'ಲೂಸಿಯಾ' ಚಿತ್ರಕ್ಕೆ 13 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿರ್ದೇಶಕ ಪವನ್ ಕುಮಾರ್ 'ಲೂಸಿಯಾ 2' ಮಾಡುವ ಬಗ್ಗೆ ಮಾತನಾಡಿದ್ದಾರೆ. ಇಷ್ಟು ವರ್ಷಗಳ ಕಾಲ ಸೀಕ್ವೆಲ್ ಮಾಡುವ ಆಲೋಚನೆ ಇಲ್ಲದಿದ್ದರೂ, ಇದೀಗ 'ಲೂಸಿಯಾ ಮಾತ್ರೆ'ಗಳಿಗೆ ಕಥೆ ಹೆಣೆಯುವ ಆಸಕ್ತಿ ಮೂಡಿದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಚರ್ಚಿಸಲು ಅವರು ತಮ್ಮ ತಂಡ ಮತ್ತು ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.
ಕನ್ನಡ ಚಿತ್ರರಂಗದ ವಿಭಿನ್ನ ಕಥಾ ಹಂದರದ ನಿರ್ದೇಶಕ ಪವನ್ ಕುಮಾರ್ ಅವರ ಲೂಸಿಯಾ ಸಿನಿಮಾ 13 ವರ್ಷಗಳನ್ನು ಪೂರೈಸಿದೆ. ಇದಾದ ನಂತರ ಇದೀಗ ಲೂಸಿಯಾ 2 ಸಿನಿಮಾದ ಬಗ್ಗೆ ನಿರ್ದೇಶಕ ಮಾತನಾಡಿದ್ದಾರೆ. ಸಿನಿಮಾಗೆ ತಯಾರಿಯನ್ನು ಇದೀಗ ಆರಂಭಿಸಿದ್ದು, ಅದಕ್ಕೂ ಮುನ್ನ ತಮ್ಮ ತಂಡದೊಂದಿಗೆ ಚರ್ಚೆ ಹಾಗೂ ಸಲಹೆಗೆ ಎದುರು ನೋಡುತ್ತಿದ್ದಾರೆ.
ಸಾಕಷ್ಟು ಜನರು ಮತ್ತು ಸ್ನೇಹಿತರು ಲೂಸಿಯಾ ಸಿನಿಮಾಗೆ 13 ವರ್ಷವಾದ ಬಗ್ಗೆ ಶುಭಾಶಯಗಳನ್ನು ತಿಳಿಸಿದರು. ನನಗೆ ಸಿಕ್ಕ ಹಲವರು ಲೂಸಿಯಾ ಸಿನಿಮಾ ಚೆನ್ನಾಗಿತ್ತು, ಪಾರ್ಟ್ 2 ಮಾಡಿ ಎಂದು ಹೇಳಿದವರು, ಪಾರ್ಟ್ 2 ಮಾಡ್ತೀರಾ ಎಂದು ಕೇಳಿದವರು ಕೂಡ ಇದ್ದರು. ಆದರೆ, ಇಷ್ಟು ವರ್ಷಗಳಲ್ಲಿ ನನಗೆ ಯಾವಾಗಲೂ ಲೂಸಿಯಾ ಪಾರ್ಟ್ 2 ಮಾಡಬೇಕು ಎಂಬ ಆಲೋಚನೆಯೇ ಬಂದಿರಲಿಲ್ಲ. ಸಿನಿಮಾ ಅಲ್ಲಿಗೆ ಮುಗಿಯಿತು ಎಂದು ಸುಮ್ಮನಾಗಿಬಿಟ್ಟಿದ್ದೆ.
ಲೂಸಿಯಾ ಮಾತ್ರೆಗಳಿಗೆ ಜೀವ ಕೊಡಲು ತೀರ್ಮಾನ
ಆದರೆ, ನಿನ್ನೆ ಮಧ್ಯಾಹ್ನದಿಂದ ಲೂಸಿಯಾ ಮಾತ್ರೆಗಳಿಗೆ ಒಂದು ಕಥೆ ಕೊಡಬಹುದಲ್ವಾ ಎಂಬ ಗಟ್ ಫೀಲಿಂಗ್ ಸ್ಟ್ರಾಂಗ್ ಆಗ್ತಿದೆ. ಇಷ್ಟು ವರ್ಷಗಳ ಕಾಲ ನನಗೆ ಸಿನಿಮಾ ಎಲ್ಲಿ ಸೋತು ಬಿಡುತ್ತದೆ ಎಂಬ ಭಯ (Fear of Failure) ಕಾಡುತ್ತಿತ್ತು. ಹೀಗಾಗಿ, ಮುಂದಿನ ಭಾಗದ ಯೋಚನೆ ಮಾಡುವುದಕ್ಕೆ ಹೋಗಿರಲಿಲ್ಲ.
