ತಾಯಿಯ ನಿಧನದ ನೋವಿನ ನಡುವೆಯೂ ಕ್ರಿಕೆಟಿಗ ನಿತೀಶ್ ರಾಣಾ ಮೈದಾನಕ್ಕಿಳಿದು ಅರ್ಧಶತಕ ಬಾರಿಸಿದ್ದಾರೆ. ತಮ್ಮ ಈ ಸಾಧನೆಯನ್ನು ಸ್ವರ್ಗಸ್ಥ ತಾಯಿಗೆ ಅರ್ಪಿಸಿ, ಮೈದಾನದಲ್ಲೇ ಕಣ್ಣೀರಿಟ್ಟ ಅವರು, ನಂತರ 'ಕೆಜಿಎಫ್' ಶೈಲಿಯಲ್ಲಿ ತಮ್ಮ ತಾಯಿಯ ತ್ಯಾಗವನ್ನು ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಅದು 2026 ರ ಆಗಸ್ಟ್ 7. ಭಾರತದ ಸ್ಟಾರ್ ಕ್ರಿಕೆಟರ್ ನಿತೀಶ್ ರಾಣಾ ಬಾಳಲ್ಲಿ ಅತಿ ದೊಡ್ಡ ಕರಾಳ ದಿನ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ, ಮಗನನ್ನು ಅನಾಥನನ್ನಾಗಿ ಮಾಡಿ ಕಣ್ಣು ಮುಚ್ಚಿದ್ದರು. ಕೆಜಿಎಫ್‌ ಸಿನಿಮಾದಲ್ಲಿ ರಾಕಿ ಭಾಯ್‌ಗೆ ಅವರ ತಾಯಿಯೇ ಶಕ್ತಿ, ಅದೇ ರೀತಿ ನಿತೀಶ್ ರಾಣಾ ಬದುಕಿನಲ್ಲೂ ಅವರ ತಾಯಿಯೇ ಅಸಲಿ ಸಾಮ್ರಾಜ್ಯದ ಅಡಿಪಾಯವಾಗಿದ್ದರು. ತಾಯಿ ತೀರಿಕೊಂಡು ಕೇವಲ 16 ದಿನಗಳು ಕಳೆದಿವೆ. ಎದೆಯೊಳಗೆ ಬೆಂಕಿಯಂತಹ ನೋವಿದ್ದರೂ, ಮೈದಾನಕ್ಕಿಳಿದು ರನ್‌ಗಳ ಸಾಮ್ರಾಜ್ಯ ಕಟ್ಟುತ್ತಿರುವ ನಿತೀಶ್, ಈಗ ತಾಯಿಗಾಗಿ ಬರೆದಿರುವ ಪೋಸ್ಟ್ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುತ್ತಿದೆ.

ಮೈದಾನದಲ್ಲಿ ಕಣ್ಣೀರಿನ ಮಳೆ, ತಾಯಿಗೆ ಅರ್ಪಿಸಿದ ಅರ್ಧಶತಕ!

ತಾಯಿ ತೀರಿಕೊಂಡ ಎರಡೇ ವಾರಗಳಲ್ಲಿ, ಅಂದರೆ ಡಿಪಿಎಲ್ 2026 (DPL 2026) ಲೀಗ್‌ನಲ್ಲಿ ನಿತೀಶ್ ರಾಣಾ ಬ್ಯಾಟ್ ಹಿಡಿದು ಅಖಾಡಕ್ಕಿಳಿದಿದ್ದರು. ಎದೆಯಲ್ಲಿ ಹೆಪ್ಪುಗಟ್ಟಿದ್ದ ದುಃಖವನ್ನು ಬ್ಯಾಟಿಂಗ್‌ನಲ್ಲಿ ತೋರಿಸಿದ ಅವರು, ಅಬ್ಬರದ ಅರ್ಧಶತಕ ಸಿಡಿಸಿದರು. ಅರ್ಧಶತಕ ಬಾರಿಸಿದ ತಕ್ಷಣ ಬ್ಯಾಟ್ ಎತ್ತಿ ಆಕಾಶದತ್ತ ನೋಡಿ, ತಮ್ಮ ಈ ಸಾಧನೆಯನ್ನು ಸ್ವರ್ಗದಲ್ಲಿರುವ ತಾಯಿಗೆ ಅರ್ಪಿಸಿದರು. ಆ ಕ್ಷಣದಲ್ಲೇ ಅವರ ಕಂಟ್ರೋಲ್ ತಪ್ಪಿ ಮೈದಾನದಲ್ಲೇ ಮಗುವಿನಂತೆ ಕಣ್ಣೀರಿಟ್ಟರು. ಅಂಪೈರ್ ಹಾಗೂ ಸಹ ಆಟಗಾರರು ಓಡಿ ಬಂದು ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಬೇಕಾಯಿತು.

ಸಾಮ್ರಾಜ್ಯ ನನ್ನದಾಗಲಿ ಎಂದು ನೀನು ತ್ಯಾಗ ಮಾಡಿದೆ!

