2008ರ ಆರ್ಥಿಕ ಹಿಂಜರಿತದಲ್ಲಿ ತಮ್ಮ ಶೇ.90ರಷ್ಟು ಸಂಪತ್ತನ್ನು ಕಳೆದುಕೊಂಡಿದ್ದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಯಶಸ್ಸಿನ ಪಯಣ ರೋಚಕವಾಗಿದೆ. 19ನೇ ವಯಸ್ಸಿನಲ್ಲಿ ಗ್ಯಾರೇಜ್ನಲ್ಲಿ ಉದ್ಯಮ ಆರಂಭಿಸಿದ ಅವರು ಇಂದು ಡಿಎನ್ಇಜಿ ಮೂಲಕ ಆಸ್ಕರ್ ಗೆದ್ದಿದ್ದಾರೆ. ಇದೀಗ ಜಾಗತಿಕ ಮಟ್ಟದಲ್ಲಿ 'ರಾಮಾಯಣ' ಮಹಾಕಾವ್ಯವನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ.
ಲಾಸ್ ಏಂಜಲೀಸ್(ಅ.29): ಭಾರತೀಯ ಮಹಾಕಾವ್ಯ ‘ರಾಮಾಯಣ’ವನ್ನು ಎರಡು ಭಾಗಗಳಲ್ಲಿ ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸಲು ಸಜ್ಜಾಗಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ, ತಮ್ಮ ಜೀವನದ ಕಠಿಣ ಆರ್ಥಿಕ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 2008ರಲ್ಲಿ ತಮ್ಮ ಸಂಪತ್ತಿನ ಶೇ.90ರಷ್ಟನ್ನು ಕಳೆದುಕೊಂಡಿದ್ದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಹುರೂನ್ ಇಂಡಿಯಾ ರಿಚ್ ಲಿಸ್ಟ್ 2026ರ ಪ್ರಕಾರ, ನಮಿತ್ ಮಲ್ಹೋತ್ರಾ ಅವರ ಕುಟುಂಬದ ಒಟ್ಟು ಸಂಪತ್ತು ಸುಮಾರು ₹16,000 ಕೋಟಿ ಎಂದು ಅಂದಾಜಿಸಲಾಗಿದೆ. ಇಂದು ಜಾಗತಿಕ ಮಟ್ಟದಲ್ಲಿ ದೊಡ್ಡ ಸಿನಿಮಾ ನಿರ್ಮಾಣದ ಕನಸು ನನಸಾಗಿಸುತ್ತಿರುವ 50 ವರ್ಷದ ನಮಿತ್ ಅವರ ಯಶಸ್ಸಿನ ಹಿಂದೆ ದೊಡ್ಡ ಸವಾಲುಗಳೂ ಇವೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯನ್ನು ಸ್ಥಾಪಿಸಿ, ಭಾರತೀಯ ಮತ್ತು ಪಾಶ್ಚಿಮಾತ್ಯ ಚಿತ್ರರಂಗದ ನಡುವಿನ ಅಂತರವನ್ನು ಕಡಿಮೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಅವರು 2007ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಆದರೆ, ಕೇವಲ ಒಂದು ವರ್ಷದೊಳಗೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಹಾಗೂ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಅವರ ಯೋಜನೆಗಳಿಗೆ ಭಾರಿ ಹೊಡೆತ ಬಿದ್ದಿತ್ತು. ಅಮೆರಿಕದಲ್ಲಿದ್ದ ಉದ್ಯಮಗಳು ಮತ್ತು ವಲಸಿಗರು ತೀವ್ರ ಆರ್ಥಿಕ ಒತ್ತಡ ಎದುರಿಸುವಂತಾಗಿತ್ತು.
ಸುಮಾರು ಎರಡು ದಶಕಗಳ ಬಳಿಕ, ನಮಿತ್ ಈಗ ಭಾರತೀಯ ಮಹಾಕಾವ್ಯ ‘ರಾಮಾಯಣ’ದ ಎರಡು ಭಾಗಗಳ ರೂಪಾಂತರವನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವ ಸಿದ್ಧತೆಯಲ್ಲಿದ್ದಾರೆ. ನವೆಂಬರ್ 5ರಂದು ಬಿಡುಗಡೆಯಾಗಲು ನಿಗದಿಯಾಗಿರುವ ಚಿತ್ರದ ಹಿನ್ನೆಲೆಯಲ್ಲಿ, ಇತ್ತೀಚೆಗೆ ಲಾಸ್ ಏಂಜಲೀಸ್ನ ಅಕಾಡೆಮಿ ಥಿಯೇಟರ್ನಲ್ಲಿ ವಿಶೇಷ ಪ್ರಸ್ತುತಿಯನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ವೃತ್ತಿಜೀವನದ ಪಯಣವನ್ನು ನೆನಪಿಸಿಕೊಂಡ ಅವರು, ಈ ಕ್ಷಣವನ್ನು ತಮ್ಮ ವೈಯಕ್ತಿಕ ‘ಆಸ್ಕರ್ ಕ್ಷಣ’ ಎಂದು ಬಣ್ಣಿಸಿದರು.
