣ’ ಚಿತ್ರದ ಪ್ರಚಾರ ಕಾರ್ಯಕ್ರಮದ ಕೊನೆಯಲ್ಲಿ ಚಿತ್ರತಂಡದ ಪ್ರಮುಖರು ವೇದಿಕೆಯ ಮೇಲೆ ಬಂದು ಗ್ರೂಪ್ ಫೋಟೋಗೆ ಪೋಸ್ ನೀಡುತ್ತಿದ್ದರು. ರಾಧಿಕಾ ಪಂಡಿತ್ ಚಿತ್ರತಂಡದ ಭಾಗವಾಗಿರದ ಕಾರಣ ಪ್ರೇಕ್ಷಕರ ನಡುವೆ ಕುಳಿತಿದ್ದರು. ಈ ವೇಳೆ ರಾಧಿಕಾ ಅವರನ್ನೂ ವೇದಿಕೆ ಮೇಲೆ ಕರೆಸಬೇಕು ಎಂಬ ಕೂಗು ಅಭಿಮಾನಿಗಳಿಂದ ಕೇಳಿಬಂದಿದೆ.
ಇದಕ್ಕೂ ಮೊದಲು ಸಾಯಿ ಪಲ್ಲವಿ ಕೂಡ ರಾಧಿಕಾ ಅವರನ್ನು ವೇದಿಕೆಗೆ ಬರುವಂತೆ ಕರೆದಿದ್ದರು. ಆದರೆ ರಾಧಿಕಾ ಮಾತ್ರ ನಗುತ್ತಲೇ ತಮ್ಮ ಜಾಗದಲ್ಲೇ ಕುಳಿತಿದ್ದರು. ಕೊನೆಗೆ ಯಶ್ ಅವರೇ ರಾಧಿಕಾ ಅವರನ್ನು ವೇದಿಕೆಗೆ ಕರೆದಿದ್ದಾರೆ. ಆದರೆ, ಕೇವಲ ಹೆಸರಿಡಿದು ಕರೆಯದೆ, ‘ಮುದ್ದೂ ಬಾರಮ್ಮ ಇಲ್ಲಿ...’ ಎಂದು ಮುದ್ದಾಗಿ ಕರೆದಿದ್ದಾರೆ. ಯಶ್ ಅವರ ಈ ಮಾತಿಗೆ ರಾಧಿಕಾ ಕೂಡ ನಗುತ್ತಾ ವೇದಿಕೆ ಏರಿದ್ದಾರೆ. ಈ ಸಣ್ಣ ಕ್ಷಣವೇ ಇದೀಗ ಯಶ್-ರಾಧಿಕಾ ಅಭಿಮಾನಿಗಳ ಗಮನ ಸೆಳೆದಿದೆ.
‘ರಾಧಿಕಾನೇ ನನ್ನ ಪಾಲಿನ ಸೀತೆ’
ಇದಾದ ಬಳಿಕ ಯಶ್ ಮಾತನಾಡಿದ ಮಾತುಗಳು ಮತ್ತಷ್ಟು ವೈರಲ್ ಆಗಿವೆ. ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಮದುವೆಯಾದ ಮಹಿಳೆಯರು ತಮ್ಮ ಹೆಸರಿನೊಂದಿಗೆ ಪತಿಯ ಹೆಸರನ್ನು ಬಳಸುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಪತಿಯನ್ನೇ ಪತ್ನಿಯ ಹೆಸರಿನ ಮೂಲಕ ಗುರುತಿಸುವ ಸಂಪ್ರದಾಯವೂ ಇತ್ತು ಎಂಬುದನ್ನು ಯಶ್ ಪ್ರಸ್ತಾಪಿಸಿದರು.
ಸೀತಾಪತಿ, ಲಕ್ಷ್ಮೀಪತಿ ಎನ್ನುವ ಹೆಸರುಗಳನ್ನು ಉದಾಹರಣೆಯಾಗಿ ನೀಡಿದ ಯಶ್, ಅದೇ ರೀತಿಯಲ್ಲಿ ‘ನಾನು ರಾಧಿಕಾ ಪತಿ’ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ರಾಧಿಕಾನೇ ತನ್ನ ಪಾಲಿನ ಸೀತೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಯಶ್ ಅವರ ಈ ಮಾತುಗಳು ಕಾರ್ಯಕ್ರಮದಲ್ಲಿದ್ದವರ ಗಮನ ಸೆಳೆದಿದ್ದು, ಬಳಿಕ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ.
‘ರಾಯ’ ಆಗಲಿ, ‘ರಾಜಾಹುಲಿ’ ಆಗಲಿ...
