ಹಣಕ್ಕಾಗಿ ತನ್ನ ನೆರೆಮನೆ ರಿಯಲ್ ಎಸ್ಟೇಟ್ ಏಜೆಂಟ್‌ರೊಬ್ಬರ 13 ವರ್ಷದ ಮಗನನ್ನು ಅಪಹರಿಸಿ ಹ೧ತ್ಯೆಗೈದು ಬಳಿಕ ಮೃತದೇಹದ ಜತೆ ಸಮೇತ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕಾರು ಅಪಘಾತಕ್ಕೀಡಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಪೊಲೀಸರ ಬಲೆಗೆ ಬಿದ್ದಿರುವ ಸಿನಿಮೀಯ ಶೈಲಿಯ ಘಟನೆ ಚಿಕ್ಕಜಾಲ ಸಮೀಪ ನಡೆದಿದೆ.

ಬೆಂಗಳೂರು (ಸೆ.19): ಹಣಕ್ಕಾಗಿ ತನ್ನ ನೆರೆಮನೆ ರಿಯಲ್ ಎಸ್ಟೇಟ್ ಏಜೆಂಟ್‌ರೊಬ್ಬರ 13 ವರ್ಷದ ಮಗನನ್ನು ಅಪಹರಿಸಿ ಹ೧ತ್ಯೆಗೈದು ಬಳಿಕ ಮೃತದೇಹದ ಜತೆ ಸಮೇತ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕಾರು ಅಪಘಾತಕ್ಕೀಡಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಪೊಲೀಸರ ಬಲೆಗೆ ಬಿದ್ದಿರುವ ಸಿನಿಮೀಯ ಶೈಲಿಯ ಘಟನೆ ಚಿಕ್ಕಜಾಲ ಸಮೀಪ ನಡೆದಿದೆ.

ಯಲಹಂಕ ಹತ್ತಿರದ ವಿನಾಯಕ ನಗರದ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮನೋಹರ್ ದಂಪತಿ ಪುತ್ರ ಪ್ರಜ್ವಲ್ (13) ಕೊಲೆಯಾದ ದುರ್ದೈವಿ. ಈ ಹ೧ತ್ಯೆ ಸಂಬಂಧ ಮೃತನ ಸ್ನೇಹಿತ ಭಾಸ್ಕರ್ ರೆಡ್ಡಿ ಬಂಧನವಾಗಿದ್ದು, ಮತ್ತೊಬ್ಬ ಆರೋಪಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹಣ ಹೊಂದಿಸುವ ಮೊದಲೇ ಬಾಲಕನ ಜೀವ ತೆಗೆದ ಪಾಪಿ

ಕಾರಿನಲ್ಲಿ ಸುತ್ತಾಡಿಸುವ ನೆಪದಲ್ಲಿ ಬುಧವಾರ ಸಂಜೆ ಕರೆದೊಯ್ದು ಬಳಿಕ ಪ್ರಜ್ವಲ್‌ ತಂದೆಗೆ ಕರೆ ಮಾಡಿ ಹಣಕ್ಕೆ ಭಾಸ್ಕರ್‌ ಬೇಡಿಕೆ ಇಟ್ಟಿದ್ದಾನೆ. ಆದರೆ ಹಣ ಹೊಂದಿಸುವ ಮುನ್ನ ಬಾಲಕನ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿ, ಬಂಧನ ಭೀತಿಯಿಂದ ಮೃತದೇಹ ಜತೆ ಆಂಧ್ರಪ್ರದೇಶಕ್ಕೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ ಎಸಗಿ ಕೊನೆಗೆ ರಸ್ತೆ ಬದಿಯ ಗೋಡೆಗೆ ಕಾರು ಅಪ್ಪಳಿಸಿದೆ. ಈ ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಕಾರನ್ನು ಪರಿಶೀಲಿಸಿದಾಗ ಹಿಂಬದಿ ಆಸನದಲ್ಲಿ ಬಳಿಕ ಬಾಲಕನ ಮೃತದೇಹ ಪತ್ತೆಯಾಗಿದೆ. ಕೂಡಲೇ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1 ಕೋಟಿ ರು. ಹಣಕ್ಕೆ ಬೇಡಿಕೆ:

