ಪಾಕಿಸ್ತಾನದ ವೇಗಿ ವಾಸಿಂ ಅಕ್ರಮ್ ತಮ್ಮ ಆರಂಭಿಕ ದಿನಗಳಲ್ಲಿ ವಿವ್ ರಿಚರ್ಡ್ಸ್‌ಗೆ ಸ್ಲೆಡ್ಜ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ 'ನಿನ್ನನ್ನು ಕೊಲ್ಲುತ್ತೇನೆ' ಎಂಬ ಬೆದರಿಕೆ ಹಾಕಿದ್ದ ರಿಚರ್ಡ್ಸ್, ಔಟಾದ ನಂತರ ಡ್ರೆಸ್ಸಿಂಗ್ ರೂಮ್ ಹೊರಗೆ ಬ್ಯಾಟ್ ಹಿಡಿದು ಅಕ್ರಮ್‌ಗಾಗಿ ಕಾದು ನಿಂತಿದ್ದ ಭಯಾನಕ ಘಟನೆ ನೆನಪಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಗಷ್ಟೇ ಪಾದಾರ್ಪಣೆ ಮಾಡುವ ಪ್ರತಿ ಕ್ರಿಕೆಟಿಗನಿಗೂ ಆಗುವ ವಿಚಾರವಿದು. ಅದಾಗಲೇ ಕ್ರಿಕೆಟ್‌ನಲ್ಲಿ ಸಕಷ್ಟು ಹೆಸರು ಮಾಡಿರುವ ಎದುರಾಳಿ ಬ್ಯಾಟರ್‌ ಅಥವಾ ಬೌಲರ್‌ಅನ್ನು ಎದುರಿಸುವಾಗ ಕೊಂಚ ಹಿಂಜರಿಕೆ ಇದ್ದೇ ಇರುತ್ತದೆ. ಪಾಕಿಸ್ತಾನದ ಮಾಜಿ ದಿಗ್ಗಜ ವೇಗಿ ಹಾಗೂ ನಾಯಕ ವಾಸಿಮ್‌ ಅಕ್ರಮ್‌ ತಮ್ಮ ಕ್ರಿಕೆಟ್‌ ಜೀವನದ ಆರಂಭಿಕ ದಿನಗಳಲ್ಲಿ ಆದ ಕೊಂಚ ಭಯದ ಘಟನೆಯಲ್ಲಿ ಹಿಂದೊಮ್ಮೆ ಹೇಳಿಕೊಂಡಿದ್ದರು. ವಿಚಾರ ಎಲ್ಲಿಯತನಕ ಹೋಗಿತ್ತೆಂದರೆ ವಾಸಿಂ ಅಕ್ರಮ್‌ನನ್ನು ಕೊಂದೇ ಬಿಡ್ತೇನೆ ಅಂತಾ ವಿವ್‌ ರಿಚರ್ಡ್ಸ್‌ ಡ್ರೆಸ್ಸಿಂಗ್‌ ರೂಮ್‌ ತನಕ ಹೋಗಿದ್ದರಂತೆ. ಈ ವಿಚಾರವನ್ನು ಸ್ವತಃ ವಾಸಿಂ ಅಕ್ರಮ್‌ ಹೇಳಿಕೊಂಡಿದ್ದರು.

ಆಗ ನನಗಿನ್ನೂ 18-19 ವರ್ಷ. ಅಲ್ಪ ಸ್ವಲ್ಪ ಇಂಗ್ಲೀಷ್‌ ಕೂಡ ಬರ್ತಿತ್ತು. ಬ್ಯಾಟಿಂಗ್ ಮಾಡಲು ಬಂದಿದ್ದು ಜಗತ್ತಿನ ಸಾರ್ವಕಾಲಿಕ ಭಯಾನಕ ಬ್ಯಾಟರ್ ವಿವಿಯನ್ ರಿಚರ್ಡ್ಸ್. ವಿವ್‌ ಬ್ಯಾಟ್‌ ಮಾಡುತ್ತಿದ್ದ ವೇಳೆ ತನಗೆ ಗೊತ್ತಿದ್ದ ಎರಡೇ ಎರಡು ಕೆಟ್ಟ ಇಂಗ್ಲೀಷ್‌ ಪದಗಳನ್ನು ನಾನು ಹೇಳಿಬಿಟ್ಟಿದ್ದೆ. ಅವರಿಗೆ ನಾನು ಮೊದಲ ಬೌನ್ಸರ್‌ ಎಸೆದಾಗ ಡಕ್‌ ಮಾಡಿದ್ದರು. ಇದರಿಂದ ಅವರ ಕ್ಯಾಪ್‌ ಕೆಳಗೆ ಬಿದ್ದಿತ್ತು. ಆಗ ಈ ಇಂಗ್ಲೀಷ್‌ ಪದಗಳನ್ನು ನಾನು ಬಳಸಿದ್ದೆ ಎಂದು ಪಾಕಿಸ್ತಾನದ ದಿಗ್ಗಜ ವೇಗಿ 'ಸುಲ್ತಾನ್ ಆಫ್ ಸ್ವಿಂಗ್' ವಾಸಿಂ ಅಕ್ರಮ್ ಹೇಳಿದ್ದರು.

