ರಶ್ಮಿಕಾ ಮಂದಣ್ಣ 'ವೋಗ್ ವರ್ಲ್ಡ್ 2026 ಮಿಲನ್' ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದ್ದಾರೆ. ಅನಾಮಿಕಾ ಖನ್ನಾ ವಿನ್ಯಾಸದ ಕಪ್ಪು ಬಣ್ಣದ ಲೇಸ್ ಗೌನ್‌ನಲ್ಲಿ ರಶ್ಮಿಕಾ ಮಿಂಚಿದ್ದು, ಈ ಡ್ರೆಸ್ ತಯಾರಿಸಲು ಬರೋಬ್ಬರಿ 350 ಗಂಟೆಗಳ ಕಾಲಾವಕಾಶ ಬೇಕಾಯ್ತಂತೆ.

ನಟಿ ರಶ್ಮಿಕಾ ಮಂದಣ್ಣ 'ವೋಗ್ ವರ್ಲ್ಡ್ 2026: ಮಿಲನ್' ಫ್ಯಾಷನ್ ಶೋನಲ್ಲಿ ಕಪ್ಪು ಬಣ್ಣದ ಆಕರ್ಷಕ ಗೌನ್ ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಭಾರತೀಯ ಫ್ಯಾಷನ್ ಕರಕುಶಲತೆಯನ್ನು ಅವರು ಜಗತ್ತಿಗೆ ಪರಿಚಯಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಗಳ ಬದಲಿಗೆ, ಅನಾಮಿಕಾ ಖನ್ನಾ ವಿನ್ಯಾಸದ ಲೇಸ್, ಕಾರ್ಸೆಟ್ರಿ ಹಾಗೂ ಮೆಟಾಲಿಕ್ ಟಚ್ ಇರುವ ಡ್ರೆಸ್ ಅನ್ನು ರಶ್ಮಿಕಾ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಈ ಡ್ರೆಸ್‌ನ ಅತಿ ದೊಡ್ಡ ವಿಶೇಷತೆ ಫೋಟೋಗಳಲ್ಲಿ ಕಾಣಿಸುವುದಿಲ್ಲ. ಹೌದು, ಈ ಕೌಚರ್ ಪೀಸ್ ತಯಾರಿಸಲು ಬರೋಬ್ಬರಿ 350 ಗಂಟೆಗಳ ಸಮಯ ಬೇಕಾಯ್ತಂತೆ!

350 ಗಂಟೆಗಳ ಶ್ರಮದ ಡ್ರೆಸ್

ಕಳೆದ ಜುಲೈನಲ್ಲಿ ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಅನಾಮಿಕಾ ಖನ್ನಾ ತಮ್ಮ 'ಮೂನ್‌ಲಿಟ್ ಪ್ಯಾಲೇಸ್' ಕಲೆಕ್ಷನ್ ಪ್ರದರ್ಶಿಸಿದ್ದರು. ಇದೇ ಕಲೆಕ್ಷನ್‌ನ ಅದ್ಭುತವಾದ ಕಪ್ಪು ಬಣ್ಣದ ಡ್ರೆಸ್ ಅನ್ನು ರಶ್ಮಿಕಾ ಧರಿಸಿದ್ದರು. ಸೊಂಟದ ಭಾಗವನ್ನು ಹೈಲೈಟ್ ಮಾಡುವ ಬೋನ್ಡ್ ಕಾರ್ಸೆಟ್ ಹಾಗೂ ಲೇಸ್ ವಿನ್ಯಾಸ ಈ ಡ್ರೆಸ್‌ನಲ್ಲಿದೆ.

ಈ ಲೇಸ್ ಡ್ರೆಸ್‌ನಲ್ಲಿ ಹಲವು ಲೇಯರ್‌ಗಳ ಅಲಂಕಾರವಿದೆ. ಶೀರ್ ಲೇಸ್ ಮೇಲೆ ಎಂಬ್ರಾಯ್ಡರಿ ಮಾಡಲಾಗಿದ್ದು, ಇದು ಟ್ರಾನ್ಸ್‌ಪರೆಂಟ್ ಲುಕ್ ನೀಡುತ್ತದೆ. ಸೊಂಟದ ಬಳಿ ಇರುವ ಬೆಳ್ಳಿಯ ವಿನ್ಯಾಸವು ಮೃದುವಾದ ಬಟ್ಟೆಯ ಮೇಲೆ ರಕ್ಷಾಕವಚದಂತೆ (ಆರ್ಮರ್) ಕಾಣುತ್ತದೆ. ವೋಗ್ ಇಂಡಿಯಾ ವರದಿ ಪ್ರಕಾರ, ಅನಾಮಿಕಾ ಖನ್ನಾ ಅವರ ಸ್ಟುಡಿಯೋದಲ್ಲಿ ವಿನ್ಯಾಸಕರು ಈ ಡ್ರೆಸ್‌ನ ಲೇಸ್ ಎಂಬ್ರಾಯ್ಡರಿ, ಕಾರ್ಸೆಟ್ರಿ ಹಾಗೂ ಮೆಟಾಲಿಕ್ ವಿನ್ಯಾಸಕ್ಕಾಗಿ 350 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.

ಆಕರ್ಷಕ ಆಕ್ಸೆಸರೀಸ್ ಧರಿಸಿದ ರಶ್ಮಿಕಾ

ಡ್ರೆಸ್‌ನಲ್ಲಿಯೇ ಸಾಕಷ್ಟು ಗ್ರ್ಯಾಂಡ್ ವಿನ್ಯಾಸಗಳಿದ್ದ ಕಾರಣ, ರಶ್ಮಿಕಾ ಸ್ವರೋವ್ಸ್ಕಿ (Swarovski) ಬ್ರ್ಯಾಂಡ್‌ನ ಬೋಲ್ಡ್ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದರು. ದೊಡ್ಡ ಕುಶನ್-ಕಟ್ ಕ್ರಿಸ್ಟಲ್ ಇರುವ ಉನಾ ಏಂಜೆಲಿಕ್ ಕಾಕ್‌ಟೈಲ್ ಉಂಗುರ, ಮಿಕ್ಸೆಡ್-ಕಟ್ ಕ್ರಿಸ್ಟಲ್‌ಗಳ ವಿಯೆನ್ನಾ ಕಾಕ್‌ಟೈಲ್ ಉಂಗುರ ಹಾಗೂ ರೆಕ್ಕೆಗಳ ವಿನ್ಯಾಸದ ವಿಯೆನ್ನಾ ಇಯರ್ ಕಫ್‌ಗಳನ್ನು ಅವರು ಧರಿಸಿದ್ದರು.

ಗುಸ್ಸಿ (Gucci) ಬ್ಯಾಗ್ ಹಾಗೂ ಅಕ್ವಾಝುರಾ (Aquazzura) ಶೂಗಳೊಂದಿಗೆ ರಶ್ಮಿಕಾ ತಮ್ಮ ಲುಕ್ ಕಂಪ್ಲೀಟ್ ಮಾಡಿದ್ದರು. ಡಾರ್ಕ್ ಹಾಗೂ ಗ್ಲಾಮರಸ್ ಮೂಡ್‌ಗೆ ತಕ್ಕಂತೆ ಬ್ರಾಂಝ್ ಮೇಕಪ್ ಹಾಗೂ ಅಲೆಅಲೆಯಾದ ಕಂದು ಬಣ್ಣದ ಕೂದಲು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.

ಮಿಲನ್‌ನಲ್ಲಿ ಭಾರತೀಯ ಕೌಚರ್

ಕರಕುಶಲತೆಗೆ ಪ್ರಾಮುಖ್ಯತೆ ನೀಡುವ ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಹೆಜ್ಜೆ ಹಾಕಿರುವುದು ವಿಶೇಷ. 'ವೋಗ್ ವರ್ಲ್ಡ್ 2026: ಮಿಲನ್' ಕಾರ್ಯಕ್ರಮವು ಗ್ಯಾಲೇರಿಯಾ ವಿಟ್ಟೋರಿಯೊ ಇಮ್ಯಾನುಯೆಲ್ II (Galleria Vittorio Emanuele II) ನಲ್ಲಿ ನಡೆಯಿತು. ಇಟಾಲಿಯನ್ ಫ್ಯಾಷನ್ ಇತಿಹಾಸ, ಕರಕುಶಲತೆ ಹಾಗೂ ಭವಿಷ್ಯದ ಫ್ಯಾಷನ್ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಯಿತು.

ಈ ಜಾಗತಿಕ ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ಧರಿಸಿದ್ದ ಅನಾಮಿಕಾ ಖನ್ನಾ ಅವರ ಡ್ರೆಸ್, ಭಾರತೀಯ ಕೌಚರ್ ಅನ್ನು ಆಧುನಿಕ ಶೈಲಿಯಲ್ಲಿ ಪ್ರತಿನಿಧಿಸಿತು. ಇನ್ನು ರಶ್ಮಿಕಾ ಮಂದಣ್ಣ ಅವರ ಫ್ಯಾಷನ್ ಜರ್ನಿಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು. ಕೇವಲ ಫೋಟೋಗಳಿಗೆ ಮಾತ್ರ ಸೀಮಿತವಾಗದೆ, ಭಾರತೀಯ ಕರಕುಶಲತೆಯ ಕಥೆಯನ್ನು ಜಗತ್ತಿಗೆ ಸಾರುವ ಮೂಲಕ ಅವರು ವೋಗ್ ವರ್ಲ್ಡ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.