ಬಿಜೆಪಿ ಮುಖಂಡ ಮನೋಹರ್ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಭಾಸ್ಕರ್ ರೆಡ್ಡಿ ಕುಟುಂಬಗಳು ನೆರೆಹೊರೆಯಲ್ಲಿ ನೆಲೆಸಿವೆ. ರಿಯಲ್ ಎಸ್ಟೇಟ್ ವ್ಯವಹಾರ ಮಾತ್ರವಲ್ಲದೆ ಸ್ಥಳೀಯವಾಗಿ ರಾಜಕೀಯದಲ್ಲೂ ಮನೋಹರ್ ಸಕ್ರಿಯವಾಗಿದ್ದರು. ಗ್ರಾಪಂ ಸದಸ್ಯ ಹಾಗೂ ಅಧ್ಯಕ್ಷರು ಸಹ ಆಗಿದ್ದ ಅವರು, ಮುಂಬರುವ ಜಿಬಿಎ ಚುನಾವಣೆಗೆ ತಮ್ಮ ಪತ್ನಿಯನ್ನು ಕಣಕ್ಕಿಳಿಸಲು ಕೂಡ ತಯಾರಿಸಿ ನಡೆಸಿದ್ದರು. ಇನ್ನು ಹಲವು ವರ್ಷಗಳ ಹಿಂದೆ ನಗರಕ್ಕೆ ಆಂಧ್ರಪ್ರದೇಶ ಮೂಲದ ಭಾಸ್ಕರ್ ರೆಡ್ಡಿ ಪೋಷಕರು ವಲಸೆ ಬಂದಿದ್ದಾರೆ. ಅಕ್ಕಪಕ್ಕದಲ್ಲಿ ನೆಲೆಸಿದ್ದರಿಂದ ಸಹಜವಾಗಿ ಎರಡು ಕುಟುಂಬಗಳ ಮಧ್ಯೆ ಬಾಂಧವ್ಯ ಬೆಳೆದಿದ್ದು, ಮನೆಗಳಿಗೆ ಬಂದು ಹೋಗುವುದು ರೂಢಿಯಲ್ಲಿತ್ತು. ಅಂತೆಯೇ ಮನೋಹನ್‌ ಅವರ ಇಬ್ಬರು ಮಕ್ಕಳ ಜತೆ ಭಾಸ್ಕರ್‌ಗೆ ಗೆಳೆತನವಿತ್ತು.

ಈ ವಿಶ್ವಾಸದಲ್ಲಿ ಆಗಾಗ್ಗೆ ಕಾರಿನಲ್ಲಿ ಸುತ್ತಾಟ ಮಾಡುತ್ತಿದ್ದರು. ಆದರೆ ಬುಧವಾರ ಸಂಜೆ ಕಾರಿನಲ್ಲಿ ಸುತ್ತಾಡುವ ನೆಪದಲ್ಲಿ ಪ್ರಜ್ವಲ್‌ನನ್ನು ಬಾಗಲೂರು ಹತ್ತಿರದ ನಿರ್ಜನ ಪ್ರದೇಶಕ್ಕೆ ಭಾಸ್ಕರ್ ಕರೆದೊಯ್ದಿದ್ದಾನೆ. ಈ ವೇಳೆಗೆ ಪ್ರಜ್ವಲ್‌ ಜತೆ ಆತನ ಸ್ನೇಹಿತ ಸಹ ಹೋಗಿದ್ದಾನೆ. ಆದರೆ ಕೆಲ ಹೊತ್ತಿನ ಬಳಿಕ ತನ್ನ ತಂದೆಗೆ ಹಣ ಕೋರಿ ಪ್ರಜ್ವಲ್‌ನಿಂದ ವಿಡಿಯೋವನ್ನು ಆರೋಪಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ. ನಂತರ ತಾನೇ ಪ್ರಜ್ವಲ್‌ ತಂದೆಗೆ ಕರೆ ಮಾಡಿ 1 ಕೋಟಿ ರು.ಗೆ ಆತ ಬೇಡಿಕೆ ಇಟ್ಟಿದ್ದಾನೆ. ಈ ಕರೆಯಿಂದ ಆತಂಕಗೊಂಡ ಮನೋಹರ್, ಕೂಡಲೇ ಭಾಸ್ಕರ್‌ ತಂದೆಗೆ ವಿಷಯ ಮುಟ್ಟಿಸಿ ತಮ್ಮ ಮಗನ ರಕ್ಷಿಸುವಂತೆ ಕೋರಿದ್ದಾರೆ. ಈ ವಿಷಯ ತಿಳಿದು ಭಾಸ್ಕರ್ ಪೋಷಕರಿಗೆ ಆಘಾತವಾಗಿದೆ. ಮನೆ ಸುತ್ತಮುತ್ತ ಪ್ರಜ್ವಲ್‌ಗೆ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಅಷ್ಟರಲ್ಲಿ ಬಾಗಲೂರು ಹತ್ತಿರ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬಾಲಕನ ಮೇಲೆ ಸಿಮೆಂಟ್‌ ಇಟ್ಟಿಗೆ ಹಾಗೂ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿ ಆರೋಪಿ ಕೊಂದಿದ್ದಾನೆ ಎಂದು ಮೂಲಗಳು ಹೇಳಿವೆ.

