ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಈವರೆಗೆ ಮೂವರು ಕನ್ನಡಿಗರು ಮುಡಿಗೇರಿಸಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್, ವಿ.ಕೆ. ಮೂರ್ತಿ ಹಾಗೂ ಇತ್ತೀಚೆಗೆ 2024ರಲ್ಲಿ ಅನಂತ್ ನಾಗ್ ಅವರು ಈ ಐತಿಹಾಸಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ದಿಗ್ಗಜರ ಸಾಧನೆಗಳು ಕನ್ನಡ ನಾಡಿಗೆ ಅಪಾರ ಕೀರ್ತಿ ತಂದಿವೆ.
ಭಾರತೀಯ ಚಿತ್ರರಂಗಕ್ಕೆ ಜೀವಮಾನದ ಗಣನೀಯ ಕೊಡುಗೆ ನೀಡಿದ ಶ್ರೇಷ್ಠ ಸಾಧಕರಿಗೆ ಭಾರತ ಸರ್ಕಾರವು ನೀಡುವ ಅತ್ಯುನ್ನತ ಮತ್ತು ಪ್ರತಿಷ್ಠಿತ ಗೌರವವೇ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'. ಭಾರತೀಯ ಸಿನಿರಂಗದ ಪಿತಾಮಹ 'ದುಂಡಿರಾಜ್ ಗೋವಿಂದ ಫಾಲ್ಕೆ' ಅವರ ಸ್ಮರಣಾರ್ಥ 1969ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ ಪ್ರಾರಂಭವಾಯಿತು. ಈವರೆಗೆ ಕನ್ನಡ ಚಿತ್ರರಂಗದಲ್ಲಿ ಮೂವರು ಶ್ರೇಷ್ಠ ಸಾಧಕರು ಈ ಐತಿಹಾಸಿಕ ಪ್ರಶಸ್ತಿಗೆ ಭಾಜನರಾಗಿ ನಾಡಿಗೆ ಕೀರ್ತಿ ತಂದಿದ್ದಾರೆ.
1995ರಲ್ಲಿ ಡಾ. ರಾಜ್‌ಕುಮಾರ್
1995ರಲ್ಲಿ (43ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಹಾಗೂ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಡಾ. ರಾಜ್‌ಕುಮಾರ್ ಪಾತ್ರರಾದರು. 'ವರನಟ', 'ನಟಸಾರ್ವಭೌಮ' ಎಂದೇ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದ ಅವರು, ತಮ್ಮ ನೈಜ ಅಭಿನಯ ಮತ್ತು ಗಾಯನದ ಮೂಲಕ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದರು.
2008ರಲ್ಲಿ ವಿ.ಕೆ. ಮೂರ್ತಿ
2008ರಲ್ಲಿ ಸಿನಿಮಾ ಛಾಯಾಗ್ರಹಣಕ್ಕೆ ವಿಕೆ ಮೂರ್ತಿ ಅವರಿಗೆ ಬಂದಿತ್ತು. ಮೂಲತಃ ಮೈಸೂರಿನಲ್ಲಿ ಜನಿಸಿದ ವೆಂಕಟರಾಮ ಪಂಡಿತ ಕೃಷ್ಣಮೂರ್ತಿ ಅವರು ವಿ.ಕೆ. ಮೂರ್ತಿ ಎಂದೇ ಪ್ರಸಿದ್ದರಾಗಿದ್ದರು. ಅವರು 2008ನೇ ಸಾಲಿನ 56ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು ಅದರ ಪ್ರದಾನ ಸಮಾರಂಭ 2010ರಲ್ಲಿ ನಡೆದಿತ್ತು. ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಛಾಯಾಗ್ರಾಹಕ ಎಂಬ ಐತಿಹಾಸಿಕ ದಾಖಲೆ ಇವರದ್ದಾಗಿದೆ.
ಪ್ರಸಿದ್ಧ ನಿರ್ದೇಶಕ ಗುರುದತ್ ಅವರ ಜೊತೆಗೂಡಿ ಕೆಲಸ ಮಾಡಿದ ಮೂರ್ತಿ, ಭಾರತದ ಮೊದಲ ಸಿನೆಮಾಸ್ಕೋಪ್ ಚಿತ್ರ 'ಕಾಗಜ್ ಕೆ ಫೂಲ್' (1959) ಚಿತ್ರೀಕರಿಸಿದ್ದರು. 'ಪ್ಯಾಸಾ' (1957) ಚಿತ್ರದಲ್ಲಿ ಅವರು ಬಳಸಿದ ಬೆಳಕಿನ ತಂತ್ರಜ್ಞಾನ ಮತ್ತು 'ಕಾಗಜ್ ಕೆ ಫೂಲ್' ಚಿತ್ರದ 'ಬೀಮ್ ಶಾಟ್' (Beam Shot) ಅನ್ನು ಭಾರತೀಯ ಸೆಲ್ಯುಲಾಯ್ಡ್ ಶ್ರೇಷ್ಠ ಕಲಾಕೃತಿ ಎಂದು ಪರಿಗಣಿಸಲಾಗಿದೆ. 1993 ರಲ್ಲಿ ಬಿಡುಗಡೆಯಾದ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಕನ್ನಡದ ಅತ್ಯಂತ ಮೆಚ್ಚುಗೆ ಪಡೆದ ಚಿತ್ರ 'ಹೂವು ಹಣ್ಣು' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ ಜೊತೆಗೆ ಆ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟನೆಯೂ ಮಾಡಿದ್ದಾರೆ. ಇದು ಅವರು ಕೆಲಸ ಮಾಡಿದ ಏಕೈಕ ಕನ್ನಡ ಚಿತ್ರ. ಈ ಚಿತ್ರವು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತು .
ಮೂರ್ತಿ ಅವರು ತಮ್ಮ 80ನೇ ವಯಸ್ಸಿನಲ್ಲಿ ಅಂದರೆ 2001 ರಲ್ಲಿ ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗಿ ಬೆಂಗಳೂರಿನ ಬಸವನಗುಡಿಯ ಶಂಕರಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನಿವೃತ್ತಿ ಜೀವನ ಕಳೆದರು.ಏಪ್ರಿಲ್ 7, 2014 ರಂದು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ 91 ನೇ ವಯಸ್ಸಿನಲ್ಲಿ ನಿಧನರಾದರು.
2024ರಲ್ಲಿ ಅನಂತ್ ನಾಗ್
ಕನ್ನಡ ಚಿತ್ರರಂಗದ ಹಿರಿಯ ಹಾಗೂ ಬಹುಮುಖ ಪ್ರತಿಭೆಯ ನಟ ಅನಂತ್ ನಾಗ್ ಅವರಿಗೆ ಕನ್ನಡ ಹಾಗೂ ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ 2024ನೇ ಸಾಲಿನ (72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ. 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅನಂತ್ ಅವರಿಗೆ ಸೆಪ್ಟೆಂಬರ್ 22ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಅವರಿಗೆ ಸಂದ ಸೂಕ್ತ ಗೌರವ ಇದಾಗಿದೆ. ಗುಜರಾತ್‌ನ ಏಕ್ತಾ ನಗರದ (ಕೆವಾಡಿಯಾ) ಸ್ಟ್ಯಾಚು ಆಫ್ ಯೂನಿಟಿ ಆವರಣದಲ್ಲಿ ನಡೆಯಲಿದೆ. 72 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು ನವದೆಹಲಿಯಿಂದ ಹೊರಗೆ, ಗುಜರಾತ್‌ನಲ್ಲಿ ಆಯೋಜನೆಗೊಳ್ಳುತ್ತಿದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಈ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರ ಸಾಧನೆ ಮತ್ತು ಕೊಡುಗೆಗಳು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸದಾ ಚಿರಸ್ಥಾಯಿಯಾಗಿರಲಿವೆ.


