Jolly Movie Review: ತಾರುಷ್ ನಟನೆಯ, ನಿರ್ದೇಶನದ ಮೇಲಿನ ಪ್ರೇಮದಲ್ಲಿ ಈ ಸಿನಿಮಾ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸ್ಟೈಲಿಷ್ ಫೈಟುಗಳು, ವೇಗದ ಡಾನ್ಸುಗಳು, ಪ್ರೇಮ ಸಾರುವ ಹಾಡುಗಳನ್ನು ಇಟ್ಟಿದ್ದಾರೆ.

ಆರ್.ಎಸ್.

ತಾರುಣ್ಯದ ಹುಮ್ಮಸ್ಸಿನಲ್ಲಿ ಮೂಡಿಬಂದಿರುವ ಸಿನಿಮಾ. ನವಿರು ಪ್ರೇಮ, ತಂದೆ ಮಗಳ ಸೆಂಟಿಮೆಂಟು, ತಂದೆ ಮಗನ ಬಾಂಧವ್ಯ, ಸ್ನೇಹದ ಅಕ್ಕರೆಯನ್ನು ಆಧಾರವಾಗಿಟ್ಟುಕೊಂಡು ಕಟ್ಟಿರುವ ಪಕ್ಕಾ ಮನರಂಜನಾತ್ಮಕ ಸಿನಿಮಾ.

ತಾರುಷ್ ನಟನೆಯ, ನಿರ್ದೇಶನದ ಮೇಲಿನ ಪ್ರೇಮದಲ್ಲಿ ಈ ಸಿನಿಮಾ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸ್ಟೈಲಿಷ್ ಫೈಟುಗಳು, ವೇಗದ ಡಾನ್ಸುಗಳು, ಪ್ರೇಮ ಸಾರುವ ಹಾಡುಗಳನ್ನು ಇಟ್ಟಿದ್ದಾರೆ. ಸಹಜವಾಗಿ ಪ್ರೇಮ ಕತೆಯಂತೆ ಶುರುವಾಗುವ ಸಿನಿಮಾ ಹಲವು ತಿರುವುಗಳನ್ನು ಹಾದುಹೋಗುತ್ತದೆ. ಒಂದೊಂದು ತಿರುವು ದಾಟಿದಂತೆಯೂ ಪ್ರೇಮದಿಂದ ತಂದೆ ಮಗಳ ಜಗಳಕ್ಕೆ, ಅಲ್ಲಿಂದ ತಾಕಲಾಟಕ್ಕೆ, ತಂದೆ ಮಗನ ಕರುಣಕಥನಕ್ಕೆ ಬದಲಾಗುತ್ತಿರುತ್ತದೆ.

ಚಿತ್ರದ ನಾಯಕ ತನ್ನ ಹುಡುಗಿಯಲ್ಲಿ ಅಮ್ಮನನ್ನು ಕಂಡರೆ, ಆ ಹುಡುಗಿ ಆತನಲ್ಲಿ ತಂದೆಯನ್ನು ಕಾಣುತ್ತಿರುತ್ತಾಳೆ. ಒಬ್ಬ ತಂದೆ ಅತೀವವಾಗಿ ಪ್ರೀತಿಸಿದರೆ, ಇನ್ನೊಬ್ಬ ತಂದೆಗೆ ಪ್ರೀತಿಯ ವ್ಯಾಖ್ಯಾನವೇ ಬೇರೆಯಾಗಿರುತ್ತದೆ. ಹೀಗಾಗಿ ಲವಲವಿಕೆಯಿಂದ ಸಾಗುವ ಸಿನಿಮಾ ನಿಧಾನಕ್ಕೆ ಭಾವನಾತ್ಮಕವಾಗಿ ಬದಲಾಗುತ್ತದೆ. ತುಂಬಾ ತಲೆಕೆಡಿಸಿಕೊಳ್ಳದೆ, ಯಾವುದೇ ನಿರೀಕ್ಷೆಯಿಲ್ಲದೆ ಹೊಸಬರು ಹೆಣೆದಿರುವ ಹಗುರವಾದ, ಲಘುವಾದ ಒಂದು ಕತೆಯನ್ನು ನೋಡುವ ಮನಸ್ಸಿರುವವರಿಗೆ ಈ ಸಿನಿಮಾ ಸೊಗಸಾಗಿ ಮೂಡಿಬಂದಿದೆ.

ಚಿತ್ರ: ಜಾಲಿ

ನಿರ್ದೇಶನ: ತಾರುಷ್

ತಾರಾಗಣ: ತಾರುಷ್, ಪದ್ಮಶ್ರೀ ಜೈನ್, ಕೃಷ್ಣಪ್ಪ ವೇಣುಗೋಪಾಲ್‌, ಶೋಭರಾಜ್, ಸುಷ್ಮಿತಾ

ರೇಟಿಂಗ್: 3

ಕೆಲವು ಅನಗತ್ಯ ಅಂಶಗಳನ್ನು ನೆಚ್ಚಿಕೊಳ್ಳದಿದ್ದರೆ ಚಿತ್ರಕತೆಯ ತೂಕ ಹೆಚ್ಚಾಗುತ್ತಿತ್ತು. ಅದರ ಹೊರತಾಗಿ ತಾರುಷ್ ಹುಮ್ಮಸ್ಸನ್ನು, ಶ್ರಮವನ್ನು ಈ ಚಿತ್ರ ಕಾಣಿಸುತ್ತದೆ. ಚಿತ್ರರಂಗದಲ್ಲಿ ನೆಲೆಯೂರಲು ಅವರು ಮಾಡಿರುವ ಪ್ರಯತ್ನವೂ ಮನದಟ್ಟಾಗುತ್ತದೆ. ಪದ್ಮಶ್ರೀ ಜೈನ್, ಕೃಷ್ಣಪ್ಪ, ಶೋಭರಾಜ್ ಸೊಗಸಾಗಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಬರುವ ಬಹುತೇಕ ಹೊಸಬರು ತಮ್ಮೆಲ್ಲಾ ಶ್ರಮ, ಪ್ರತಿಭೆಯನ್ನು ಧಾರೆ ಎರೆದು ಸಿನಿಮಾ ಮಾಡುತ್ತಾರೆ. ಇದು ಅಂಥದ್ದೇ ಒಂದು ಆಕರ್ಷಕ ಪ್ರಯತ್ನ.