ಇದೀಗ, ತಾಯಿ ಅಗಲಿ 16 ದಿನಗಳ ನಂತರ ನಿತೀಶ್ ರಾಣಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಥೇಟ್ 'ಕೆಜಿಎಫ್' ಡೈಲಾಗ್‌ಗಳಂತೆ ಪ್ರತಿಯೊಬ್ಬರ ಎದೆಗೆ ನಾಟುವಂತಿದೆ. "ಅಮ್ಮ... ಈ ಪ್ರಪಂಚದಲ್ಲಿ ತ್ಯಾಗ ಮಾಡುವುದು ಹೇಗೆ ಮತ್ತು ನಿಜವಾದ ಪ್ರೀತಿ ಅಂದರೆ ಏನು ಅಂತ ನನಗೆ ಕಲಿಸಿಕೊಟ್ಟ ಏಕೈಕ ವ್ಯಕ್ತಿ ನೀನು. ನೀನು ಪಟ್ಟ ಕಷ್ಟವನ್ನು, ಬಿದ್ದ ಶ್ರಮವನ್ನು ಯಾರೂ ನೋಡಲಿಲ್ಲ, ನಿನಗೆ ಯಾರೂ ಧೈರ್ಯ ತುಂಬಲಿಲ್ಲ. ಆದರೂ ನೀನು ಪ್ರತಿಯೊಂದು ನೋವನ್ನು ನಗುತ್ತಾ ನುಂಗಿದೆ.

ನನ್ನ ಕನಸಿಗಾಗಿ ನಿನ್ನ ಬದುಕನ್ನೇ ತೇಯ್ದೆ!

ಮುಂದುವರಿದು ತಮ್ಮ ಭಾವನಾತ್ಮಕ ಪ್ರಯಾಣವನ್ನು ಬಿಚ್ಚಿಟ್ಟ ನಿತೀಶ್, ನಿನ್ನ ಮಗ ಈಗ ದೊಡ್ಡವನಾಗಿದ್ದಾನೆ ಅಮ್ಮ. ಸಾಧಿಸುವುದು ಇನ್ನೂ ತುಂಬಾ ಇದೆ. ನಾನು ದಿನವೂ ಬಂದು 'ನನಗೆ ಅದು ಬೇಕು, ಇದು ಬೇಕು' ಎಂದು ನನ್ನ ಕನಸುಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ. ಆದರೆ ನೀನು ಮಾತ್ರ 'ಮಗನೇ ಊಟ ಮಾಡಿದ್ಯಾ? ಆರೋಗ್ಯವಾಗಿದ್ದೀಯಾ?' ಎಂದು ನನ್ನ ಯೋಗಕ್ಷೇಮ ಕೇಳುತ್ತಿದ್ದೆ. ನನ್ನ ಕನಸುಗಳನ್ನು ನನಸು ಮಾಡಲು ನೀನು ನಿನಗಾಗಿ ಏನನ್ನೂ ಕೇಳಲಿಲ್ಲ, ಬದಲಿಗೆ ಪ್ರಪಂಚದ ಎಲ್ಲಾ ಸಂತೋಷವನ್ನು ತಂದು ನನ್ನ ಪಾದದ ಬಳಿ ಇಟ್ಟೆ"* ಎಂದು ಬರೆದುಕೊಂಡಿದ್ದಾರೆ.

ಈ ದಿನಕ್ಕಿಂತ ಕರಾಳ ದಿನ ಇನ್ನೊಂದಿಲ್ಲ!"

ನಿತೀಶ್ ರಾಣಾ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ ಶೈಲಿ ಪ್ರತಿಯೊಬ್ಬರ ಎದೆಯನ್ನು ಹಿಂಡುವಂತಿದೆ: 
ಇವತ್ತು ನನ್ನ ಹತ್ತಿರ ಎಲ್ಲವೂ ಇದೆ ಅಮ್ಮ. ಆದರೆ ನನ್ನ ಸಾಮ್ರಾಜ್ಯವನ್ನು ನೋಡಲು ನನ್ನ ಜೊತೆ ನೀನಿಲ್ಲವಲ್ಲ, ಇದಕ್ಕಿಂತ ಕರಾಳ ದಿನ ನನ್ನ ಜೀವನದಲ್ಲಿ ಇನ್ನೊಂದಿರಲು ಸಾಧ್ಯವಿಲ್ಲ. ಆದರೆ ನಿನಗೆ ಒಂದು ಮಾತು ಕೊಡ್ತೀನಿ ಅಮ್ಮ... ನಿನ್ನ ಮಗ ಎಲ್ಲೂ ನಿಲ್ಲುವುದಿಲ್ಲ. ನಿನಗಾಗಿ ನಾನು ಏನು ಸಾಧಿಸಬೇಕಿತ್ತೋ ಅದನ್ನು ಪಡೆದೇ ಸಾಯ್ತೀನಿ. ನಿನ್ನ ಆಶೀರ್ವಾದ ಸದಾ ನನ್ನ ಮೇಲಿದೆ ಎಂದು ಗೊತ್ತು. ನಿನ್ನ ಮಗನಾಗಿ ಹುಟ್ಟಿದ್ದಕ್ಕೆ ನಾನು ಹೆಮ್ಮೆಪಡುತ್ತೇನೆ, ಹಾಗೇ ನಿನ್ನನ್ನು ಹೆಮ್ಮೆಪಡಿಸುವ ಮಗನಾಗಿಯೇ ಬದುಕುತ್ತೇನೆ! ತಾಯಿಯ ಅಗಲಿಕೆಯ ನೋವಿನ ನಡುವೆಯೂ ಮೈದಾನದಲ್ಲಿ ರನ್‌ಗಳ ಬೇಟೆಯಾಡುತ್ತಿರುವ ಈ ಸಿಂಹದಂತಹ ಮಗನ ಹೋರಾಟಕ್ಕೆ ಇಡೀ ಕ್ರಿಕೆಟ್ ಲೋಕವೇ ಸಲಾಂ ಎನ್ನುತ್ತಿದೆ!