ನಿತೇಶ್ ತಿವಾರಿ ನಿರ್ದೇಶನದ ಹಾಗೂ ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ' ಸಿನಿಮಾವು 2026ರ ನವೆಂಬರ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ದಕ್ಷಿಣ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಈ ಸಿನಿಮಾ ಸುಮಾರು ₹27 ರಿಂದ ₹38 ಕೋಟಿ ಗಳಿಸಬಹುದು ಎಂದು ಚಿತ್ರರಂಗದ ವ್ಯಾಪಾರ ವಿಶ್ಲೇಷಕರು ಅಂದಾಜಿಸಿದ್ದಾರೆ.

ಬೆಂಗಳೂರು(ಅ.31) ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಮೂಲಕ ನಿರ್ದೇಶಕ ನಿತೇಶ್ ತಿವಾರಿ ಭಾರತದ ಮಹಾಕಾವ್ಯವನ್ನು ಎರಡು ಭಾಗಗಳಲ್ಲಿ ಬೆಳ್ಳಿತೆರೆಗೆ ತರಲು ಸಜ್ಜಾಗಿದ್ದಾರೆ. 'ರಾಮಾಯಣ' ಮೊದಲ ಭಾಗವು 2026ರ ನವೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಶೇಷ ಪ್ರದರ್ಶನದ ಬಳಿಕ ಚಿತ್ರದ ಕುರಿತು ಮೊದಲ ಪ್ರತಿಕ್ರಿಯೆಗಳು ಹೊರಬಂದಿವೆ.

ಆದರೆ ದಕ್ಷಿಣ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಪ್ರದರ್ಶನವು ಪ್ರತಿ ರಾಜ್ಯದಲ್ಲೂ ಒಂದೇ ರೀತಿಯಾಗಿರದೇ ಇರಬಹುದು. ಈ ಕುರಿತು ಜೂಮ್ ಜೊತೆಗಿನ ವಿಶೇಷ ಮಾತುಕತೆಯಲ್ಲಿ ಚಿತ್ರರಂಗದ ವ್ಯಾಪಾರ ವಿಶ್ಲೇಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕರ್ನಾಟಕ, ತೆಲುಗು ರಾಜ್ಯಗಳು ಚಿತ್ರಕ್ಕೆ ಬಲವಾದ ಮಾರುಕಟ್ಟೆಯಾಗುವ ನಿರೀಕ್ಷೆಯಿದ್ದರೆ, ತಮಿಳುನಾಡು ಮತ್ತು ಕೇರಳದಲ್ಲಿ ಬೇರೆ ಸಿನಿಮಾಗಳ ಪೈಪೋಟಿ ಸವಾಲಾಗಬಹುದು ಎಂದು ಅವರು ಅಂದಾಜಿಸಿದ್ದಾರೆ.

ದಕ್ಷಿಣ ಭಾರತದಲ್ಲಿ 'ರಾಮಾಯಣ' ಮೊದಲ ದಿನದ ಗಳಿಕೆ ಎಷ್ಟು?

ಚಿತ್ರರಂಗದ ವ್ಯಾಪಾರ ತಜ್ಞ ರಮೇಶ್ ಅವರ ಅಂದಾಜಿನ ಪ್ರಕಾರ, 'ರಾಮಾಯಣ' ದಕ್ಷಿಣ ಭಾರತದಾದ್ಯಂತ ಉತ್ತಮ ಆರಂಭ ಪಡೆಯುವ ಸಾಧ್ಯತೆಯಿದೆ. ಆದರೆ ತಮಿಳುನಾಡಿನಲ್ಲಿ ನಯನತಾರಾ ಅಭಿನಯದ 'ಮೂಕುತಿ ಅಮ್ಮನ್ 2' ಹಾಗೂ ಸೂರ್ಯ ನಟನೆಯ 'ಸೀನ್' ಸಿನಿಮಾಗಳು ಬಿಡುಗಡೆಯಾಗುವುದರಿಂದ ಪೈಪೋಟಿ ಎದುರಾಗಬಹುದು.

ರಮೇಶ್ ಅವರ ಅಂದಾಜಿನ ಪ್ರಕಾರ, ರಾಜ್ಯವಾರು ಮೊದಲ ದಿನದ ಒಟ್ಟು ಗಳಿಕೆ:

