1994ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ, ಜನಪ್ರಿಯರಾಗಿದ್ದ ಐಶ್ವರ್ಯ ರೈ ಬದಲು ಸುಷ್ಮಿತಾ ಸೇನ್ ಗೆದ್ದಿದ್ದು ಹಲವರಿಗೆ ಅಚ್ಚರಿ ಮೂಡಿಸಿತ್ತು. ಐಶ್ವರ್ಯ ವೇದಿಕೆಯಲ್ಲಿ ಜಾರಿ ಬಿದ್ದಿದ್ದರಿಂದ ಸೋತರು ಎಂಬ ವದಂತಿ ಇತ್ತು. ಅದು ನಿಜವಾ? ಯಾಕೆ ಸುಶ್ಮಿತಾ ಆಯ್ಕೆಯಾದಳು? ಇಲ್ಲಿದೆ ನಿಜ. 

ಭಾರತಕ್ಕೆ ಮಿಸ್ ಯೂನಿವರ್ಸ್ ಮತ್ತು ಮಿಸ್ ವರ್ಲ್ಡ್ ಕಿರೀಟಗಳು ಬರುವ ಸುಮಾರು ಮುಂಚೆಯೇ, 1994ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆ ದೇಶದ ಸೌಂದರ್ಯ ಇತಿಹಾಸದಲ್ಲೇ ಅತ್ಯಂತ ಚರ್ಚಿತ ಘಟನೆಯಾಗಿತ್ತು. ಆ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದವರು- ಭವಿಷ್ಯದಲ್ಲಿ ಜಾಗತಿಕ ಬ್ಯೂಟಿ ಐಕಾನ್‌ ಆದ ಐಶ್ವರ್ಯ ರೈ ಮತ್ತು ಸುಷ್ಮಿತಾ ಸೇನ್. ಆ ಸ್ಪರ್ಧೆಯಲ್ಲಿ ಸುಷ್ಮಿತಾ ಸೇನ್ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದು, ಮಿಸ್ ಯೂನಿವರ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದರು. ರನ್ನರ್‌ ಅಪ್ ಆಗಿದ್ದ ಐಶ್ವರ್ಯ ರೈ ಮಿಸ್ ವರ್ಲ್ಡ್ ಸ್ಪರ್ಧೆಗೆ ಆಯ್ಕೆಯಾದರು.

ಆದರೆ ಈ ಆಯ್ಕೆ ಆ ಸಮಯದಲ್ಲಿ ಅನೇಕರಿಗೆ ಅಚ್ಚರಿ ತಂದಿತ್ತು. ಏಕೆಂದರೆ ಸಾರ್ವಜನಿಕ ಅಭಿಪ್ರಾಯ ಸ್ಪಷ್ಟವಾಗಿ ಐಶ್ವರ್ಯ ರೈ ಪರವಾಗಿತ್ತು. ಆಗಲೇ ‘ಪೆಪ್ಸಿ ಗರ್ಲ್’ ಎಂದು ಜನಪ್ರಿಯರಾಗಿದ್ದ ಐಶ್ವರ್ಯಳೇ ಕಿರೀಟ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಬಲವಾಗಿತ್ತು. ಅನೇಕ ವರ್ಷಗಳ ಕಾಲ, ಐಶ್ವರ್ಯ ರೈ ವೇದಿಕೆಯಲ್ಲಿ ನಡೆಯುವಾಗ ಕಾಲು ಜಾರಿ ಬಿದ್ದಿದ್ದರಿಂದಲೇ ಕಿರೀಟ ಕೈ ತಪ್ಪಿತು ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ಈಗ, ಸುಮಾರು ಮೂರು ದಶಕಗಳ ಬಳಿಕ, ಇದರ ನಿಜವಾದ ಕಾರಣ ಬಹಿರಂಗವಾಗಿದೆ.

