ಆರ್‌ಸಿಬಿ ಗುರಿ ಐಪಿಎಲ್ ಕಪ್ ಗೆಲ್ಲೋದಲ್ಲ, ಹಣ ಗಳಿಸೋದು: ಕನ್ನಡಿಗರ ಭಾವನೆಗಳ ಜೊತೆ ಆಡ್ತಾ ಇದ್ಯಾ ಫ್ರಾಂಚೈಸಿ?
ಆರ್‌ಸಿಬಿ ಫ್ರಾಂಚೈಸಿಯು ಮತ್ತೊಮ್ಮೆ ಐಪಿಎಲ್ ಮೆಗಾ ಹರಾಜಿನಲ್ಲಿ ಕನ್ನಡಿಗರಿಗೆ ನಿರಾಸೆ ಮೂಡಿಸಿದೆ. ಇದನ್ನು ನೋಡಿದಾಗ ಬೆಂಗಳೂರು ಫ್ರಾಂಚೈಸಿ ಗುರಿ ಕಪ್ ಗೆಲ್ಲೋದಲ್ಲ, ಹಣ ಗಳಿಸೋದು ಎನ್ನುವಂತೆ ಭಾಸವಾಗುತ್ತಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕಳೆದ 17 ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು, ಆರ್‌ಸಿಬಿ ತಂಡಕ್ಕೆ ಐಪಿಎಲ್ ಟ್ರೋಫಿ ಗಗನ ಕುಸುಮವಾಗಿಯೇ ಉಳಿದಿದೆ. ಮೂರು ಬಾರಿ ರನ್ನರ್ ಅಪ್ ಸ್ಥಾನ ಪಡೆದದ್ದೇ ಆರ್‌ಸಿಬಿ ತಂಡದ ಇಲ್ಲಿಯವರೆಗಿನ ಶ್ರೇಷ್ಠ ಪ್ರದರ್ಶನವಾಗಿದೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಅವರನ್ನು ಮಾತ್ರ ರೀಟೈನ್ ಮಾಡಿಕೊಂಡಿತ್ತು. ಆದರೆ ಟಿ20 ಸ್ಪೆಷಲಿಸ್ಟ್ ಆಟಗಾರರಾದ ವಿಲ್ ಜ್ಯಾಕ್ಸ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್ ಅವರಂತಹ ಆಟಗಾರರನ್ನು ರಿಲೀಸ್ ಮಾಡಿ ಅಚ್ಚರಿ ಮೂಡಿಸಿತ್ತು. ಆರ್‌ಸಿಬಿ ಅಭಿಮಾನಿಗಳು ಈ ನಾಲ್ವರ ಪೈಕಿ ಕನಿಷ್ಠ ಇಬ್ಬರನ್ನಾದರೂ ಆರ್‌ಟಿಎಂ ಬಳಸಿ ಬೆಂಗಳೂರು ತಂಡವು ತನ್ನಲ್ಲೆ ಉಳಿಸಿಕೊಳ್ಳಬಹುದು ಎಂದು ಕನಸು ಕಾಣುತ್ತಿದ್ದರು.
ಸ್ಟಾರ್ ಆಟಗಾರನನ್ನು ಕೈಬಿಟ್ಟು ಅಭಿಮಾನಿಗಳ ಹೃದಯ ಒಡೆದ ಆರ್‌ಸಿಬಿ; ಈ ಸಲ ಕಪ್ ನಮ್ದಲ್ವಾ?
ಆದರೆ ಆರ್‌ಸಿಬಿ ಐಪಿಎಲ್ ಹರಾಜಿನಲ್ಲಿ ಆಟಗಾರರನ್ನು ಖರೀದಿಸಿದ ರೀತಿಯನ್ನು ಗಮನಿಸಿದರೇ, ಆರ್‌ಸಿಬಿಗೆ ಬೇಕಿರುವುದು ