ರಾಜರ ಜೀವನ, ಶೌರ್ಯ ಮತ್ತು ಇತಿಹಾಸವನ್ನು ಆಧರಿಸಿದ ಸಿನಿಮಾಗಳಿಗೆ ಮತ್ತೆ ಭರ್ಜರಿ ಬೇಡಿಕೆ ಬಂದಿದೆ. ‘ಛಾವಾ’ ಸೇರಿದಂತೆ ಐತಿಹಾಸಿಕ ಸಿನಿಮಾಗಳ ಯಶಸ್ಸಿನ ಬಳಿಕ ಇದೀಗ ಸ್ಟಾರ್ ಹೀರೋಗಳು ಕೂಡ ರಾಜರ ಪಾತ್ರಗಳತ್ತ ಮುಖ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಸಾಮ್ರಾಜ್ಯಗಳನ್ನು ಕಟ್ಟಿದ ರಾಜರು.. ಯುದ್ಧಗಳನ್ನು ಗೆದ್ದ ವೀರರು.. ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿದ ಧೀರರು. ಇದೀಗ ಇದೇ ರಾಜರ ಕಥೆಗಳು ಬೆಳ್ಳಿತೆರೆಗೆ ಬಂದರೆ ಪ್ರೇಕ್ಷಕರು ಕೂಡ ಭರ್ಜರಿ ಸ್ವಾಗತ ನೀಡುತ್ತಿದ್ದಾರೆ. ಇತಿಹಾಸದ ಪುಟಗಳಲ್ಲಿದ್ದ ಕಿಂಗ್ಸ್ ಕಹಾನಿಗಳಿಗೆ ಸಿನಿಮಾ ರೂಪ ನೀಡುತ್ತಿದ್ದು, ಬಾಕ್ಸ್‌ಆಫೀಸ್‌ನಲ್ಲಿ ನೂರಾರು ಕೋಟಿ ಕಲೆಕ್ಷನ್ ಆಗುತ್ತಿದೆ.

ರಾಜರ ಜೀವನ, ಅವರ ಹೋರಾಟ, ಶೌರ್ಯ ಮತ್ತು ಸಾಮ್ರಾಜ್ಯದ ವೈಭವವನ್ನು ಇಂದಿನ ತಲೆಮಾರಿಗೆ ತಲುಪಿಸುವ ಪ್ರಯತ್ನದಲ್ಲಿ ಮೇಕರ್ಸ್ ಕೂಡ ಹಿಂದೆ ಬಿದ್ದಿಲ್ಲ. ಅದ್ಧೂರಿ ಸೆಟ್‌ಗಳು, ಅದ್ಭುತ VFX ಹಾಗೂ ಭರ್ಜರಿ ಆ್ಯಕ್ಷನ್‌ಗಳ ಮೂಲಕ ಈ ಕಥೆಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಈಗ ಮತ್ತೆ ಐತಿಹಾಸಿಕ ಸಿನಿಮಾಗಳತ್ತ ಸ್ಟಾರ್ ಹೀರೋಗಳು ಮುಖ ಮಾಡುತ್ತಿದ್ದಾರೆ.

ಛತ್ರಪತಿ ಶಿವಾಜಿಯಿಂದ ಶ್ರೀಕೃಷ್ಣದೇವರಾಯನವರೆಗೆ!

ಛತ್ರಪತಿ ಶಿವಾಜಿ, ಛತ್ರಪತಿ ಶಂಭಾಜಿ, ಶ್ರೀಕೃಷ್ಣದೇವರಾಯ.. ಇವರೆಲ್ಲ ಕೇವಲ ರಾಜರಲ್ಲ. ತಮ್ಮ ಕಾಲಘಟ್ಟದ ಇತಿಹಾಸವನ್ನೇ ಬದಲಿಸಿದ ಮಹಾನ್ ವ್ಯಕ್ತಿಗಳು. ಇವರ ಜೀವನದ ಕಥೆಗಳು ಸಿನಿಮಾಗಳಾಗಿ ಬಂದಾಗ ಪ್ರೇಕ್ಷಕರ ಕುತೂಹಲ ಸಹಜವಾಗಿಯೇ ಹೆಚ್ಚಾಗುತ್ತದೆ.

ಕಳೆದ ವರ್ಷ ತೆರೆಕಂಡ ‘ಛಾವಾ’ ಕೂಡ ಇದಕ್ಕೆ ಉತ್ತಮ ಉದಾಹರಣೆ. ಅದಕ್ಕೂ ಮುನ್ನ ರಿತೇಶ್ ದೇಶ್‌ಮುಖ್ ನಟನೆಯ ಶಿವಾಜಿ ಸಿನಿಮಾ ಕೂಡ ಗಮನ ಸೆಳೆದಿತ್ತು. ಇಂತಹ ಐತಿಹಾಸಿಕ ಕಥೆಗಳನ್ನು ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ VFX ಹಾಗೂ ಅದ್ಧೂರಿ ಮೇಕಿಂಗ್‌ನೊಂದಿಗೆ ತೆರೆಗೆ ತರುತ್ತಿರುವುದೇ ಈ ಸಿನಿಮಾಗಳ ವಿಶೇಷತೆ.

ಶ್ರೀಕೃಷ್ಣದೇವರಾಯನಾಗಿ ಕಿಚ್ಚ ಸುದೀಪ್!

ಶ್ರೀಕೃಷ್ಣದೇವರಾಯ ಎಂದಾಕ್ಷಣ ಕನ್ನಡ ಸಿನಿಪ್ರೇಕ್ಷಕರಿಗೆ ಮೊದಲು ನೆನಪಾಗುವ ಹೆಸರು ಬಾಲಕೃಷ್ಣ ಅವರದ್ದೇ. ‘ಆದಿತ್ಯ 369’ ಸಿನಿಮಾದಲ್ಲಿ ಶ್ರೀ ಕೃಷ್ಣದೇವರಾಯನ ಪಾತ್ರವನ್ನು ಬಾಲಕೃಷ್ಣ ಅದ್ಭುತವಾಗಿ ನಿರ್ವಹಿಸಿದ್ದರು. ಆ ಪಾತ್ರ ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಉಳಿದಿದೆ. ನಂತರ ಶ್ರೀಕಾಂತ್ ಕೂಡ ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ನಿರೀಕ್ಷಿಸಿದ ಮಟ್ಟಿಗೆ ದೊಡ್ಡ ಯಶಸ್ಸು ಪಡೆಯಲಿಲ್ಲ.

ಇದೀಗ ಹಲವು ವರ್ಷಗಳ ಬಳಿಕ ಮತ್ತೊಮ್ಮೆ ಶ್ರೀ ಕೃಷ್ಣದೇವರಾಯನ ಪಾತ್ರ ಬೆಳ್ಳಿತೆರೆಗೆ ಬರುತ್ತಿದೆ. ಈ ಬಾರಿ ಆ ಪಾತ್ರದಲ್ಲಿ ಅಭಿನಯಿಸಲಿರುವುದು ಕಿಚ್ಚ ಸುದೀಪ್. ಈಗಾಗಲೇ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದ್ದು, ಸುದೀಪ್ ಅವರನ್ನು ಈ ಐತಿಹಾಸಿಕ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿದೆ. ಆದರೆ ಸಿನಿಮಾದ ನಿರ್ದೇಶಕರು ಯಾರು ಎಂಬುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ನಿರ್ದೇಶಕರ ವಿವರಗಳನ್ನು ಸದ್ಯಕ್ಕೆ ಸಸ್ಪೆನ್ಸ್‌ನಲ್ಲೇ ಇಟ್ಟಿದೆ.

ಶಿವಾಜಿಯಾಗಿ ರಿಷಬ್ ಶೆಟ್ಟಿ!

ಇತ್ತ ‘ಕಾಂತಾರ’ ಮೂಲಕ ದೇಶಾದ್ಯಂತ ಸದ್ದು ಮಾಡಿರುವ ರಿಷಬ್ ಶೆಟ್ಟಿ ಕೂಡ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದ ಭರ್ಜರಿ ಸಿನಿಮಾವೊಂದನ್ನು ಚಿತ್ರತಂಡ ಘೋಷಿಸಿದೆ. ಈ ಸಿನಿಮಾವನ್ನು ನಿರ್ಮಾಪಕ ಸಂದೀಪ್ ಸಿಂಗ್ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರಿಷಬ್ ಶೆಟ್ಟಿ ಶಿವಾಜಿಯಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ? ಸಿನಿಮಾ ಯಾವ ಮಟ್ಟದ ಅದ್ಧೂರಿತನ ಹೊಂದಿರಲಿದೆ? ಎಂಬ ಕುತೂಹಲ ಈಗಾಗಲೇ ಮೂಡಿದೆ.

ಒಟ್ಟಿನಲ್ಲಿ, ಇತಿಹಾಸದ ಪುಟಗಳಲ್ಲಿದ್ದ ರಾಜರು ಇದೀಗ ಸ್ಟಾರ್ ಹೀರೋಗಳ ರೂಪದಲ್ಲಿ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಕಿಚ್ಚ ಸುದೀಪ್ ಶ್ರೀಕೃಷ್ಣದೇವರಾಯನಾಗಿ, ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿಯಾಗಿ ಕಾಣಿಸಿಕೊಳ್ಳಲಿರುವುದು ಸಿನಿಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜರ ಕಥೆಗಳು ತೆರೆಮೇಲೆ ಬಂದಾಗ ಬಾಕ್ಸ್‌ಆಫೀಸ್ ಕೂಡ ಕಳೆಗಟ್ಟುತ್ತಿರುವುದು ಮಾತ್ರ ಸದ್ಯದ ಟ್ರೆಂಡ್!