ರೂಬಿ ಭಾಟಿಯಾ ಹೇಳಿದ ನಿಜ ಸಂಗತಿ

ಭಾರತದ ಮೊದಲ ವೀಜೆ ಎಂದೇ ಗುರುತಿಸಲ್ಪಡುವ ರೂಬಿ ಭಾಟಿಯಾ, ಈ ಸಂಗತಿಯ ಬಗ್ಗೆ ಹೊಸ ಬೆಳಕು ಚೆಲ್ಲಿದ್ದಾರೆ. ಮಿಸ್ ಇಂಡಿಯಾ ಕೆನಡಾ ಕಿರೀಟ ಗೆದ್ದಿದ್ದ ರುಬಿ, ಗೋವಾದಲ್ಲಿ ನಡೆದ 1994ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಹಾಜರಿದ್ದರು. ಬಾಲಿವುಡ್ ಠಿಕಾನಾ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು, “ನಾನು ಮಿಸ್ ಇಂಡಿಯಾದಲ್ಲಿ ಭಾಗವಹಿಸಿರಲಿಲ್ಲ. ನಾನು ಮಿಸ್ ಇಂಡಿಯಾ ಕೆನಡಾ ವಿಜೇತೆ. ಸುಷ್ಮಿತಾ ಸೇನ್ ಮತ್ತು ಐಶ್ವರ್ಯ ರೈ ಸ್ಪರ್ಧಿಗಳಾಗಿದ್ದ ಆ ವರ್ಷ ನನಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬಂದಿತ್ತು. ನಾನು ‘ಮಿಸ್ ಬ್ಯೂಟಿಫುಲ್ ಹೇರ್’ ಪ್ರಶಸ್ತಿ ನೀಡಲು ಬಂದಿದ್ದೆ. ಆ ಸ್ಪರ್ಧೆ ಇಬ್ಬರಿಗೂ- ಸುಷ್ಮಿತಾ ಮತ್ತು ಐಶ್ವರ್ಯ - ಯಶಸ್ವಿಯಾಗಿತ್ತು” ಎಂದು ನೆನಪಿಸಿಕೊಂಡರು.

ಆ ಸಮಯದ ವಾತಾವರಣವನ್ನು ವಿವರಿಸಿದ ರುಬಿ, “ಎಲ್ಲರೂ ಐಶ್ವರ್ಯಳೇ ಗೆಲ್ಲುತ್ತಾರೆ ಎಂದು ಮಾತನಾಡುತ್ತಿದ್ದರು. ಆದರೆ ಸ್ಪರ್ಧೆಯಲ್ಲಿ ಸುಷ್ಮಿತಾ ಅತ್ಯಂತ ಬುದ್ಧಿವಂತೆಯಾಗಿ ಕಾಣಿಸಿಕೊಂಡಿದ್ದರು. ನಾನು ಕೆನಡಾದಿಂದ ಬಂದಿದ್ದೆ, ಅಲ್ಲಿ ಜೀವನ ಸರಳವಾಗಿತ್ತು. ಇಲ್ಲಿ ಕಂಡ ಗ್ಲಾಮರ್ ನನಗೆ ಅಚ್ಚರಿ ತಂದಿತು. ವಿದೇಶದಲ್ಲಿರುವ ಭಾರತೀಯರು ಹೆಚ್ಚು ಸಂಪ್ರದಾಯಬದ್ಧರಾಗಿರುತ್ತಾರೆ,” ಎಂದು ಹೇಳಿದರು.

ಐಶ್ವರ್ಯ ಯಾಕೆ ಗೆಲ್ಲಲಿಲ್ಲ?