ಆಗ ವಿವ್ ರಿಚರ್ಡ್ಸ್ ನನ್ನ ಬಳಿ ಬಂದು, 'ನನ್ನ ಎದುರು ಬಾಯಿ ಮುಚ್ಚಿಕೊಂಡು ಇರು, ಇಲ್ಲದಿದ್ದರೆ ನಿನ್ನನ್ನು ಕೊಂದು ಹಾಕುತ್ತೇನೆ' ಎಂದು ಖಡಕ್ ಎಚ್ಚರಿಕೆ ನೀಡಿದರು. ಸಾಮಾನ್ಯವಾಗಿ ಮೈದಾನದಲ್ಲಿ ಇಂಥವೆಲ್ಲ ಮಾತುಗಳು ಬರುತ್ತವೆ.ಕೊಲ್ತೇನೆ ಅಂದ್ರೆ ನಿಜವಾಗಿಯೀ ಕೊಲ್ಲೋದಿಲ್ವಲ್ಲ ಅಂದುಕೊಂಡು ಸುಮ್ಮನಾಗಿದ್ದೆ. ಬಳಿಕ ನಾಯಕ ಇಮ್ರಾನ್‌ ಖಾನ್‌ಗೂ ಈ ವಿಚಾರ ತಿಳಿಸಿದೆ. ಆಗ ಇಮ್ರಾನ್‌, ಏನೂ ಹೆದರಬೇಡ. ನಾನಿದ್ದೇನೆ. ವಿವ್‌ಗೆ ಇನ್ನೊಂದು ಬೌನ್ಸರ್‌ ಬಾಲ್‌ ಮಾಡು ಎಂದು ಸೂಚಿಸಿದರು.

ಬೌನ್ಸರ್‌ಗೆ ಬಿದ್ದ ವಿಕೆಟ್‌

ಕ್ಯಾಪ್ಟನ್ ಮಾತು ಕೇಳಿ ನಾನು ಮತ್ತೆ ರಿಚರ್ಡ್ಸ್‌ಗೆ ಬೌನ್ಸರ್ ಎಸೆದೆ. ಆ ಓವರ್‌ನ ಕೊನೆಯ ಎಸೆತದಲ್ಲಿ, ದಿನದ ಆಟದ ಕೊನೆಯ ಎಸೆತದಲ್ಲಿ ರಿಚರ್ಡ್ಸ್ ಇನ್‌ಸೈಡ್ ಎಡ್ಜ್ ಆಗಿ ಮಿಡಲ್ ಸ್ಟಂಪ್ ಕಿತ್ತುಹಾಿತು. ವಿಕೆಟ್ ಬಿದ್ದ ತಕ್ಷಣ ನಾನಂತೂ ಸಿಕ್ಕಾಪಟ್ಟೆ ಆಕ್ರಮಣಕಾರಿಯಾಗಿ ಸಂಭ್ರಮಿಸಿದೆ. ಆ ದಿನಗಳಲ್ಲಿ ಮ್ಯಾಚ್ ರೆಫರಿಗಳಿರುತ್ತಿರಲಿಲ್ಲ, ಹೀಗಾಗಿ ನಮಗೆ ಯಾರು ಏನೂ ಅನ್ನುತ್ತಿರಲಿಲ್ಲ ಎಂದು ಅಕ್ರಮ್‌ ನೆನಪಿಸಿಕೊಂಡಿದ್ದಾರೆ.