19ನೇ ವಯಸ್ಸಿನಲ್ಲಿ ಗ್ಯಾರೇಜ್ನಿಂದ ಆರಂಭಿಸಿದ್ದ ಕನಸು
“ಈ ಸಂಜೆಯ ಕಾರ್ಯಕ್ರಮವನ್ನು ಅಕಾಡೆಮಿ ಥಿಯೇಟರ್ನಲ್ಲಿ ಆಯೋಜಿಸಲು ಬಯಸಿದ್ದೆ. ಏಕೆಂದರೆ, ಇದು ನನ್ನ ಪಾಲಿನ ಆಸ್ಕರ್ ಕ್ಷಣ. ಗಂಟೆ ಬಾರಿಸಿ ನನ್ನ ಮಾತು ನಿಲ್ಲಿಸುವ ಪರಿಸ್ಥಿತಿ ಇಲ್ಲದೆ, ಒಂದಷ್ಟು ಸಮಯ ಮಾತನಾಡಲು ಬಯಸುತ್ತೇನೆ. ನನ್ನ ಕಂಪನಿ ಡಿಎನ್ಇಜಿ ಮತ್ತು ನನ್ನ ತಂಡ ಒಟ್ಟಾರೆ ಎಂಟು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿವೆ. ಕಳೆದ 11 ವರ್ಷಗಳಲ್ಲಿ ದೃಶ್ಯ ಪರಿಣಾಮಗಳ (ವಿಎಫ್ಎಕ್ಸ್) ವಿಭಾಗದಲ್ಲೇ ಏಳು ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಕ್ರಿಸ್ಟೋಫರ್ ನೋಲನ್, ಡೆನಿಸ್ ವಿಲ್ನ್ಯೂವ್ ಸೇರಿದಂತೆ ನಮ್ಮ ಕಾಲದ ಅತ್ಯುತ್ತಮ ಚಲನಚಿತ್ರ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದೆ” ಎಂದು ನಮಿತ್ ಹೇಳಿದರು.
ತಮ್ಮ ಕುಟುಂಬದ ಹಿನ್ನೆಲೆ ಮತ್ತು ಉದ್ಯಮದ ಆರಂಭದ ದಿನಗಳನ್ನು ಸ್ಮರಿಸಿದ ಅವರು, ಮೂರನೇ ತಲೆಮಾರಿನ ಚಿತ್ರರಂಗದ ಕುಟುಂಬದಿಂದ ಬಂದಿದ್ದರೂ, 19ನೇ ವಯಸ್ಸಿನಲ್ಲಿ ಗ್ಯಾರೇಜ್ನಿಂದ ಉದ್ಯಮ ಆರಂಭಿಸಿದ್ದನ್ನು ವಿವರಿಸಿದರು.
“ನಾನು ಮೂರನೇ ತಲೆಮಾರಿನ ಚಿತ್ರರಂಗದ ಕುಟುಂಬದಿಂದ ಬಂದವನು. 19ನೇ ವಯಸ್ಸಿನಲ್ಲಿ ಆ್ಯಪಲ್ ಕಂಪ್ಯೂಟರ್ ಇಟ್ಟುಕೊಂಡು ಗ್ಯಾರೇಜ್ನಿಂದ ಉದ್ಯಮ ಆರಂಭಿಸಿದ್ದೆ. ಆಗ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಮೂವರು ಶಿಕ್ಷಕರಿಗೂ ಕೇವಲ 21 ವರ್ಷ ವಯಸ್ಸಾಗಿತ್ತು. ಕನಸುಗಳು ಹೇಗೆ ನನಸಾಗುತ್ತವೆ ಎಂಬುದಕ್ಕೆ ಇದು ಉದಾಹರಣೆ. ಕನಸುಗಳ ನಗರ ಲಾಸ್ ಏಂಜಲೀಸ್ಗಿಂತ ಈ ಕ್ಷಣವನ್ನು ಹಂಚಿಕೊಳ್ಳಲು ಉತ್ತಮ ಸ್ಥಳ ಮತ್ತೊಂದಿಲ್ಲ” ಎಂದು ಅವರು ಹೇಳಿದರು.
