Sangeetha Sringeri Trek: ಕನ್ನಡ ಚಿತ್ರರಂಗದ ನಟಿ ಹಾಗೂ 'ಬಿಗ್‌ ಬಾಸ್ ಕನ್ನಡ ಸೀಸನ್‌ 10' ಮಾಜಿ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಉತ್ತರಾಖಂಡದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಆದರೆ ಈ ಪ್ರವಾಸದ ವಿಶೇಷತೆ ಬೇರೆ.

ಕನ್ನಡ ಚಿತ್ರರಂಗದ ನಟಿ ಹಾಗೂ 'ಬಿಗ್‌ ಬಾಸ್ ಕನ್ನಡ ಸೀಸನ್‌ 10' ಮಾಜಿ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಉತ್ತರಾಖಂಡದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಆದರೆ ಈ ಪ್ರವಾಸದ ವಿಶೇಷತೆ ಬೇರೆ. ಸಾಮಾನ್ಯವಾಗಿ ನಟ-ನಟಿಯರು ಸ್ನೇಹಿತರೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಆದರೆ ಸಂಗೀತಾ ತಮ್ಮ ಅಪ್ಪ-ಅಮ್ಮನೊಂದಿಗೆ ಹಿಮಾಲಯದ ಮಡಿಲಲ್ಲಿ ಚಾರಣ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಹೇಮಕುಂಡ್‌ ಚಾರಣದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಂಗೀತಾ, ಆ ಅನುಭವವನ್ನು ತಮ್ಮ ಜೀವನದ ಅತ್ಯಂತ ಅಮೂಲ್ಯ ನೆನಪುಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ. ಜುಲೈ 27ರಂದು ನಡೆದ ಚಾರಣದ ಫೋಟೊಗಳನ್ನು ಹಂಚಿಕೊಂಡ ಅವರು, "ಹೇಮಕುಂಡ್ ಟ್ರೆಕ್ ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಿತ್ತು" ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಚಿತ್ರದಲ್ಲಿ ಅಪರೂಪದ ಹಿಮಾಲಯನ್ ಬ್ಲೂ ಪಾಪಿ (Himalayan Blue Poppy) ಹೂವನ್ನು ಕಂಡ ಸಂತಸವನ್ನೂ ವ್ಯಕ್ತಪಡಿಸಿದ್ದು, "ಪ್ರಪಂಚದ ತುದಿಯಲ್ಲಿ ಹಿಮಾಲಯನ್ ಬ್ಲೂ ಪಾಪಿ ಸಿಕ್ಕಿತು" ಎಂದು ಹಂಚಿಕೊಂಡಿದ್ದಾರೆ. ಪ್ರವಾಸದ ಮತ್ತೊಂದು ಚಿತ್ರಕ್ಕೆ, "ಜಗತ್ತು ತನ್ನ ಪಯಣವನ್ನು ಮುಂದುವರಿಸುತ್ತಲೇ ಇರುತ್ತದೆ... ನಾವು ಕೂಡ ಅದರೊಂದಿಗೆ ಸಾಗುತ್ತಲೇ ಇರಬೇಕು" ಎಂಬ ಅರ್ಥಪೂರ್ಣ ಸಾಲುಗಳನ್ನು ಬರೆದು ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸಂಗೀತಾ ಅವರ ಈ ಪೋಸ್ಟ್‌ಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. "ಇವೇ ಜೀವನದ ನಿಜವಾದ ನೆನಪುಗಳು", "ನಿಮ್ಮ ಈ ಪ್ರಯಾಣ ಸದಾ ಸ್ಮರಣೀಯವಾಗಿರಲಿ", "ಇಂತಹ ಅನುಭವ ಎಲ್ಲರಿಗೂ ಸಿಗುವುದಿಲ್ಲ" ಎಂಬ ನೂರಾರು ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ.

'ಸಿಂಹಿಣಿ' ಅಭಿಮಾನಿ ಬಳಗ

ಇನ್ನು ಸಂಗೀತಾ ಶೃಂಗೇರಿ ಅವರು 'ಹರಹರ ಮಹಾದೇವ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡರು. ಬಳಿಕ 'ಎ+', '777 ಚಾರ್ಲಿ', 'ಲಕ್ಕಿಮ್ಯಾನ್', 'ಪಂಪ-ಪಂಚಳ್ಳಿ ಪರಶಿವಮೂರ್ತಿ', 'ಶಿವಾಜಿ ಸುರತ್ಕಲ್ 2', 'ಮಾರಿಗೋಲ್ಡ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 'ಬಿಗ್‌ ಬಾಸ್ ಕನ್ನಡ ಸೀಸನ್‌ 10' ಮೂಲಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಕಾರ್ಯಕ್ರಮದ ನಂತರ ಅವರ ಅಭಿಮಾನಿಗಳು 'ಸಿಂಹಿಣಿ' ಎಂಬ ಅಭಿಮಾನಿ ಬಳಗವನ್ನು ರೂಪಿಸಿದ್ದು, ಇದೇ ಹೆಸರಿನಲ್ಲಿ ಸಂಗೀತಾ ತಮ್ಮ ಹೊಸ ವ್ಯವಹಾರವನ್ನೂ ಆರಂಭಿಸಿದ್ದಾರೆ.