ಡ್ರೆಸ್ಸಿಂಗ್ ರೂಮ್ ಹೊರಗೆ ಬ್ಯಾಟ್ ಹಿಡಿದು ನಿಂತಿದ್ದ 'ಕಿಂಗ್' ರಿಚರ್ಡ್ಸ್!

ಆಟ ಮುಗಿದು ನಾನು ಡ್ರೆಸ್ಸಿಂಗ್ ರೂಮ್ ತಲುಪಿದೆ. ವಿವ್ ಕೂಡ ತಮ್ಮ ರೂಮ್‌ಗೆ ಹೋದರು. ನಾನು ಬೂಟುಗಳನ್ನು ಬಿಚ್ಚಿ ಚೇಂಜ್ ಮಾಡಿಕೊಳ್ಳುತ್ತಿದ್ದಾಗ ರೂಮ್‌ ಅಟೆಂಡೆಂಟ್ ಬಂದ. 'ನಿಮ್ಮನ್ನು ನೋಡಲು ಯಾರೋ ಹೊರಗೆ ಕಾಯುತ್ತಿದ್ದಾರೆ, ತಕ್ಷಣ ಬನ್ನಿ' ಎಂದ. ನಾನು ಒಂದು ಕಾಲಿನ ಶೂ ಬಿಚ್ಚಿ, ಇನ್ನೊಂದು ಕಾಲಿನಲ್ಲಿ ಸ್ಪೈಕ್ಸ್ ಶೂ ಹಾಕಿಕೊಂಡೇ ಹೊರಗೆ ಬಂದು ನೋಡಿದೆ. ಅಲ್ಲಿದ್ದ ದೃಶ್ಯ ಕಂಡು ನನಗೆ ಎದೆಬಡಿತ ನಿಂತೇ ಹೋಗಿತ್ತು ಎಂದಿದ್ದಾರೆ.

ತಮ್ಮ ಶರ್ಟ್‌ ಬಿಚ್ಚಿ, ಪ್ಯಾಡ್‌ಗಳನ್ನು ಹಾಗೆೇ ಇರಿಸಿ, ಕೈಯಲ್ಲಿ ಬ್ಯಾಟ್ ಹಿಡಿದು ನನಗಾಗಿಯೇ ಹೊರಗೆ ಕಾದು ನಿಂತಿದ್ದರು! 'ಅಯ್ಯೋ ದೇವರೆ, ಇವನು ನಿಜವಾಗಿಯೂ ನನ್ನನ್ನು ಕೊಂದು ಹಾಕುತ್ತಾನೆ' ಎಂದು ನನಗೆ ತೀವ್ರ ಭಯವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಕೈಕೊಟ್ಟ ನಾಯಕ ಇಮ್ರಾನ್ ಖಾನ್!

ತಕ್ಷಣ ಮತ್ತೆ ಡ್ರೆಸ್ಸಿಂಗ್ ರೂಮ್‌ಗೆ ಹೋದೆ. ಸಿಕ್ಸ್ ಪ್ಯಾಕ್ ಬಾಡಿ ಹೊಂದಿದ್ದ, ಶಕ್ತಿಶಾಲಿಯಾಗಿದ್ದ ನನ್ನ ನಾಯಕ ಇಮ್ರಾನ್ ಖಾನ್ ನನ್ನ ಪರವಾಗಿ ನಿ್ಲುತ್ತಾರೆ ಎಂಬ ಭರವಸೆ ನನಗಿತ್ತು. 'ಕ್ಯಾಪ್ಟನ್‌, ಅವರು ಹೊರಗೆ ಬ್ಯಾಟ್ ಹಿಡಿದು ನಿಂತಿದ್ದಾರೆ, ನನ್ನ ಜೊತೆ ಜಗಳಕ್ಕೆ ಕಾಯುತ್ತಿದ್ದಾರೆ' ಎಂದೆ. ಅದಕ್ಕೆ ಇಮ್ರಾನ್ ಖಾನ್ ತುಂಬಾ ಕೂಲ್‌ ಆಗಿ, 'ಹೋಗು ಜಗಳ ಮಾಡು, ಅದು ನಿನ್ನ ಜಗಳ, ನನಗೇನು ಸಂಬಂಧ?' ಎಂದು ಕೈತೊಳೆದುಕೊಂಡರು!" ಎಂದು ಅಕ್ರಮ್ ಅಂದಿನ ತಮಾಷೆಯ ಘಟನೆಯನ್ನು ನೆನೆದು ನಕ್ಕಿದ್ದಾರೆ.