ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ 'ಫ್ಯಾಮಿಲಿ ಫುಲ್ ಹೌಸ್' ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಈ ಶೋನ ಒಂದು ಎಪಿಸೋಡ್‌ಗೆ ಅವರು ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಎಂಬ ಚರ್ಚೆ ವೈರಲ್ ಆಗಿದೆ. ಇದರ ಜೊತೆಗೆ ಅವರು ಶೀಘ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಮರಳಲಿದ್ದಾರೆ.

ಭಾರತದ ಖ್ಯಾತ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾ(Team india)ದ ಮಾಜಿ ನಾಯಕ ರೋಹಿತ್ ಶರ್ಮಾ(Rohit Sharma) ಅವರೀಗ ಕ್ರಿಕೆಟ್ ಬಿಟ್ಟು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘Family Full House with Rohit Sharma’ ಕಾರ್ಯಕ್ರಮದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ಸೆಪ್ಟೆಂಬರ್ 19ರಂದು ಶನಿವಾರ ಈ ಶೋ ಮೊದಲ ಬಾರಿಗೆ ಪ್ರಸಾರವಾಗಿದೆ.

ಇದಕ್ಕೂ ಮೊದಲು ಈ ಕಾರ್ಯಕ್ರಮದ ಆರಂಭದ ಎಪಿಸೋಡ್‌ನಲ್ಲಿ ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಅಭಿಷೇಕ್ ನಾಯರ್, ಶಿಖರ್ ಧವನ್, ಕುನಾಲ್ ಕೆಮ್ಮು ಭಾರತಿ ಸಿಂಗ್ ಸೇರಿದಂತೆ ಹಲವು ಖ್ಯಾತನಾಮರು ಭಾಗವಹಿಸಿದ್ದರು. ಹೀಗಾಗಿ ಆರಂಭದದಿಂದಲೇ ಈ ಕಾರ್ಯಕ್ರಮ ಸಾಕಷ್ಟು ಮನರಂಜನೆ ನಿದೆ. ಇದೀಗ ಭಾರತದ ಲೆಜೆಂಡರಿ, ಸ್ಫೋಟಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಈ ಕಾರ್ಯಕ್ರಮಕ್ಕೆ ಬಂದಿರುವುದು ಭಾರೀ ಕುತೂಹಲ ಕೆರಳಿಸಿದೆ. ಅಂದಹಾಗೆ ಈ ಕಾರ್ಯಕ್ರಮಕ್ಕೆ ರೋಹಿತ್ ಶರ್ಮಾ ಪಡೆಯುವ ಸಂಭಾವನೆ ಎಷ್ಟಿರಬಹುದು ಅನ್ನುವ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.

ಒಂದು ಎಪಿಸೋಡ್‌ಗೆ ರೋಹಿತ್ ಶರ್ಮಾ ಪಡೆಯುವ ಸಂಭಾವನೆ ಎಷ್ಟು?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವರದಿಗಳ ಪ್ರಕಾರ 39 ವರ್ಷದ ರೋಹಿತ್ ಶರ್ಮಾ ಅವರು ಈ ಕಾರ್ಯಕ್ರಮದ ಒಂದು ಎಪಿಸೋಡ್ ನಿರೂಪಣೆ ಮಾಡಲು ಬರೋಬ್ಬರಿ ₹10 ಕೋಟಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಮೊತ್ತವು ಖ್ಯಾತ ಹಾಸ್ಯನಟ ಹಾಗೂ ನಟ ಕಪಿಲ್ ಶರ್ಮಾ ಪಡೆಯುತ್ತಾರೆ ಎನ್ನಲಾಗುವ ಸಂಭಾವನೆಗಿಂತ ₹5 ಕೋಟಿ ಹೆಚ್ಚು ಎಂದು ವರದಿಗಳು ಹೇಳಿವೆ. ಆದರೆ ಈ ಸಂಭಾವನೆಗೆ ಸಂಬಂಧಿಸಿದ ಮಾಹಿತಿ ಅಧಿಕೃತವಾಗಿ ಇಲ್ಲ. ಈ ಬಗ್ಗೆ ಹರಿದಾಡುತ್ತಿರುವ ಮಾಹಿತಿಗಳು ಪರಿಶೀಲಿಸದ ಮೂಲಗಳನ್ನು ಆಧರಿಸಿವೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಅಥವಾ ರೋಹಿತ್ ಶರ್ಮಾ ಅವರೇ ಈ ಮಾಹಿತಿಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ.

ರೋಹಿತ್ ಶರ್ಮಾ ಭಾಗವಹಿಸಿರುವುದರಿಂದ ಇನ್ನು ಈ ಕಾರ್ಯಕ್ರಮದ ಜನಪ್ರಿಯತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ ಎರಡನೇ ವಾರದ ಎಪಿಸೋಡ್‌ನಲ್ಲಿ ಬಾಲಿವುಡ್‌ನ ಖ್ಯಾತ ನಟ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಭಾಗವಹಿಸಲಿದ್ದಾರೆ. 14 ವರ್ಷಗಳ ಹಿಂದೆ ‘Student Of The Year’ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಕಾಲಿಟ್ಟಿದ್ದರು.

ಮೂರೇ ದಿನಕ್ಕೆ 76.2 ಲಕ್ಷ ವೀಕ್ಷಕರು!

Chrome DM COTT ಬಿಡುಗಡೆ ಮಾಡಿರುವ ವೀಕ್ಷಕರ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 19ರಿಂದ 21ರವರೆಗೆ ‘Family Full House with Rohit Sharma’ ಕಾರ್ಯಕ್ರಮದ ಆರಂಭಿಕ ಅವಧಿಯಲ್ಲಿ 76.2 ಲಕ್ಷ ವಿಶಿಷ್ಟ ವೀಕ್ಷಕರು ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಿದ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಬರೋಬ್ಬರಿ 17.2 ಲಕ್ಷ ವೀಕ್ಷಕರು ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.

ಮತ್ತೆ ಮೈದಾನಕ್ಕಿಳಿಯಲಿರುವ ರೋಹಿತ್ ಶರ್ಮಾ

ಕ್ರಿಕೆಟ್ ಬಗ್ಗೆ ಹೇಳೋದಾದರೆ ರೋಹಿತ್ ಶರ್ಮಾ ಅವರು ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಬ್ಯಾಕ್ ಆಗಲಿದ್ದಾರೆ. ಸೆಪ್ಟೆಂಬರ್ 27ರಂದು ಭಾನುವಾರ ತಿರುವನಂತಪುರದಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಟೀಂ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ. ಕೊನೆಯ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಪರ ಆಡಿದ್ದರು. ಲಾರ್ಡ್ಸ್ ಮೈದಾನದಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಅವರು ಭರ್ಜರಿ 138 ರನ್ ಸಿಡಿಸಿದ್ದರು. ಆದರೆ, ಭಾರತದ ಗೆಲುವಿಗೆ ಆ ಇನ್ನಿಂಗ್ಸ್ ಸಾಕಾಗಲಿಲ್ಲ. 384 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ 27 ರನ್‌ಗಳಿಂದ ಪಂದ್ಯ ಸೋತಿತ್ತು.

Scroll to load tweet…

ರೋಹಿತ್ ಶರ್ಮಾ ನಿವೃತ್ತಿ ಯಾವಾಗ?

ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಬಳಿಕವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 2023ರ ವಿಶ್ವಕಪ್‌ನಲ್ಲಿ ಭಾರತ ತಂಡ ತವರಿನಲ್ಲೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿ ಭಾರತದ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತ್ತು.