2008ರಲ್ಲಿ ಶೇ.90ರಷ್ಟು ಸಂಪತ್ತು ನಷ್ಟ
“ಜಾಗತಿಕ ಕಂಪನಿಯನ್ನು ನಿರ್ಮಿಸಿ, ಪೂರ್ವ ಮತ್ತು ಪಾಶ್ಚಿಮಾತ್ಯ ಜಗತ್ತನ್ನು ಸಂಪರ್ಕಿಸುವ ಪ್ರಯತ್ನದಲ್ಲಿ 2007ರಲ್ಲಿ ಲಾಸ್ ಏಂಜಲೀಸ್ಗೆ ಬಂದೆ. ಅಂದಿನಿಂದ ಹಿಂದೆ ತಿರುಗಿ ನೋಡಿಲ್ಲ. ಆದರೆ, ವಲಸಿಗನಾಗಿ 2008ರಲ್ಲಿ ನನ್ನ ಸಂಪತ್ತಿನ ಶೇ.90ರಷ್ಟನ್ನು ಕಳೆದುಕೊಂಡೆ. ಆ ವರ್ಷದ ಕಠಿಣ ಸಮಯವನ್ನು ನಿಮ್ಮಲ್ಲಿ ಕೆಲವರು ನೆನಪಿಸಿಕೊಳ್ಳಬಹುದು. ಆ ಸಂಕಷ್ಟದಿಂದ ಚೇತರಿಸಿಕೊಂಡು, ಇಂದು ವಿಶ್ವದ ಅತಿದೊಡ್ಡ ಸ್ವತಂತ್ರ ಚಿತ್ರ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳುವ ಹಂತಕ್ಕೆ ಬಂದಿರುವುದನ್ನು ವಿವರಿಸಲು ನನ್ನಲ್ಲಿ ಪದಗಳೇ ಇಲ್ಲ” ಎಂದು ಅವರು ಹೇಳಿದರು.
ಭಾರತದ ಅತ್ಯುತ್ತಮ ಪ್ರತಿಭೆಗಳ ಜೊತೆಗೆ ಪಾಶ್ಚಿಮಾತ್ಯ ಚಿತ್ರರಂಗದ ಕೆಲವು ಶ್ರೇಷ್ಠ ತಂತ್ರಜ್ಞರು ಹಾಗೂ ಕಲಾವಿದರನ್ನೂ ಒಂದೇ ವೇದಿಕೆಗೆ ತರಲು ಸಾಧ್ಯವಾಗಿರುವುದು ತಮ್ಮ ಪಾಲಿಗೆ ಹೆಮ್ಮೆಯ ಸಂಗತಿ ಎಂದು ನಮಿತ್ ತಿಳಿಸಿದರು. ಈ ಪಯಣದಲ್ಲಿ ಬೆಂಬಲ ನೀಡಿದ ತಮ್ಮ ತಂದೆ-ತಾಯಿ ನೀತಾ ಮತ್ತು ನರೇಶ್ ಮಲ್ಹೋತ್ರಾ ಹಾಗೂ ಪತ್ನಿಗೆ ಅವರು ಕೃತಜ್ಞತೆ ಸಲ್ಲಿಸಿದರು. ತಮ್ಮ ಕನಸಿನಲ್ಲಿ ನಂಬಿಕೆ ಇಟ್ಟು, ಕಷ್ಟದ ಸಮಯದಲ್ಲೂ ಬೆನ್ನಿಗೆ ನಿಂತಿದ್ದಕ್ಕಾಗಿ ಕುಟುಂಬದವರಿಗೆ ಧನ್ಯವಾದ ಹೇಳಿದರು. ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಕಾಲಿಡಲು ಪ್ರೋತ್ಸಾಹಿಸಿದ ತಮ್ಮ ಚಿತ್ರನಿರ್ಮಾಪಕ ತಂದೆಯ ಪಾತ್ರವನ್ನೂ ಸ್ಮರಿಸಿದರು.
ಪೋಸ್ಟ್ ಪ್ರೊಡಕ್ಷನ್ ಮತ್ತು ದೃಶ್ಯ ಪರಿಣಾಮಗಳ ಕ್ಷೇತ್ರದಲ್ಲಿ ಆರಂಭವಾದ ನಮಿತ್ ಅವರ ವೃತ್ತಿಜೀವನ, ಇದೀಗ ಬೃಹತ್ ಚಿತ್ರಗಳ ನಿರ್ಮಾಣದವರೆಗೂ ವಿಸ್ತರಿಸಿದೆ. ಭಾರತೀಯ ಮಹಾಕಾವ್ಯ ‘ರಾಮಾಯಣ’ವನ್ನು ಜಾಗತಿಕ ಮಟ್ಟದಲ್ಲಿ ತೆರೆಗೆ ತರುವ ಅವರ ಮಹತ್ವಾಕಾಂಕ್ಷೆಯ ಯೋಜನೆಯು ಈ ಪಯಣದ ಪ್ರಮುಖ ಮೈಲಿಗಲ್ಲಾಗಿದೆ.






