ಇದು ನಿಮಗೆ ಗೊತ್ತಾ? ಐಸಿಸಿ ವಿಶ್ವದ ಕ್ರಿಕೆಟರ್‍ಗಳಿಗೆ ಹೇಗೆ ರ್‍ಯಾಂಕಿಂಗ್ ನೀಡುತ್ತದೆ? ಅದಕ್ಕೆ ಅದು ಬಳಸುವ ಸೂತ್ರ ಯಾವುದು? ಇಲ್ಲಿಂದೆ ಇಂಟ್ರೆಸ್ಟಿಂಗ್ ವಿಚಾರ.
ಬೆಂಗಳೂರು: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರತಿ ವಾರ ಆಟಗಾರರ ಮತ್ತು ತಂಡಗಳ ರ‍್ಯಾಂಕಿಂಗ್ ಅಪ್ಡೇಟ್ ಮಾಡುತ್ತದೆ. ಇತ್ತೀಚಿನ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಹಾಗಾದರೆ, ಈ ರ‍್ಯಾಂಕಿಂಗ್ ಪಟ್ಟಿಯನ್ನು ಐಸಿಸಿ ಹೇಗೆ ಸಿದ್ಧಪಡಿಸುತ್ತದೆ? ಆಟಗಾರರನ್ನು ಪಟ್ಟಿಯಿಂದ ಕೈಬಿಡುವುದು ಯಾವಾಗ? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಸೆಪ್ಟೆಂಬರ್ 2 ರಂದು ಬಿಡುಗಡೆಯಾದ ತಾಜಾ ರ‍್ಯಾಂಕಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಮಿಚೆಲ್ ಸ್ಟಾರ್ಕ್ ಮೊದಲ ಸ್ಥಾನದಲ್ಲಿದ್ದರೆ, ಮ್ಯಾಟ್ ಹೆನ್ರಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಇನ್ನು ಓಲಿ ರಾಬಿನ್ಸನ್ 6 ಸ್ಥಾನಗಳ ಜಿಗಿತ ಕಂಡು ಟಾಪ್-5 ಪ್ರವೇಶಿಸಿದ್ದಾರೆ.
ರ‍್ಯಾಂಕಿಂಗ್ ಅಪ್ಡೇಟ್ ಆಗುವುದು ಯಾವಾಗ?
- ಐಸಿಸಿ ಪ್ರತಿ ವಾರ ರ‍್ಯಾಂಕಿಂಗ್ ಅಪ್ಡೇಟ್ ಮಾಡುತ್ತದೆ.
- ಮಂಗಳವಾರ: ಮಹಿಳಾ ಕ್ರಿಕೆಟ್ ತಂಡ ಮತ್ತು ಆಟಗಾರರ ರ‍್ಯಾಂಕಿಂಗ್.
- ಬುಧವಾರ: ಪುರುಷರ ಕ್ರಿಕೆಟ್ ತಂಡ ಮತ್ತು ಆಟಗಾರರ ರ‍್ಯಾಂಕಿಂಗ್.
ರ‍್ಯಾಂಕಿಂಗ್ ಮಾನದಂಡಗಳೇನು?
ಕ್ರಿಕೆಟ್‌ನ ಮೂರು ಮಾದರಿಗಳಾದ ಟೆಸ್ಟ್, ಏಕದಿನ (ODI) ಮತ್ತು ಟಿ20 ಗಳಿಗೆ ಪ್ರತ್ಯೇಕ ರ‍್ಯಾಂಕಿಂಗ್ ಇರುತ್ತದೆ. ಇದರಲ್ಲಿ ಬ್ಯಾಟರ್‌ಗಳು, ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆಟಗಾರನ ಇಡೀ ವೃತ್ತಿಜೀವನಕ್ಕಿಂತ ಹೆಚ್ಚಾಗಿ ಪ್ರಸ್ತುತ ಅವರು ನೀಡುತ್ತಿರುವ ಪ್ರದರ್ಶನಕ್ಕೆ ಇಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಪಟ್ಟಿಯಿಂದ ಆಟಗಾರರನ್ನು ಯಾವಾಗ ತೆಗೆಯಲಾಗುತ್ತದೆ?
ಒಬ್ಬ ಆಟಗಾರ ರ‍್ಯಾಂಕಿಂಗ್‌ನಲ್ಲಿ ಇರಬೇಕಾದರೆ ನಿಗದಿತ ಅವಧಿಯಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿರಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ 12-15 ತಿಂಗಳು ಹಾಗೂ ಏಕದಿನ/ಟಿ20 ಯಲ್ಲಿ ಕಳೆದ 9-12 ತಿಂಗಳುಗಳಲ್ಲಿ ಪಂದ್ಯ ಆಡದಿದ್ದರೆ ಅವರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ. (ಉದಾಹರಣೆಗೆ: ಪಾರ್ಥಿವ್ ಪಟೇಲ್ 2008 ರಿಂದ 2016 ರವರೆಗೆ ತಂಡದಿಂದ ಹೊರಗಿದ್ದಾಗ ರ‍್ಯಾಂಕಿಂಗ್‌ನಿಂದಲೂ ಹೊರಬಿದ್ದಿದ್ದರು).
ಆಟಗಾರ ನಿವೃತ್ತಿ ಘೋಷಿಸಿದ ತಕ್ಷಣ ಆ ಫಾರ್ಮ್ಯಾಟ್‌ನ ರ‍್ಯಾಂಕಿಂಗ್‌ನಿಂದ ಅವರ ಹೆಸರನ್ನು ತೆಗೆದುಹಾಕಲಾಗುತ್ತದೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ, ಅವರು ಕೇವಲ ಏಕದಿನ ರ‍್ಯಾಂಕಿಂಗ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.