ಇದೀಗ ಸಿನಿಮಾಗಳ ಬಗ್ಗೆ ಯೋಚನೆ ಮಾಡಿದರೆ ಅದೆಷ್ಟೋ ಸಿನಿಮಾಗಳು ಬರುತ್ತೆ, ಹೋಗುತ್ತೆ. ನನಗನಿಸಿದ ಮಟ್ಟಿದೆ ಲೂಸಿಯಾದ ತುಂಬಾ ನೆನಪುಳಿಯುವಂತಹ ಒಂದು ಘಟನೆ ಏನೆಂದರೆ ಸಿನಿಮಾದಲ್ಲಿದ್ದ ಎಲ್ಲರೂ ಚೆನ್ನಾಗಿಯೇ ಜೀವನ ಮಾಡುತ್ತಿದ್ದೇವೆ. ಸಿನಿಮಾ ಮಾಡಿ 13 ವರ್ಷಗಳನ್ನು ಕಳೆದರೂ ಈಗಲೂ ಜನರು ಬಂದು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಆ ಸಿನಿಮಾಗೆ ಹಲವು ಜನರು, ನನ್ನ ಸಂಬಂಧಿಕರು ಸ್ನೇಹಿತರು ಹಣ ಹಾಕಿದ್ದರು. ಈಗಲೂ ಯಾರೋ ಪರಿಚಯಸ್ಥರು ದುಡ್ಡು ಹಾಕಿದ್ದಕ್ಕೆ ಈಗಲೂ ಅದನ್ನು ಸಂಭ್ರಮಿಸುತ್ತಿದ್ದಾರೆ. ಅದರ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ.
ಲೂಸಿಯಾ ಸಿನಿಮಾದಲ್ಲಿ ಕೆಲಸ ಮಾಡಿದವರೆಲ್ಲರೂ ಉತ್ತಮ ಕೆರಿಯರ್
ಹಣ ಹಾಕಿರುವುದು ಒಂದು ಕಡೆಯಾದರೆ ಅದರ ಜೊತೆಗೆ ಲೂಸಿಯಾ ಸಿನಿಮಾಗೆ ಬಂದ ಅದೆಷ್ಟೋ ಹೊಸ ಪ್ರತಿಭೆಗಳು ಈವತ್ತಿಗೆ ದೊಡ್ಡ ಸ್ಟಾರ್‌ಗಳಾಗಿದ್ದಾರೆ. ಪ್ರಮುಖ ಆಯಕ್ಕಟಿನ ಸ್ಥಳಗಳನ್ನು ಕೆಲಸ ಮಾಡುತ್ತಿದ್ದಾರೆ. ಎಲ್ಲ ವಿಭಾಗದಲ್ಲಿ ಕೆಲಸ ಮಾಡಿದವರೂ ಆವತ್ತು ಹೊಸಬರು ಅನ್ನಿಸಿಕೊಂಡವರು ಇಂದು ಒಳ್ಳೆಯ ವೃತ್ತಿಜೀವನ ಕಟ್ಟಿಕೊಂಡಿದ್ದಾರೆ. ಆ ಎಲ್ಲ ಶಕ್ತಿ ಸುಲಭವಲ್ಲ.
ಇದೀಗ ಕಾಡ್ತಿರುವ ಭಯ ಏನೆಂದರೆ ಲೂಸಿಯಾ ಸಿನಿಮಾ ಮಾಡುವಾಗ ನನಗೆ 28 ವರ್ಷವಾಗಿತ್ತು. ಈಗ 43 ತುಂಬುತ್ತಾ ಬಂದಿದ್ದು 44 ಹತ್ತಿರದಲ್ಲಿದ್ದೇನೆ. ಆದರೆ ಖಚಿತವಾಗಿ ಹೇಳಬೇಕೆಂದರೆ ಆಗಿದ್ದ ಮ್ಯಾಡ್‌ನೆಸ್ (ಹುಚ್ಚುತನ) ಈಗ ಅಷ್ಟೊಂದು ಉಳಿದಿಲ್ಲ. ನಾವೆಲ್ಲರೂ ಸೇರಿ ಪ್ರಯತ್ನ ಪಟ್ಟರೆ ಆಗಬಹುದಾ ಅಂತ. ಪ್ರಯತ್ನಿಸೋಣ.., ಇದು ಮುಂದೆ ಹೋಗುತ್ತೋ ಇಲ್ಲವೋ ಗೊತ್ತಿಲ್ಲ.
ಇವತ್ತಿನ ದಿನ ಯಾರು ಜೊತೆಗಿಲ್ಲದಿದ್ದರೂ ನಾನೊಬ್ಬನೇ ಮುಂದೆ ಬಂದು ಈ ಸಿನಿಮಾ ಮಾಡೋಣ ಎಂದು ಈ ಮೆಸೇಜ್ ಹಾಕ್ತಿದ್ದೇನೆ. ಆದರೆ, ಆಗಲಿ.., ಸಿನಿಮಾ ಚೆನ್ನಾಗಿ ಆದರೆ ಎಲ್ಲರಿಗೂ ಒಳ್ಳೆಯದಾಗಲಿ. ಪ್ರಯತ್ನ ಮಾಡುವುದು ನನ್ನ ಮತ್ತು ನಿಮ್ಮ ಜೊತೆಗಿದೆ. ಈ ಲಿಂಕ್‌ನಲ್ಲಿ ಜಾಯಿನ್ ಆಗಿ ಚರ್ಚೆ ಮಾಡೋಣ ಎಂದು ನಿರ್ದೇಶಕ ಪವನ್ ಮಾಹಿತಿ ಹಂಚಿಕೊಂಡಿದ್ದಾರೆ.