ಐಶ್ವರ್ಯ ರೈ ಕಿರೀಟ ಕಳೆದುಕೊಂಡ ಕಾರಣದ ಬಗ್ಗೆ ರೂಬಿ ತಮ್ಮ ಗೈಡ್‌ ಆಗಿದ್ದ ವಿಮ್ಲಾ ಪಾಟೀಲ್ ಅವರನ್ನು ಪ್ರಶ್ನಿಸಿದ್ದರು. ವಿಮ್ಲಾ ಪಾಟೀಲ್ ಫೆಮಿನಾ ಮ್ಯಾಗಜಿನ್‌ನ ದೀರ್ಘಕಾಲದ ಸಂಪಾದಕಿ. ಜೀನತ್ ಅಮಾನ್ ಸೇರಿದಂತೆ ಹಲವು ತಾರೆಯರನ್ನು ಪರಿಚಯಿಸಿದವರು. “ಐಶ್ವರ್ಯ ವೇದಿಕೆಯಲ್ಲಿ ಜಾರಿ ಬಿದ್ದಿದ್ದರಿಂದಲೇ ಗೆಲ್ಲಲಿಲ್ಲವೇ?” ಎಂದು ರೂಬಿ, ವಿಮ್ಲಾರನ್ನು ಕೇಳಿದಾಗ ವಿಮ್ಲಾ ಸ್ಪಷ್ಟವಾಗಿ, ʼಹಾಗಲ್ಲ. ಯಾರು ಬೇಕಿದ್ದರೂ ಜಾರಿ ಬೀಳಬಹುದು. ಮಿಸ್ ಯೂನಿವರ್ಸ್ ಸ್ಪರ್ಧೆ ಬುದ್ಧಿವಂತಿಕೆ, ತೀಕ್ಷ್ಣತೆ ಮತ್ತು ವ್ಯಕ್ತಿತ್ವ ಇರುವ ಮಹಿಳೆಯನ್ನು ಹುಡುಕುತ್ತದೆ. ಆ ಅರ್ಥದಲ್ಲಿ ಸುಷ್ಮಿತಾ ಸೇನ್ ಪರಿಪೂರ್ಣ ಆಯ್ಕೆ ಆಗಿದ್ದರುʼ ಎಂದು ಹೇಳಿದರು” ಎಂದು ರುಬಿ ಬಹಿರಂಗಪಡಿಸಿದರು.

ಐಶ್ವರ್ಯರನ್ನು ಮಿಸ್ ವರ್ಲ್ಡ್‌ಗೆ ಕಳುಹಿಸಿದ ತಂತ್ರ

ರೂಬಿ ಭಾಟಿಯಾ ಪ್ರಕಾರ, ಐಶ್ವರ್ಯ ರೈಯನ್ನು ಮಿಸ್ ವರ್ಲ್ಡ್ ಸ್ಪರ್ಧೆಗೆ ಕಳುಹಿಸುವುದೂ ಒಂದು ತಂತ್ರವಾಗಿತ್ತು. “ಮಿಸ್ ವರ್ಲ್ಡ್ ಸ್ಪರ್ಧೆ ಕನಸಿನಂತೆ ಕಾಣುವ, ಸ್ತ್ರೀಲಕ್ಷಣದ, ದಿವಾ ರೀತಿಯ ಸೌಂದರ್ಯವನ್ನು ಹುಡುಕುತ್ತದೆ. ಐಶ್ವರ್ಯ ಆ ರೂಪಕ್ಕೆ ಸರಿಹೊಂದುವಂತಿದ್ದರು. ಭಾರತ ಎರಡೂ ಅಂತರರಾಷ್ಟ್ರೀಯ ಕಿರೀಟಗಳನ್ನು ಗೆಲ್ಲಬೇಕು ಎಂಬ ಉದ್ದೇಶದಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದು ನಿಜವಾದ ಕಥೆ,” ಎಂದು ಅವರು ಹೇಳಿದರು.

‘ಸ್ಪರ್ಧೆ ಫಿಕ್ಸ್ ಆಗಿದೆ’ ಎಂದು ಸುಷ್ಮಿತಾ ಭಾವಿಸಿದ್ದರು!

