ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರ ಮಾಡಿರುವ ಸಾಯಿ ಪಲ್ಲವಿ ತಾವು ಹನುಮಾನ್ ಚಾಲೀಸ ಕಲಿತ ಘಟನೆ ತೆರೆದಿಟ್ಟಿದ್ದಾರೆ. ವಿಶೇಷ ಅಂದರೆ ರಾಮಾಯಣ ಸಿನಿಮಾಗಾಗಿ ಅಲ್ಲ, ಕಸೂಲ್ ಕಾಡಿನ ಘಟನೆಯಿಂದ ಸಾಯಿ ಪಲ್ಲವಿ ಹನುಮಾನ್ ಚಾಲಿಸಾ ಕಲಿತಿದ್ದಾರೆ. ಏನಿದು ಕಸೂಲ್ ಘಟನೆ?
ಮುಂಬೈ (ಅ.31) ಸಿನಿಮಾ ಜಗತ್ತಿನ ಅತ್ಯಂತ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ತೀವ್ರ ಕುತೂಹಲ ಮೂಡಿಸಿರುವ ರಾಮಾಯಣ ಸಿನಿಮಾದ ಹಲವು ರೋಚಕ ಘಟನೆಗಳು ಹೊರಬಂದಿದೆ. ಸೀತೆಯಾಗಿ ಅಭಿನಯಿಸಿರುವ ಸಾಯಿ ಪಲ್ಲವಿ ರಾಮಾಯಾಣ ಸಿನಿಮಾಗಾಗಿ ಹನುಮಾನ್ ಚಾಲೀಸ ಕಲಿತಿಲ್ಲ. ಕಸೂಲ್ ಕಾಡಿನ ಘಟನೆಯಿಂದ ಸಾಯಿ ಪಲ್ಲವಿ ಹನುಮಾನ್ ಚಾಲಿಸಾ ಪಠಣ ಮಾಡಲು ಆರಂಭಿಸಿದ ಘಟನೆಯನ್ನು ಸ್ವತಃ ಸಾಯಿ ಪಲ್ಲವಿ ಹೇಳಿದ್ದಾರೆ.
ಜೀವನ ಬದಲಿಸಿದ ಒಂದು ಘಟನೆ
ರಾಮಾಯಣ ಸಿನಿಮಾ ಪ್ರಮೋಶನ್ ಅಬ್ಬರ ನಡುವೆ ಸಾಯಿ ಪಲ್ಲವಿ ಹನುಮಾನ್ ಚಾಲಿಸ ಪಠಣಕ್ಕೆ ಕಾರಣವಾದ ರೋಮಾಂಚಕಾರಿ ಘಟನೆಯೊಂದು ಹೇಳಿದ್ದಾರೆ. ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಕಸೋಲ್ ಮತ್ತು ಪಾರ್ವತಿ ಕಣಿವೆಯ (Parvati Valley) ದಟ್ಟ ಅರಣ್ಯದ ನಡುವೆ ರಾತ್ರಿ ವೇಳೆ ಸಿಲುಕಿಕೊಂಡಾಗ ನಡೆದ ಒಂದು ಘಟನೆ ತಮ್ಮ ಜೀವನವನ್ನೇ ಬದಲಾಯಿಸಿತು ಎಂದು ನಟಿ ತಿಳಿಸಿದ್ದಾರೆ.
ಕತ್ತಲಾಗುತ್ತಿದ್ದಂತೆ ಎದುರಾದ ಆತಂಕ
ಸಂದರ್ಶನದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ತಂಗಿ ಪೂಜಾ ಕಣ್ಣನ್ ಹಾಗೂ ಸ್ನೇಹಿತರ ಜೊತೆ ಹಿಮಾಚಲ ಪ್ರದೇಶದ ಪಾರ್ವತಿ ಕಣಿವೆಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸಾಗುವಾಗ ಸಾಯಂಕಾಲ 5 ಗಂಟೆಗೆ ಇದ್ದ ಕೊನೆಯ ಬಸ್ ಹೊರಟಾಗಿತ್ತು. ಬೇರೆ ಬಸ್ ಇಲ್ಲ, ಇಲ್ಲೇ ತಂಗಲು ಯಾವುದೇ ವ್ಯವಸ್ಥೆಯೂ ಇರಲಿಲ್ಲ. ಹಿಂತಿರುಗಲು ಬೇರೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಕಾಲು ನಡಿಗೆಯಲ್ಲೇ ಮರಳಬೇಕಿತ್ತು. ಇದು ಅನಿವಾರ್ಯವಾಗಿತ್ತು. ಆಗಲೇ ಸಂಜೆಯಾಗಿತ್ತು.ಪರ್ವತ ಶ್ರೇಣಿ, ದಟ್ಟ ಕಾಡುಗಳ ನಡುವೆ ನಡೆಯಬೇಕಿತ್ತು. ಕತ್ತಲಾಗುತ್ತಿದ್ದಂತೆ ಮೂವರಿಗೂ ಆತಂಕ ಎದುರಾಗಿದೆ.
