ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು, ಈಗಷ್ಟೇ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜೋಫ್ರಾ ಆರ್ಚರ್‌ಗೆ 2024ರ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವಂತೆ ಸೂಚಿಸಿದೆ ಎನ್ನಲಾಗುತ್ತಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಇಸಿಬಿ ಈ ರೀತಿ ಆರ್ಚರ್‌ಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.
ಬೆಂಗಳೂರು(ಮಾ.21): 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಸ್ಟೋರಿಯೊಂದು ಸಾಕಷ್ಟು ಸಂಚಲನ ಹುಟ್ಟುಹಾಕಿದೆ. ಆರ್ಚರ್ ಅವರ ಪೋಸ್ಟ್ ಗಮನಿಸಿದ ಫ್ಯಾನ್ಸ್, ಆರ್‌ಸಿಬಿ ಪರ ಆಡುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದ್ದಾರೆ.
ಹೌದು, ಕೆಲ ದಿನಗಳ ಹಿಂದಷ್ಟೇ ಜೋಫ್ರಾ ಆರ್ಚರ್ ಬೆಂಗಳೂರಿನಲ್ಲಿರುವ RCB ಕೆಫೆಗೆ ಭೇಟಿ ನೀಡಿದ್ದರು. ಹೀಗಾಗಿ ಬಲಗೈ ವೇಗಿ ಜೋಫ್ರಾ ಆರ್ಚರ್, ಆರ್‌ಸಿಬಿ ತಂಡದ ಪರ ಆಡಲು ಒಪ್ಪಂದಕ್ಕೆ ಸಹಿಹಾಕಿರುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಆರ್‌ಸಿಬಿ ಫ್ರಾಂಚೈಸಿಯಾಗಲಿ ಅಥವಾ ಜೋಫ್ರಾ ಆರ್ಚರ್ ಆಗಲಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಇನ್ನು ಕೆಲವು ವರದಿಗಳ ಪ್ರಕಾರ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು, ಈಗಷ್ಟೇ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜೋಫ್ರಾ ಆರ್ಚರ್‌ಗೆ 2024ರ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವಂತೆ ಸೂಚಿಸಿದೆ ಎನ್ನಲಾಗುತ್ತಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಇಸಿಬಿ ಈ ರೀತಿ ಆರ್ಚರ್‌ಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.
ಈ ಮೊದಲು 2022ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 8 ಕೋಟಿ ರುಪಾಯಿ ನೀಡಿ ಜೋಫ್ರಾ ಆರ್ಚರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇನ್ನು 2024ರ ಐಪಿಎಲ್ ಹರಾಜಿಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಆರ್ಚರ್ ಅವರನ್ನು ತಂಡದಿಂದ ರಿಲೀಸ್ ಮಾಡಿತ್ತು.
ಇಂಗ್ಲೆಂಡ್ ಜೋಫ್ರಾ ಆರ್ಚರ್ ಸಸೆಕ್ಸ್ ಕೌಂಟಿ ತಂಡದ ಜತೆಗೆ ಭಾರತಕ್ಕೆ ಬಂದಿದ್ದಾರೆ. ಬೆಂಗಳೂರಿನ ಸಮೀಪದ ಆಲೂರಿನಲ್ಲಿ ಕೆಎಸ್‌ಸಿಎ ತಂಡದ ಎದುರು ಎರಡು ದಿನಗಳ ಅಭ್ಯಾಸ ಪಂದ್ಯವನ್ನಾಡಲು ಬೆಂಗಳೂರಿಗೆ ಬಂದಿದ್ದಾರೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 3 ಬಾರಿ ರನ್ನರ್-ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮಾ.22ರಂದು ಉದ್ಘಾಟನಾ ಸಮಾರಂಭದಲ್ಲಿ ಸೆಣಸಾಡಲಿವೆ. ಬೆಂಗಳೂರಲ್ಲಿ ಮಾ.25ರಂದು ಮೊದಲ ಪಂದ್ಯ ನಡೆಯಲಿದ್ದು, ಆರ್‌ಸಿಬಿ-ಪಂಜಾಬ್ ಮುಖಾಮುಖಿಯಾಗಲಿವೆ.