ಚಿತ್ರ ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಕೂಡ ಇದನ್ನು ಹೇಳಿದ್ದಾರೆ. ವಿಕ್ಕಿ ಲಾಲ್ವಾನಿಗೆ ನೀಡಿದ ಸಂದರ್ಶನದಲ್ಲಿ ಅವರು, “ಸುಷ್ಮಿತಾ ತಾನು ಗೆಲ್ಲುತ್ತೇನೆ ಎಂದು ನಂಬಿರಲಿಲ್ಲ. ಸ್ಪರ್ಧೆ ಐಶ್ವರ್ಯ ಪರವಾಗಿ ಫಿಕ್ಸ್ ಆಗಿದೆ ಎಂದು ಆಕೆ ಭಾವಿಸಿದ್ದರು. ಐಶ್ವರ್ಯ ಆಗಲೇ ಟಾಪ್ ಮಾಡೆಲ್, ಪೆಪ್ಸಿ ಗರ್ಲ್, ಲ್ಯಾಕ್ಮೆ ಫೇಸ್‌ ಆಗಿದ್ದರು. ಸುಷ್ಮಿತಾ ಅಷ್ಟಾಗಿ ಪರಿಚಿತರಾಗಿರಲಿಲ್ಲ. ಎಲ್ಲರ ಕಣ್ಣು ಐಶ್ವರ್ಯ ಮೇಲೇ ಇತ್ತು,” ಎಂದು ಹೇಳಿದರು.

ಹಿನ್ನಲೆಯಲ್ಲಿ ನಡೆದ ಒಂದು ಭಾವುಕ ಕ್ಷಣವನ್ನೂ ಅವರು ನೆನಪಿಸಿಕೊಂಡರು. “ನಾನು ಚೇಂಜಿಂಗ್ ರೂಮಿಗೆ ಹೋಗಿದ್ದಾಗ ಸುಷ್ಮಿತಾ ಒಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದರು. ‘ಎಲ್ಲವೂ ಫಿಕ್ಸ್ ಆಗಿದೆ, ನಾನು ಗೆಲ್ಲಲ್ಲ’ ಎಂದು ಹೇಳಿದರು. ನಾನು ಅವರಿಗೆ, ‘ನೀನು ಅರ್ಹಳಾದರೆ ನಿನ್ನನ್ನೇ ಆಯ್ಕೆ ಮಾಡುತ್ತಾರೆ. ಜ್ಯೂರಿಯನ್ನು ಖರೀದಿಸಲು ಸಾಧ್ಯವಿಲ್ಲ’ ಎಂದು ಧೈರ್ಯ ತುಂಬಿದೆ. ಅವರು ಹೋಗಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದರು. ಕೊನೆಗೆ ಗೆದ್ದರು,” ಎಂದು ಕಕ್ಕರ್ ಹೇಳಿದರು.

ಸಂವಹನ ಕೌಶಲ್ಯವೇ ಸುಷ್ಮಿತಾಳ ಪ್ಲಸ್ ಪಾಯಿಂಟ್

ಪ್ರಹ್ಲಾದ್ ಕಕ್ಕರ್ ಪ್ರಕಾರ, ಸುಷ್ಮಿತಾ ಸೇನ್ ಅವರಿಗೆ ಇನ್ನೊಂದು ದೊಡ್ಡ ಲಾಭವೂ ಇತ್ತು. “ಸುಷ್ಮಿತಾ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದರು. ಅವರ ಸಂವಹನ ಕೌಶಲ್ಯಗಳು ಬಹಳ ಶಕ್ತಿಶಾಲಿಯಾಗಿದ್ದವು. ಆ ಮಟ್ಟದ ಪಾಲಿಶ್ ಐಶ್ವರ್ಯರಲ್ಲಿರಲಿಲ್ಲ,” ಎಂದಿದ್ದಾರೆ. ಇಂದು ನೋಡಿದರೆ, 1994ರ ಆ ತೀರ್ಮಾನ ಭಾರತಕ್ಕೆ ಐತಿಹಾಸಿಕವಾಗಿ ಪರಿಣಮಿಸಿತು. ಸುಷ್ಮಿತಾ ಸೇನ್ ಮಿಸ್ ಯೂನಿವರ್ಸ್, ಐಶ್ವರ್ಯ ರೈ ಮಿಸ್ ವರ್ಲ್ಡ್—ಎರಡೂ ಕಿರೀಟಗಳು ದೇಶಕ್ಕೆ ಬಂದವು.