ಯಶ್ ತಮ್ಮ ಸಿನಿಮಾಗಳಲ್ಲಿ ಯಾವ ರೀತಿಯ ಪಾತ್ರ ಮಾಡಿದರೂ, ಮನೆಗೆ ಬಂದಾಗ ರಾಧಿಕಾ ಅವರ ಪತಿಯಾಗಿಯೇ ಇರುತ್ತಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ‘ರಾಯ ಆಗಲಿ, ರಾಜಾಹುಲಿ ಆಗಲಿ, ರಾಮಾಯಣದ ರಾವಣನೇ ಆಗಲಿ, ಮನೆಗೆ ಬಂದರೆ ನಾನು ರಾಧಿಕಾಪತಿಯೇ’ ಎಂಬ ಯಶ್ ಅವರ ಮಾತು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.
ತೆರೆ ಮೇಲೆ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುವ ಯಶ್, ವೈಯಕ್ತಿಕ ಜೀವನದ ವಿಚಾರ ಬಂದಾಗ ಪತ್ನಿಯ ಬಗ್ಗೆ ಈ ರೀತಿ ಪ್ರೀತಿಯಿಂದ ಮಾತನಾಡುವುದು ಅಭಿಮಾನಿಗಳಿಗೆ ಹೊಸದೇನಲ್ಲ. ಆದರೆ, ಈ ಬಾರಿ ‘ರಾಧಿಕಾಪತಿ’ ಎನ್ನುವ ಪದ ಬಳಕೆ ಮಾಡಿರುವುದು ವಿಶೇಷವಾಗಿ ಗಮನ ಸೆಳೆದಿದೆ.
ಯಶ್-ರಾಧಿಕಾ ಜೋಡಿಗೆ ಅಭಿಮಾನಿಗಳ ಮೆಚ್ಚುಗೆ
ಯಶ್ ಹಾಗೂ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ, ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಧಿಕಾ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಸಮಯದಲ್ಲೇ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಮಕ್ಕಳಾದ ಬಳಿಕ ಸಿನಿಮಾ ಕ್ಷೇತ್ರದಿಂದ ದೂರ ಉಳಿದು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ವಿಚಾರವನ್ನು ಯಶ್ ಹಲವು ಸಂದರ್ಭಗಳಲ್ಲಿ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.
‘ನನ್ನನ್ನು ಸಹಿಸಿಕೊಂಡು ಬಾಳುವುದು ಸುಲಭವಲ್ಲ’
ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಯಶ್, ತಮ್ಮ ಜೀವನದಲ್ಲಿ ರಾಧಿಕಾ ಅವರ ಪಾತ್ರದ ಬಗ್ಗೆ ಭಾವುಕರಾಗಿ ಮಾತನಾಡಿದ್ದರು. ಸಿನಿಮಾ, ಕೆಲಸ ಹಾಗೂ ಹಲವು ಸಾಹಸಗಳಲ್ಲಿ ಸದಾ ಬ್ಯುಸಿಯಾಗಿರುವ ತಮ್ಮನ್ನು ಅರ್ಥ ಮಾಡಿಕೊಂಡು ಜೊತೆಯಾಗಿ ಸಾಗುವುದು ಸುಲಭದ ವಿಚಾರವಲ್ಲ ಎಂದು ಹೇಳಿದ್ದ ಯಶ್, ರಾಧಿಕಾ ತಮ್ಮ ಜೀವನದಲ್ಲಿ ನೀಡಿರುವ ಬೆಂಬಲವನ್ನು ಕೊಂಡಾಡಿದ್ದರು. ಮಕ್ಕಳಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಿರುವ ರಾಧಿಕಾ ಅವರ ತ್ಯಾಗ ಹಾಗೂ ಬೆಂಬಲವೇ ತಮ್ಮ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದೆ ಎಂಬ ಅರ್ಥದಲ್ಲಿ ಯಶ್ ಮಾತನಾಡಿದ್ದರು.
ಹೀಗಾಗಿ ‘ರಾಮಾಯಣ’ ಪ್ರಚಾರ ವೇದಿಕೆಯಲ್ಲಿ ಯಶ್ ಆಡಿದ ‘ನಾನು ರಾಧಿಕಾಪತಿ’ ಎನ್ನುವ ಮಾತು ಅಭಿಮಾನಿಗಳಿಗೆ ಮತ್ತೊಮ್ಮೆ ಈ ಜೋಡಿಯ ನಡುವಿನ ಪ್ರೀತಿ ಹಾಗೂ ಬಾಂಧವ್ಯವನ್ನು ನೆನಪಿಸಿದೆ. ತೆರೆ ಮೇಲೆ ‘ರಾಯ’, ‘ರಾಜಾಹುಲಿ’ ಅಥವಾ ‘ರಾವಣ’ ಆಗಿ ಅಬ್ಬರಿಸುವ ಯಶ್, ರಾಧಿಕಾ ಮುಂದೆ ಮಾತ್ರ ‘ರಾಧಿಕಾಪತಿ’ ಎನ್ನುವ ಮಾತೇ ಈಗ ಸೋಷಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗಿದೆ.