ಕರ್ನಾಟಕ: ₹12–15 ಕೋಟಿ

ಆಂಧ್ರ ಪ್ರದೇಶ, ತೆಲಂಗಾಣ: ₹10–15 ಕೋಟಿ

ತಮಿಳುನಾಡು: ₹3–5 ಕೋಟಿ

ಕೇರಳ: ₹2–3 ಕೋಟಿ

ಈ ಲೆಕ್ಕಾಚಾರದ ಪ್ರಕಾರ, ದಕ್ಷಿಣ ಭಾರತದಲ್ಲಿ 'ರಾಮಾಯಣ'ದ ಮೊದಲ ದಿನದ ಒಟ್ಟು ಗಳಿಕೆ ₹27 ಕೋಟಿಯಿಂದ ₹38 ಕೋಟಿ ಇರಬಹುದು. ಚಿತ್ರಕ್ಕೆ ಸಿಗುವ ಚಿತ್ರಮಂದಿರಗಳ ಸಂಖ್ಯೆ, ಪ್ರದರ್ಶನಗಳ ಹಂಚಿಕೆ ಮತ್ತು ಮುಂಗಡ ಟಿಕೆಟ್ ಬುಕ್ಕಿಂಗ್‌ಗಳ ಮೇಲೆ ನೈಜ ಗಳಿಕೆ ಅವಲಂಬಿತವಾಗಿರಲಿದೆ. “ದಕ್ಷಿಣ ಭಾರತದ ಪ್ರೇಕ್ಷಕರು ಪೌರಾಣಿಕ ಕಥಾಹಂದರದ ಸಿನಿಮಾಗಳನ್ನು ಯಾವಾಗಲೂ ಸ್ವಾಗತಿಸಿದ್ದಾರೆ. 'ಹನುಮಾನ್' ಮತ್ತು 'ಕಾಂತಾರ: ಚಾಪ್ಟರ್ 1' ಸಿನಿಮಾಗಳ ಯಶಸ್ಸು ಹಾಗೂ 'ಆದಿಪುರುಷ್' ಚಿತ್ರಕ್ಕೆ ದೊರೆತ ಭರ್ಜರಿ ಆರಂಭವು ಈ ಪ್ರಕಾರದ ಸಿನಿಮಾಗಳ ಬಾಕ್ಸ್ ಆಫೀಸ್ ಸಾಮರ್ಥ್ಯವನ್ನು ತೋರಿಸಿವೆ. ಸಾರ್ವತ್ರಿಕ ಆಕರ್ಷಣೆ, ಅದ್ಧೂರಿ ನಿರ್ಮಾಣ ಮತ್ತು ಯಶ್ ಅವರ ಉಪಸ್ಥಿತಿಯಿಂದ 'ರಾಮಾಯಣ' ದಕ್ಷಿಣ ಭಾರತದಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಬಹುದು” ಎಂದು ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

'ಅನಿಮಲ್', 'ಬ್ರಹ್ಮಾಸ್ತ್ರ' ಬಳಿಕ ರಣಬೀರ್‌ಗೆ ದಕ್ಷಿಣದಲ್ಲಿ ಮಾರುಕಟ್ಟೆ

ದಕ್ಷಿಣ ಭಾರತದಲ್ಲಿ ರಣಬೀರ್ ಕಪೂರ್ ಅವರ ಮಾರುಕಟ್ಟೆಯ ಬಗ್ಗೆಯೂ ರಮೇಶ್ ಮಾತನಾಡಿದ್ದಾರೆ. 'ಅನಿಮಲ್' ಮತ್ತು 'ಬ್ರಹ್ಮಾಸ್ತ್ರ' ಸಿನಿಮಾಗಳ ಪ್ರದರ್ಶನವನ್ನು ಅವರು ಉದಾಹರಣೆಯಾಗಿ ನೀಡಿದ್ದಾರೆ. 'ಅನಿಮಲ್' ಸಿನಿಮಾ ತೆಲುಗು ರಾಜ್ಯಗಳಲ್ಲಿ ಮೊದಲ ದಿನ ಸುಮಾರು ₹15.4 ಕೋಟಿ ಒಟ್ಟು ಗಳಿಕೆ ದಾಖಲಿಸಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಯ ವಾರಾಂತ್ಯದಲ್ಲಿ ದಕ್ಷಿಣ ಭಾರತದಾದ್ಯಂತ ₹30 ಕೋಟಿಗೂ ಹೆಚ್ಚು ನಿವ್ವಳ ಗಳಿಕೆ ಮಾಡಿತ್ತು ಎಂದು ತಿಳಿಸಿದ್ದಾರೆ.

ಆದರೆ ತಮಿಳುನಾಡು ಮತ್ತು ಕೇರಳದಲ್ಲಿ ರಣಬೀರ್ ಕಪೂರ್ ಅವರ ಸಿನಿಮಾಗಳಿಗೆ ಮಾರುಕಟ್ಟೆ ವಿಸ್ತರಿಸುವುದು ಇನ್ನೂ ಸವಾಲಿನ ಸಂಗತಿಯಾಗಿದೆ ಎಂಬುದು ಅವರ ಅಭಿಪ್ರಾಯ.

ತಮಿಳುನಾಡು, ಕೇರಳದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಸವಾಲು?