ಭಯದಿಂದ ಕಾರು ಸರಣಿ ಅಪಘಾತ:

ಕೊಲೆ ಬಳಿಕ ಮೃತದೇಹವನ್ನು ತೆಗೆದುಕೊಂಡು ರಾತ್ರಿ 11 ಗಂಟೆಗೆ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಭಾಸ್ಕರ್ ಯತ್ನಿಸಿದ್ದಾನೆ. ಆದರೆ ಆ ವೇಳೆ ಭಯದಿಂದ ಕಾರು ಓಡಿಸುವಾಗ ಚಾಲನೆ ಮೇಲೆ ಆತನ ನಿಯಂತ್ರಣ ತಪ್ಪಿದೆ. ಆಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಎರಡು ಬೈಕ್‌ಗಳಿಗೆ ಗುದ್ದಿಸಿ ರಸ್ತೆ ಬದಿಯ ಗೋಡೆಗೆ ಕಾರು ಅಪ್ಪಳಿಸಿದೆ. ಈ ಸರಣಿ ಅಪಘಾತದ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತಕ್ಕೀಡಾದ ಕಾರು ಪರಿಶೀಲಿಸುವಾಗ ಬಾಲಕನ ಮೃತದೇಹ ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪ್ರೇಮ’ ಬಹಿರಂಗವಾಗುವ ಭೀತಿ

ಮೃತ ಪ್ರಜ್ವಲ್‌ ಹಾಗೂ ಭಾಸ್ಕರ್ ಆತ್ಮೀಯರಾಗಿದ್ದು, ಭಾಸ್ಕರ್‌ನ ಪ್ರೇಮದ ಸಂಗತಿ ಆತನಿಗೆ ಗೊತ್ತಿತ್ತು. ಈ ಗೆಳೆತನದಲ್ಲಿ ಆತನನ್ನು ಕಾರಿನಲ್ಲಿ ಸುತ್ತಾಡಿಸಲು ಭಾಸ್ಕರ್ ಕರೆದೊಯ್ಯುವುದು ಸಹಜವಾಗಿತ್ತು. ಹೀಗೆ ಸುತ್ತಾಟದ ವೇಳೆ ತನ್ನ ಗೆಳೆತಿಯನ್ನು ಪ್ರಜ್ವಲ್‌ಗೆ ಆತ ಪರಿಚಯಿಸಿದ್ದ. ಇತ್ತೀಚಿಗೆ ಈ ಪ್ರೇಮದ ವಿಚಾರವನ್ನು ಮುಂದಿಟ್ಟು ಭಾಸ್ಕರ್‌ನನ್ನು ಪ್ರಜ್ವಲ್ ಕಿಚ್ಚಾಯಿಸುತ್ತಿದ್ದ. ಅಲ್ಲದೆ ಈ ಪ್ರೇಮ ವಿಚಾರವನ್ನು ಮನೆಯಲ್ಲಿ ಹೇಳುವುದಾಗಿ ಕೂಡ ಆತ ರೇಗಿಸುತ್ತಿದ್ದ. ಇದು ಆತನಿಗೆ ಸಿಟ್ಟು ತರಿಸಿತ್ತು ಎನ್ನಲಾಗಿದೆ.

₹3 ಕೋಟಿ ಸಾಲ ತೀರಿಸಲು ಅಪಹರಣ

ಇತ್ತೀಚಿಗೆ ಭಾಸ್ಕರ್ ಕುಟುಂಬವು ಸುಮಾರು ಮೂರು ಕೋಟಿಯಷ್ಟು ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿತ್ತು. ಈ ಸಾಲ ತೀರಿಸುವ ಸಲುವಾಗಿ ನೆರೆಮನೆಯಲ್ಲಿ ನೆಲೆಸಿರುವ ರಿಯಲ್ ಎಸ್ಟೇಟ್ ಉದ್ಯಮಿ ಮನೋಹರ್‌ ಮಗನನ್ನು ಅಪಹರಿಸಿ ₹1 ಕೋಟಿ ಹಣ ವಸೂಲಿಗೆ ಭಾಸ್ಕರ್ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ಪಟಾಕಿ ತರುವ ನೆಪ ಹೇಳಿದ ಆರೋಪಿ:

ಮನೆಯಿಂದ ಪ್ರಜ್ವಲ್‌ನನ್ನು ಕರೆದುಕೊಂಡು ಹೋಗಲು ಆರೋಪಿ ಪಟಾಕಿ ಖರೀದಿ ನೆಪ ಹೇಳಿದ್ದ ಎನ್ನಲಾಗಿದೆ. ತಮ್ಮ ಏರಿಯಾದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ ವೇಳೆ ಸಿಡಿಸಲು ಪಟಾಕಿ ಕೊಳ್ಳುವ ನೆಪ ಹೇಳಿ ಪ್ರಜ್ವಲ್‌ನನ್ನು ಕರೆದೊಯ್ದು ಹತ್ಯೆ ಮಾಡಿದ್ದಾನೆ ಎಂದು ಮೃತ ಬಾಲಕನ ಸಂಬಂಧಿಕರು ಆರೋಪಿಸಿದ್ದಾರೆ.