ತಿಲಕ್ ವರ್ಮಾ ಅವರು ಟೆಸ್ಟ್ ಕ್ರಿಕೆಟ್ ಆಡುವ ಕನಸನ್ನು ಬಿಚ್ಚಿಟ್ಟಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ಬೆನ್ನಲ್ಲೇ ಪರೋಕ್ಷವಾಗಿ ಬಿಸಿಸಿಐ ಸೆಲೆಕ್ಷನ್ ಮಾನದಂಡವನ್ನು ಪ್ರಶ್ನಿಸಿದ್ದಾರೆ.
ದಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಅಮೋಘ ಶತಕ (116*) ಮತ್ತು ಅರ್ಧಶತಕ (51*) ಸಿಡಿಸಿ ತಂಡವನ್ನು ಫೈನಲ್‌ಗೆ ಮುನ್ನಡೆಸಿರುವ ಟೀಮ್ ಇಂಡಿಯಾದ ಯುವ ತಾರೆ ತಿಲಕ್ ವರ್ಮಾ, ಇದೀಗ ತಮ್ಮ ಟೆಸ್ಟ್ ಕ್ರಿಕೆಟ್ ಕನಸಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅವರ ಈ ಹೇಳಿಕೆಗಳು ಬಿಸಿಸಿಐನ ಆಯ್ಕೆ ಪ್ರಕ್ರಿಯೆ ಮತ್ತು ಆಟಗಾರರನ್ನು ಕೇವಲ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಸೀಮಿತ ಓವರ್‌ಗಳಿಗೆ ಬ್ರಾಂಡ್ ಮಾಡುತ್ತಿರುವ ನಡೆಯನ್ನು ಪ್ರಶ್ನಿಸುವಂತಿದೆಯೇ? ಎಂಬ ಚರ್ಚೆ ಶುರುವಾಗಿದೆ.
ಬಿಸಿಸಿಐ ನಡೆ ಟೀಕಿಸಿದ್ರಾ ತಿಲಕ್?
ಪಂದ್ಯದ ಬಳಿಕ ಮಾತನಾಡಿದ ತಿಲಕ್ ವರ್ಮಾ, ನನಗೆ ಮೊದಲಿನಿಂದಲೂ ಕೆಂಪು ಚೆಂಡಿನ ಕ್ರಿಕೆಟ್ ಆಡುವುದೆಂದರೆ ಇಷ್ಟ. ನಾನು ಎಂದಿಗೂ ಭಾರತಕ್ಕಾಗಿ ಸೀಮಿತ ಓವರ್‌ಗಳ (T20, ODI) ಕ್ರಿಕೆಟ್ ಆಡುವ ಕನಸು ಕಂಡಿರಲಿಲ್ಲ. ಆದರೆ ಅದು ದೇವರ ಇಚ್ಛೆಯಾಗಿತ್ತು," ಎಂದು ಹೇಳಿದ್ದಾರೆ. ಈ ಮೂಲಕ ಅವರು ತಮಗೆ ಬಿಳಿ ಚೆಂಡಿನ ಕ್ರಿಕೆಟ್‌ಗಿಂತ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸಕ್ತಿ ಹೆಚ್ಚು ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ನಾನು ಐಪಿಎಲ್ ಪ್ರದರ್ಶನದಿಂದಾಗಿ ಬಿಳಿ ಚೆಂಡಿನ ಫಾರ್ಮ್ಯಾಟ್‌ಗೆ ಆಯ್ಕೆಯಾದೆ. ಆದರೆ ಅದಕ್ಕಿಂತ ಮೊದಲೇ ನಾನು ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಪಡೆದಿದ್ದೆ. 10 ವರ್ಷದವನಿದ್ದಾಗಿನಿಂದಲೂ ನಾನು ಟೆಸ್ಟ್ ಕ್ರಿಕೆಟ್‌ಗಾಗಿ ಕಷ್ಟಪಟ್ಟಿದ್ದೇನೆ. ಕೆಂಪು ಚೆಂಡಿನ ಕ್ರಿಕೆಟ್ ನನ್ನ ರಕ್ತದಲ್ಲಿದೆ," ಎಂದಿದ್ದಾರೆ. ಇದು ಕೇವಲ ಐಪಿಎಲ್ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡುವ ಬಿಸಿಸಿಐ ನೀತಿಗೆ ಪರೋಕ್ಷ ಟಾಂಗ್ ನೀಡಿದಂತಿದೆ.
ಮತ್ತೊಂದು ಅಸಮಾಧಾನ
ಅಂತರಾಷ್ಟ್ರೀಯ ಸರಣಿಗಳ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ತಮಗೆ ದೇಶೀಯ ಕ್ರಿಕೆಟ್‌ನಲ್ಲಿ ಕೆಂಪು ಚೆಂಡಿನ ಪಂದ್ಯಗಳನ್ನು ಆಡಲು ಸಮಯ ಸಿಗುತ್ತಿಲ್ಲ ಎಂಬ ಬಗ್ಗೆಯೂ ತಿಲಕ್ ಬೇಸರ ಹೊರಹಾಕಿದ್ದಾರೆ. "ಕಳೆದ 3-4 ವರ್ಷಗಳಿಂದ ನಾನು ರಣಜಿ ಟ್ರೋಫಿ ಆಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಬ್ಯುಸಿ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ನಾನು ಹೆಚ್ಚು ಕೆಂಪು ಚೆಂಡಿನ ಪಂದ್ಯಗಳನ್ನು ಆಡಿ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಬಯಸುತ್ತೇನೆ," ಎಂದು ತಮ್ಮ ಹಂಬಲ ವ್ಯಕ್ತಪಡಿಸಿದ್ದಾರೆ.
ಸದ್ಯ ಟಿ20 ತಂಡದ ಉಪನಾಯಕನಾಗಿರುವ ತಿಲಕ್ ವರ್ಮಾ, 53 ಟಿ20 ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಪಾದಾರ್ಪಣೆ ಮಾಡಿಲ್ಲ. ದಲೀಪ್ ಟ್ರೋಫಿಯ ಈ ಪ್ರದರ್ಶನ ಬಿಸಿಸಿಐ ಆಯ್ಕೆಗಾರರ ಕಣ್ಣು ತೆರೆಸುತ್ತದೆಯೇ ಎಂದು ಕಾದುನೋಡಬೇಕಿದೆ.