ಮತ್ತೊಬ್ಬ ಚಿತ್ರ ವ್ಯಾಪಾರ ತಜ್ಞ ರಾಜಶೇಖರ್ ಅವರ ಪ್ರಕಾರ, ಕರ್ನಾಟಕ ಮತ್ತು ತೆಲುಗು ರಾಜ್ಯಗಳು 'ರಾಮಾಯಣ'ದ ಪ್ರಮುಖ ಮಾರುಕಟ್ಟೆಗಳಾಗುವ ಸಾಧ್ಯತೆಯಿದೆ. ತಮಿಳುನಾಡು ಮತ್ತು ಕೇರಳದಲ್ಲಿ 'ಸೀನ್' ಹಾಗೂ 'ಮೂಕುತಿ ಅಮ್ಮನ್ 2' ಸಿನಿಮಾಗಳ ಪೈಪೋಟಿ ಚಿತ್ರದ ಆರಂಭಿಕ ಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.

“ದಕ್ಷಿಣ ಭಾರತದಲ್ಲಿ 'ರಾಮಾಯಣ'ದ ಮೊದಲ ದಿನದ ಒಟ್ಟು ಗಳಿಕೆ ಸುಮಾರು ₹10 ಕೋಟಿ ಇರಬಹುದು ಎಂಬುದು ನನ್ನ ಅಂದಾಜು. ಪೌರಾಣಿಕ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡುತ್ತವೆ. ಆದರೆ ತಮಿಳುನಾಡು ಮತ್ತು ಕೇರಳದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಯಾವಾಗಲೂ ಅದೇ ರೀತಿಯ ಸ್ವಾಗತ ಸಿಗುವುದಿಲ್ಲ. 'ಬಾಹುಬಲಿ' ಇದಕ್ಕೆ ಅಪವಾದ. ಕರ್ನಾಟಕ ಮತ್ತು ತೆಲುಗು ರಾಜ್ಯಗಳ ಪ್ರೇಕ್ಷಕರು ಡಬ್ಬಿಂಗ್ ಸಿನಿಮಾಗಳನ್ನು ಹೆಚ್ಚು ಸ್ವೀಕರಿಸುತ್ತಾರೆ. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ, ಅದರ ಗಳಿಕೆ ಹೆಚ್ಚಾಗುವುದು ಖಚಿತ” ಎಂದು ರಾಜಶೇಖರ್ ಹೇಳಿದ್ದಾರೆ.

'ರಾಮಾಯಣ' ಚಿತ್ರದ ತಾರಾಗಣ ಮತ್ತು ವಿತರಣೆ

'ರಾಮಾಯಣ' ಮೊದಲ ಭಾಗದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಚಿತ್ರವು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿ, ಐಮ್ಯಾಕ್ಸ್ ಚಿತ್ರಮಂದಿರಗಳು ಸೇರಿದಂತೆ ಸುಮಾರು 50,000 ಪರದೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಭಾರತದ ಹೊರಗಿನ ಅಂತರರಾಷ್ಟ್ರೀಯ ವಿತರಣೆಯನ್ನು ಸೋನಿ ಪಿಕ್ಚರ್ಸ್ ನಿರ್ವಹಿಸಲಿದೆ. ಹಿಂದಿ ಭಾಷೆಯ ಮಾರುಕಟ್ಟೆಯಲ್ಲಿ ಧರ್ಮಾ ಪ್ರೊಡಕ್ಷನ್ಸ್ ವಿತರಣೆಯ ಜವಾಬ್ದಾರಿ ವಹಿಸಲಿದೆ. ದಕ್ಷಿಣ ಭಾರತದಲ್ಲಿ ರಾಜ್ಯವಾರು ವಿತರಣೆಯ ಜವಾಬ್ದಾರಿಯೂ ಹಂಚಿಕೆಯಾಗಿದೆ. ತಮಿಳುನಾಡಿನಲ್ಲಿ ಥಿಂಕ್ ಸ್ಟುಡಿಯೋಸ್ ಚಿತ್ರವನ್ನು ವಿತರಿಸಲಿದೆ. ಕೇರಳದಲ್ಲಿ ಇ4 ಎಂಟರ್‌ಟೈನ್‌ಮೆಂಟ್, ಎವಿಎ ಜೊತೆಗೂಡಿ ವಿತರಣೆ ಮಾಡಲಿದೆ. ಕರ್ನಾಟಕದಲ್ಲಿ ಯಶ್ ಅವರ ಸ್ವಂತ ನಿರ್ಮಾಣ ಸಂಸ್ಥೆ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಚಿತ್ರದ ಚಿತ್ರಮಂದಿರಗಳ ಬಿಡುಗಡೆಯ ಜವಾಬ್ದಾರಿ ವಹಿಸಿಕೊಳ್ಳಲಿದೆ.