Ramika Shivu theater visit: ‘ಪ್ರೇಮದ ಊರಲಿ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ರಮಿಕಾ ಶಿವು, ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುತ್ತಾ ಕೆಲವು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಲೈವ್‌ಗೆ ಬಂದಿದ್ದ ನಟಿ ರಮಿಕಾ ಶಿವು, ತಮ್ಮ ಅಭಿಮಾನಿಗಳ ಜೊತೆ ಮುಕ್ತವಾಗಿ ಹರಟೆ ಹೊಡೆದಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದು, ತಮ್ಮ ಮುಂಬರುವ ಸಿನಿಮಾ ಹಾಗೂ ‘ಪ್ರೇಮದ ಊರಲಿ 2' ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಬರೋದು ಡೌಟ್!

ಅಭಿಮಾನಿಯೊಬ್ಬರು ‘ಪ್ರೇಮದ ಊರಲಿ 2' ಸಿನಿಮಾ ಬರುತ್ತಾ'? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪ್ರಕಾರ ‘ಪ್ರೇಮದ ಊರಲಿ 2 ಬರೋದಿಲ್ಲ ಅನ್ಸುತ್ತೆ. ಈ ಬಗ್ಗೆ ನಿರ್ದೇಶಕ ಮನೋಜ್ ಸರ್ ಕೂಡ ಮಾತನಾಡಿದ್ದಾರೆ. ಕೆಲವೊಂದು ಕಥೆಗಳನ್ನು ಮೊದಲ ಭಾಗದಲ್ಲೇ ಹಾಗೇ ಬಿಟ್ಟುಬಿಡಬೇಕು, ಅದೊಂದು ಬ್ಯೂಟಿಫುಲ್ ಚಾಪ್ಟರ್. ಅದನ್ನು ಹಾಗೇ ಬಿಟ್ಟರೇನೇ ಚೆಂದ. ಹೀಗಾಗಿ ಎರಡನೇ ಭಾಗ ಬರೋದು ಕಷ್ಟ ಎಂದು ಸ್ಪಷ್ಟಪಡಿಸಿದರು.

"ನೆಕ್ಸ್ಟ್ ಸಿನಿಮಾ ಬಗ್ಗೆ ನಾನೇ ಹೇಳ್ತೀನಿ"

ಇನ್ನು ತಮ್ಮ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಉತ್ತರಿಸಿ, ನನ್ನ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲವೂ ಅಧಿಕೃತವಾಗಿ ಕನ್ಫರ್ಮ್ ಆದ ಮೇಲೆ ನಾನೇ ಖುದ್ದಾಗಿ ಅನೌನ್ಸ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಬಳ್ಳಾರಿಯ ಅಭಿಮಾನಿಗಳು ಊರಿಗೆ ಬರುವಂತೆ ಆಹ್ವಾನಿಸಿದಾಗ, ಖಂಡಿತವಾಗಿಯೂ ಬಳ್ಳಾರಿಗೆ ಬರಬೇಕು, ಶೀಘ್ರದಲ್ಲೇ ಬರ್ತೀವಿ ಎಂದು ಭರವಸೆ ನೀಡಿದರು.

ಲೈವ್‌ನಲ್ಲಿ ಅಭಿಮಾನಿಗಳು ನಿಮ್ಮ ಈ ಕ್ಯೂಟ್ ಸ್ಮೈಲ್ ಹೀಗೇ ಇರಲಿ ಎಂದು ಕಾಮೆಂಟ್ ಮಾಡಿದಾಗ ಭಾವುಕರಾದ ನಟಿ, ನನ್ನ ಈ ನಗುವಿಗೆ ನೀವೇ ಕಾರಣ. ಸಿನಿಮಾದ ಥಿಯೇಟರ್ ವಿಸಿಟ್ ಮಾಡುವಾಗ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗುತ್ತಿದ್ದೆವು. ಅವರ ಪ್ರೀತಿ ನೋಡಿ ದಿನವಿಡೀ ನಕ್ಕು ನಕ್ಕು ನೈಟ್ ಮನೆಗೆ ಬರುವಾಗ ಮುಖ, ಕೆನ್ನೆ ಎಲ್ಲವೂ ಪೇನ್ ಆಗ್ತಿತ್ತು. ಅಷ್ಟರಮಟ್ಟಿಗೆ ನಿಮ್ಮ ಪ್ರೀತಿ ನಮಗೆ ಖುಷಿ ಕೊಟ್ಟಿದೆ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.

ಸ್ಯಾಂಡಲ್‌ವುಡ್‌ನ ‘ಪ್ರೇಮದ ಊರಲಿ’ ಚಿತ್ರದ ಮೂಲಕ ಗಮನ ಸೆಳೆದಿರುವ ಯುವ ಪ್ರತಿಭೆ ರಮಿಕಾ ಶಿವು, ತಮ್ಮ ಚೊಚ್ಚಲ ಹೆಜ್ಜೆಯಲ್ಲೇ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿನ ಅವರ ಮುಗ್ಧ ನೋಟ ಹಾಗೂ ಸಹಜ ಅಭಿನಯಕ್ಕೆ ಪ್ರೇಕ್ಷಕರಿಂದ ಹಾಗೂ ಗಾಂಧಿನಗರದ ಸಿನಿ ಪಂಡಿತರಿಂದ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ.

ನಿರ್ದೇಶಕ ಮನೋಜ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಮಿಕಾ ಶಿವು ಅವರದ್ದು ಕಥೆಯ ಓಟಕ್ಕೆ ಅತ್ಯಂತ ಮಹತ್ವದ ಪಾತ್ರ. ಕೇವಲ ಗ್ಲಾಮರ್‌ಗೆ ಸೀಮಿತವಾಗದೆ, ನಟನೆಗೆ ಹೆಚ್ಚು ಆಸ್ಪದವಿರುವ ಗಟ್ಟಿ ಪಾತ್ರವನ್ನು ಹೊತ್ತು ನಿಂತಿದ್ದ ರಮಿಕಾ, ಪ್ರತಿಯೊಂದು ದೃಶ್ಯದಲ್ಲೂ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ.

ಕಣ್ಣಲ್ಲೇ ನೋವು ತರಿಸಿದ ಎಮೋಷನಲ್ ದೃಶ್ಯಗಳು

ವಿಶೇಷವಾಗಿ ಚಿತ್ರದ ದ್ವಿತೀಯಾರ್ಧ ಹಾಗೂ ಕ್ಲೈಮ್ಯಾಕ್ಸ್‌ನ ಭಾವನಾತ್ಮಕ ಸನ್ನಿವೇಶಗಳಲ್ಲಿ ರಮಿಕಾ ಅವರ ಅಭಿನಯ ಪ್ರೇಕ್ಷಕರ ಕಣ್ಣಂಚಲಿ ನೀರು ತರಿಸಿದೆ. ಪ್ರೀತಿ, ಆತಂಕ ಹಾಗೂ ನೋವನ್ನು ತಮ್ಮ ಕಣ್ಣುಗಳ ಮುಖಾಂತರವೇ ಅದ್ಭುತವಾಗಿ ಕಟ್ಟಿಕೊಟ್ಟಿರುವ ಅವರ ನಟನಾ ಕೌಶಲಕ್ಕೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿದ್ದಾರೆ.

ತಮ್ಮ ಮೊದಲ ಪ್ರಯತ್ನದಲ್ಲೇ ಇಂತಹ ಕಷ್ಟಕರ ಎಮೋಷನಲ್ ದೃಶ್ಯಗಳನ್ನು ನಿಭಾಯಿಸಿರುವ ರಮಿಕಾ ಅವರ ಮುಗ್ಧತೆಗೆ ಸೋಶಿಯಲ್ ಮೀಡಿಯಾದಲ್ಲೂ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆಯ ಪ್ರತಿಭಾವಂತ ನಟಿ ಸಿಕ್ಕಂತಾಗಿದೆ ಎಂದು ಸಿನಿಪ್ರಿಯರು ಕೊಂಡಾಡುತ್ತಿದ್ದು, ಈ ಚಿತ್ರದ ಯಶಸ್ಸಿನ ಬಳಿಕ ರಮಿಕಾ ಶಿವು ಅವರ ಮುಂದಿನ ಪ್ರಾಜೆಕ್ಟ್‌ಗಳ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.