ಕೊನೆಗೂ ಎಬಿ ಡಿವಿಲಿಯರ್ಸ್‌ ಮಾತಿಗೆ ಬೆಲೆಕೊಟ್ಟು ಮಾರಕ ವೇಗಿ ಖರೀದಿಸಿದ ಆರ್‌ಸಿಬಿ!

ಆರ್‌ಸಿಬಿ ಫ್ರಾಂಚೈಸಿಯು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾ ಅನುಭವಿ ವೇಗಿಯನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದು, ಬೆಂಗಳೂರು ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ

IPL 2025 Auction Finally RCB buy Bhuvneshwar Kumar after Ab De Villiers Suggestions kvn

ಜೆಡ್ಡಾ: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ಸಾಕಷ್ಟು ಅಳೆದುತೂಗಿ ಅನುಭವಿ ವೇಗಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ಈ ಹಿಂದೆ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಈ 4 ಆಟಗಾರರನ್ನು ಖರೀದಿಸಬೇಕು ಎಂದು ಸಲಹೆ ನೀಡಿದ್ದರು. ಈ ಪೈಕಿ ಆರ್‌ಸಿಬಿ ಕೊನೆಗೂ ಓರ್ವ ಆಟಗಾರನನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. 

11 ಐಪಿಎಲ್‌ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್‌, ಕೆಲ ದಿನಗಳ ಹಿಂದಷ್ಟೇ ಆರ್‌ಸಿಬಿ ಫ್ರಾಂಚೈಸಿಯು ವಿಶ್ವದರ್ಜೆಯ ಲೆಗ್‌ಸ್ಪಿನ್ನರ್‌ಗಳಾದ ಯುಜುವೇಂದ್ರ ಚಹಲ್, ರವಿಚಂದ್ರನ್ ಅಶ್ವಿನ್, ಕಗಿಸೋ ರಬಾಡ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲಿ ಎಂದು ಅರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದರು. 

ಆದರೆ ಆರ್‌ಸಿಬಿ ಫ್ರಾಂಚೈಸಿಯು ಯುಜುವೇಂದ್ರ ಚಹಲ್, ಕಗಿಸೋ ರಬಾಡ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸಲು ಬಿಡ್ ಮಾಡಿತಾದರೂ ಯಶಸ್ವಿಯಾಗಲಿಲ್ಲ. ಆದರೆ ಟೀಂ ಇಂಡಿಯಾ ಅನುಭವಿ ವೇಗಿ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಆಗಿರುವ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸುವಲ್ಲಿ ಬೆಂಗಳೂರು ಫ್ರಾಂಚೈಸಿ ಯಶಸ್ವಿಯಾಗಿದೆ. 

2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಸಾಕಷ್ಟು ಪೈಪೋಟಿ ನೀಡಿತು. ಆದರೆ ಪಟ್ಟು ಬಿಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 10.75 ಕೋಟಿ ರುಪಾಯಿ ನೀಡಿ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಆರ್‌ಸಿಬಿ ಫ್ರಾಂಚೈಸಿಯು ಈ ಮೊದಲೇ ಹೇಳಿದಂತೆ ಈ ಬಾರಿಗೆ ಬೌಲಿಂಗ್ ವಿಭಾಗವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಆರ್‌ಸಿಬಿ ಫ್ರಾಂಚೈಸಿಯು ಹರಾಜಿಗೂ ಮುನ್ನ ಎಡಗೈ ವೇಗಿ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಈ ಬಾರಿಯ ಹರಾಜಿನಲ್ಲಿ ವೇಗಿಗಳಾದ ಜೋಶ್ ಹೇಜಲ್‌ವುಡ್‌, ರಸಿಖ್‌ ದಾರ್‌, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ ಅವರಂತಹ ಟಿ20 ಸ್ಪೆಷಲಿಸ್ಟ್ ಬೌಲರ್‌ಗಳನ್ನು ಖರೀದಿಸಿದೆ. ಇದಷ್ಟೇ ಅಲ್ಲದೇ ಕೃನಾಲ್ ಪಾಂಡ್ಯ, ಲಿಯಾಮ್‌ ಲಿವಿಂಗ್‌ಸ್ಟೋನ್ ಅವರಂತಹ ಆಲ್ರೌಂಡರ್‌ಗಳನ್ನು ಹೊಂದಿದೆ.

Latest Videos
Follow Us:
Download App:
  • android
  • ios