ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಅವರನ್ನು ಸಚಿನ್ ತೆಂಡೂಲ್ಕರ್ ಅವರಂತೆ ದೀರ್ಘಕಾಲದ ಆಟಗಾರನನ್ನಾಗಿ ರೂಪಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಕೇವಲ 15ನೇ ವಯಸ್ಸಿಗೆ ದುಲೀಪ್ ಟ್ರೋಫಿ, ಐಪಿಎಲ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಅವರ ಸಾಧನೆಗಳನ್ನು ಈ ಲೇಖನ ವಿವರಿಸುತ್ತದೆ.
ಮುಂಬೈ: ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ವೃತ್ತಿಜೀವನದ ಬಗ್ಗೆ ಬಿಸಿಸಿಐ ಬಹಳ ಗಂಭೀರವಾಗಿ ಗಮನ ಹರಿಸುತ್ತಿದೆ ಎಂದು ಬೋರ್ಡ್ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ. ಬಿಹಾರ ಮೂಲದ ಯುವ ಆಟಗಾರನನ್ನು ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರಂತೆ ಬೆಳೆಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ, 'ಕೇವಲ 15 ವರ್ಷದ ಆಟಗಾರನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ನೀಡಲು ಬಿಸಿಸಿಐ ಪ್ರಯತ್ನಿಸುತ್ತಿರುವುದು ಹೆಮ್ಮೆಯ ವಿಚಾರ. ಸೂರ್ಯವಂಶಿ ಆಗಿರಲಿ ಅಥವಾ ಬೇರೆ ಯುವ ಆಟಗಾರರೇ ಆಗಿರಲಿ, ಅವರೆಲ್ಲ ಸಚಿನ್ ತೆಂಡೂಲ್ಕರ್ ದೇಶಕ್ಕೆ ನೀಡಿದ ಸೇವೆಯನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಒಂದೇ ದಿನದಲ್ಲಿ ಬಂದು ಹೋಗುವ ಆಟಗಾರರಾಗಬಾರದು, ದೀರ್ಘಾವಧಿಯ ಕರಿಯರ್ ರೂಪಿಸಿಕೊಳ್ಳಬೇಕು' ಎಂದು ಅವರು ಹೇಳಿದ್ದಾರೆ. ವೈಭವ್ ಅವರ ಕರಿಯರ್ ದೇಶಕ್ಕೆ ಅನುಕೂಲವಾಗುವಂತೆ ದೀರ್ಘಕಾಲ ಇರುವಂತೆ ಮಾಡುವ ಬಗ್ಗೆ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.
ಗುರುವಾರ ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಈ ಸಭೆ ನಡೆಯಿತು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್, ಟಿ20 ನಾಯಕ ಶ್ರೇಯಸ್ ಅಯ್ಯರ್, ಹೆಡ್ ಕೋಚ್ ಗೌತಮ್ ಗಂಭೀರ್, ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಾಗೂ ಬಿಸಿಸಿಐನ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಭಾರತದ ಭವಿಷ್ಯದ ಸೂಪರ್ ಸ್ಟಾರ್ ವೈಭವ್ ಸೂರ್ಯವಂಶಿ:
ಕೇವಲ 15 ವರ್ಷ 157 ದಿನಗಳ ವಯಸ್ಸಿನ ವೈಭವ್ ಸೂರ್ಯವಂಶಿ ಈಗಾಗಲೇ ಭಾರತೀಯ ಕ್ರಿಕೆಟ್‌ನಲ್ಲಿ ಸೂಪರ್‌ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ, ಅವರು 57 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ 151 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡುವ ಮೂಲಕ, ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಭಾರತೀಯ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡರು.
2026ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ 776 ರನ್ ಚಚ್ಚಿದ್ದ ವೈಭವ್, ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಸಿಡಿಸಿದ್ದರು. ಟೂರ್ನಿಯ ಟಾಪ್ ಸ್ಕೋರರ್ ಆಗಿದ್ದಲ್ಲದೆ, 72 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದರು. ಆರೆಂಜ್ ಕ್ಯಾಪ್, ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್, ಎಮರ್ಜಿಂಗ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಮತ್ತು ಸೂಪರ್ ಸಿಕ್ಸರ್ ಅವಾರ್ಡ್‌ಗಳಂತಹ ಗೌರವಗಳನ್ನೂ ಬಾಚಿಕೊಂಡರು. ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ 439 ರನ್ ಗಳಿಸಿ, ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದರು.


