ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ತನ್ನ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ. ಸ್ಪೋಟಕ ಬ್ಯಾಟರ್‌ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟಿದೆ.

ಜೆಡ್ಡಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದುವರೆಗೂ ಒಂದೇ ಒಂದು ಕರ್ನಾಟಕದ ಆಟಗಾರರನ್ನು ಖರೀದಿಸದೇ ಶಾಕ್ ನೀಡಿತ್ತು. ಆದರೆ ಇದೀಗ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದ ಇಂಗ್ಲೆಂಡ್ ಮೂಲದ ಬ್ಯಾಟಿಂಗ್ ಆಲ್ರೌಂಡರ್ ವಿಲ್ ಜ್ಯಾಕ್ಸ್ ಅವರನ್ನು ಅಲ್ಪ ಮೊತ್ತಕ್ಕೆ ಕೈಬಿಟ್ಟಿದೆ. ಇದು ಆರ್‌ಸಿಬಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಯಿದೆ.

ಹೌದು, ವಿಲ್‌ ಜ್ಯಾಕ್ಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರ್‌ಟಿಎಂ ಬಳಸಿ ಖರೀದಿಸಲಿದೆ ಎಂದು ಬೆಂಗಳೂರು ಅಭಿಮಾನಿಗಳು ನಂಬಿಕೊಂಡಿದ್ದರು. ಆದರೆ ಎಂದಿನಂತೆ ಆರ್‌ಸಿಬಿ ಫ್ರಾಂಚೈಸಿ ಅಭಿಮಾನಿಗಳ ಹೃದಯ ಒಡೆಯುವಂತೆ ಮಾಡಿದೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ವಿಲ್ ಜ್ಯಾಕ್ಸ್‌ ಅವರಿಗೆ ಆರ್‌ಸಿಬಿ ಬಿಡ್‌ ಮಾಡಿತಾದರೂ ಖರೀದಿಸುವ ಒಲವು ತೋರಲಿಲ್ಲ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 5.25 ಕೋಟಿ ರುಪಾಯಿಗೆ ಬಿಡ್ ಮಾಡಿತು. ಆರ್‌ಟಿಎಂ ಕಾರ್ಡ್ ಬಳಸು ಅವಕಾಶ ಇತ್ತು. ಪರ್ಸ್‌ನಲ್ಲಿ ಹಣ ಕೂಡಾ ಹೀಗಿದ್ದೂ ಆರ್‌ಸಿಬಿ ಫ್ರಾಂಚೈಸಿಯು ವಿಲ್ ಜ್ಯಾಕ್ಸ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಮನಸ್ಸು ಮಾಡಲಿಲ್ಲ.

ಕೊನೆಗೂ ಎಬಿ ಡಿವಿಲಿಯರ್ಸ್‌ ಮಾತಿಗೆ ಬೆಲೆಕೊಟ್ಟು ಮಾರಕ ವೇಗಿ ಖರೀದಿಸಿದ ಆರ್‌ಸಿಬಿ!

ಇನ್ನು ಆರ್‌ಸಿಬಿ ಫ್ರಾಂಚೈಸಿಯು ವಿಲ್ ಜ್ಯಾಕ್ಸ್ ಅವರನ್ನು ಕೈಬಿಟ್ಟು ಟಿಮ್ ಡೇವಿಡ್ ಅವರನ್ನು 3 ಕೋಟಿ ರುಪಾಯಿಗೆ ಹಾಗೂ ವೆಸ್ಟ್ ಇಂಡೀಸ್ ಮೂಲದ ರೊಮ್ಯಾರಿಯೋ ಶೆಫರ್ಡ್‌ ಅವರನ್ನು ಮೂಲ ಬೆಲೆ 1.50 ಕೋಟಿ ರುಪಾಯಿಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಶ್ರೀಲಂಕಾ ಮೂಲದ ವೇಗಿ ನುವಾನ್ ತುಷಾರ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು 1.60 ಕೋಟಿ ರುಪಾಯಿಗೆ ಖರೀದಿಸಿದೆ.

ಆರ್‌ಸಿಬಿ ಬೌಲಿಂಗ್ ಬಲಿಷ್ಠ: ಫ್ರಾಂಚೈಸಿಯು ಹರಾಜಿಗೂ ಮುನ್ನ ಎಡಗೈ ವೇಗಿ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಈ ಬಾರಿಯ ಹರಾಜಿನಲ್ಲಿ ವೇಗಿಗಳಾದ ಜೋಶ್ ಹೇಜಲ್‌ವುಡ್‌, ರಸಿಖ್‌ ದಾರ್‌, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ ಅವರಂತಹ ಟಿ20 ಸ್ಪೆಷಲಿಸ್ಟ್ ಬೌಲರ್‌ಗಳನ್ನು ಖರೀದಿಸಿದೆ. ಇದಷ್ಟೇ ಅಲ್ಲದೇ ಕೃನಾಲ್ ಪಾಂಡ್ಯ, ಲಿಯಾಮ್‌ ಲಿವಿಂಗ್‌ಸ್ಟೋನ್ ಅವರಂತಹ ಆಲ್ರೌಂಡರ್‌ಗಳನ್ನು ಹೊಂದಿದೆ.