'ಟಾಕ್ಸಿಕ್' ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಅವುಗಳಲ್ಲಿ ಒಂದು ವಿಶೇಷ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತದ ಸಂಪೂರ್ಣ ಜವಾಬ್ದಾರಿಯನ್ನೂ ಅವರು ಹೊತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸಿಕೊಳ್ಳುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಪ್ಯಾನ್‌ ಇಂಡಿಯಾ ಚಿತ್ರವನ್ನು ಪ್ರೇಕ್ಷಕರು ಕಾತರದಿಂದ ಎದುರು ನೋಡುತ್ತಿರುವಾಗ, ಇದೀಗ ಸಂಗೀತ ನಿರ್ದೇಶಕ ರವಿ ಬಸ್ರೂರು ಹೊಸ ಅಪ್‌ಡೇಟ್‌ ನೀಡಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಮ್ಯೂಸಿಕ್ ಸ್ಟುಡಿಯೋದಲ್ಲಿ ನೂರಾರು ಕಲಾವಿದರೊಂದಿಗೆ ತೆಗೆದಿರುವ ಫೋಟೊವನ್ನು ಹಂಚಿಕೊಂಡಿರುವ ರವಿ ಬಸ್ರೂರು, "100 ಸದಸ್ಯರ ಆರ್ಕೆಸ್ಟ್ರಾ... ದೊಡ್ಡ ಪರದೆಯ ಮೇಲೆ ಗರಿಷ್ಠ ಪ್ರಭಾವ" ಎಂದು ಬರೆದುಕೊಂಡಿದ್ದಾರೆ. ಈ ಒಂದು ಪೋಸ್ಟ್ ಸಾಕು, 'ಟಾಕ್ಸಿಕ್' ಸಿನಿಮಾದ ಸಂಗೀತ ಎಷ್ಟು ಭವ್ಯವಾಗಿರಬಹುದು ಎಂಬ ಚರ್ಚೆ ಈಗಾಗಲೇ ಸಿನಿಪ್ರಿಯರಲ್ಲಿ ಶುರುವಾಗಿದೆ.

100 ಜನರ ಬೃಹತ್ ಆರ್ಕೆಸ್ಟ್ರಾದೊಂದಿಗೆ ರೆಕಾರ್ಡಿಂಗ್ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಈ ಆರ್ಕೆಸ್ಟ್ರಾವನ್ನು ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಬಳಸಲಾಗುತ್ತಿದೆಯೋ ಅಥವಾ ವಿಶೇಷ ಹಾಡೊಂದಕ್ಕಾಗಿ ಬಳಸಲಾಗುತ್ತಿದೆಯೋ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ. ಯಾವ ಕಾರಣವಾಗಿದ್ದರೂ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಅದ್ದೂರಿ ಸೌಂಡ್ ಅನುಭವ ನೀಡಲು ಚಿತ್ರತಂಡ ಭರ್ಜರಿ ಸಿದ್ಧತೆ ನಡೆಸಿದೆ ಎಂಬುದು ಸ್ಪಷ್ಟ.

ಮಾಹಿತಿಯ ಪ್ರಕಾರ, 'ಟಾಕ್ಸಿಕ್' ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಅವುಗಳಲ್ಲಿ ಒಂದು ವಿಶೇಷ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತದ ಸಂಪೂರ್ಣ ಜವಾಬ್ದಾರಿಯನ್ನೂ ಅವರು ಹೊತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದು ಭರ್ಜರಿ ಪ್ರತಿಕ್ರಿಯೆ ಪಡೆದಿದ್ದು, ಚಿತ್ರದ ಸಂಗೀತದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಇದರ ನಡುವೆ ಆಗಸ್ಟ್‌ 8ರಂದು ಬಿಡುಗಡೆಯಾಗಲಿರುವ 'ಟಾಕ್ಸಿಕ್' ಟ್ರೇಲರ್‌ಗಾಗಿ ಚಿತ್ರತಂಡ ಭಾರೀ ತಯಾರಿ ನಡೆಸಿದೆ. ಯಶ್ ಅವರ ತವರು ನಗರ ಬೆಂಗಳೂರಿನಲ್ಲಿ ಅದ್ದೂರಿ ಟ್ರೇಲರ್ ಲಾಂಚ್ ಕಾರ್ಯಕ್ರಮ ಆಯೋಜಿಸುವ ಯೋಜನೆ ರೂಪಿಸಲಾಗಿದ್ದು, ಭಾರತೀಯ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಬಿಡುಗಡೆಯಾದ ಟಾಮಿ ಗನ್ ಹಿಡಿದ ಯಶ್ ಅವರ ನೆರಳಿನ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ರೇಲರ್ ಯಾವ ಮಟ್ಟದ ಸದ್ದು ಮಾಡಲಿದೆ ಎಂಬ ಕುತೂಹಲ ಹೆಚ್ಚಾಗಿದ್ದು, ಆಗಸ್ಟ್‌ 26ರಂದು ಸಿನಿಮಾ ಬಿಡುಗಡೆಯಾಗುವ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Scroll to load tweet…