ಒಂದು ಬದಿಯಲ್ಲಿ ಗಂಭೀರವಾಗಿ ಹರಿಯುವ ನದಿ, ಮತ್ತೊಂದು ಬದಿಯಲ್ಲಿ ಕತ್ತಲೆಯಿಂದ ಆವೃತವಾಗಿದ್ದ ದಟ್ಟ ಅರಣ್ಯ. ಚಂದ್ರನ ಮಂದ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ಸಾಯಿ ಪಲ್ಲವಿಗೆ ತೀವ್ರ ಭಯ ಆವರಿಸಿತ್ತು. ಈ ಆತಂಕದ ಸಮಯದಲ್ಲಿ ಅವರ ತಂಗಿ ಪೂಜಾ ಹನುಮಾನ್ ಚಾಲೀಸಾವನ್ನು ಗಟ್ಟಿಯಾಗಿ ಪಠಿಸಲು ಪ್ರಾರಂಭಿಸಿದರು. ಪೂಜಾ ಹನುಮಾನ್ ಚಾಲೀಸಾದ ಮೊದಲ ಸಾಲನ್ನು ಹೇಳುತ್ತಿದ್ದಂತೆಯೇ, ಎಲ್ಲಿಂದಲೋ ಬಂದ ಸಣ್ಣ ನಾಯಿಮರಿಯೊಂದು ಇವರ ಜೊತೆ ಹೆಜ್ಜೆ ಹಾಕಲು ಆರಂಭಿಸಿತ್ತು.
ಹನುಮಾನ್ ಚಾಲೀಸ ಗೊತ್ತಿರಲಿಲ್ಲ
ಅಷ್ಟು ದೊಡ್ಡ ಕಾಡಿನಲ್ಲಿ ದಿಢೀರನೆ ಪ್ರತ್ಯಕ್ಷವಾದ ಆ ನಾಯಿಮರಿಯು, ಇವರು ಸುರಕ್ಷಿತವಾಗಿ ಅಂಗಡಿಗಳಿದ್ದ ಬೆಳಕಿನ ಪ್ರದೇಶ ತಲುಪುವವರೆಗೂ ಇವರ ಜೊತೆಯೇ ನಡೆಯಿತು. ಪಟ್ಟಣ ತಲುಪುತ್ತಿದ್ದಂತೆಯೇ ಆ ನಾಯಿಮರಿ ಬೇರಡೆಗೆ ತೆರಳಿತ್ತು. ದೇವರೇ ನಮ್ಮ ರಕ್ಷಣೆಗೆ ಆ ನಾಯಿಮರಿಯ ರೂಪದಲ್ಲಿ ಬಂದಿದ್ದರು ಎಂದು ನನಗೆ ಅನಿಸಿತು. ಅಂದು ನನಗೆ ಹನುಮಾನ್ ಚಾಲೀಸಾ ಗೊತ್ತಿಲ್ಲದಿರುವುದು ನನಗೆ ತೀವ್ರ ಬೇಸರ ತಂದಿತ್ತು ಎಂದು ಸಾಯಿ ಪಲ್ಲವಿ ಭಾವುಕವಾಗಿ ಹೇಳಿಕೊಂಡಿದ್ದಾರೆ.
ಪವಿತ್ರ ಶ್ಲೋಕದಿಂದ ಧೈರ್ಯ
ಆ ಘಟನೆಯ ನಂತರ ಸಾಯಿ ಪಲ್ಲವಿ ತಕ್ಷಣವೇ ಹನುಮಾನ್ ಚಾಲೀಸಾವನ್ನು ಸಂಪೂರ್ಣವಾಗಿ ಕಲಿತುಕೊಂಡರು. ಅಂದಿನಿಂದ ಇಂದಿನವರೆಗೆ ಪ್ರತಿದಿನ ಕನಿಷ್ಠ ಒಮ್ಮೆಯಾದರೂ ಹನುಮಾನ್ ಚಾಲೀಸಾ ಪಠಿಸುವುದನ್ನು ಸಾಯಿ ಪಲ್ಲವಿ ತಮ್ಮ ಅಭ್ಯಾಸವಾಗಿಸಿಕೊಂಡಿದ್ದಾರೆ. ಈ ಪವಿತ್ರ ಶ್ಲೋಕವು ತಮಗೆ ಧೈರ್ಯ ಹಾಗೂ ಆಂತರಿಕ ಶಕ್ತಿಯನ್ನು ನೀಡುತ್ತದೆ ಎಂದು ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಸೀತಾ ಮಾತೆಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಸಾಯಿ ಪಲ್ಲವಿ ತಮ್ಮ ನಂಬಿಕೆಯನ್ನು ಹಂಚಿಕೊಂಡಿದ್ದಾರೆ.





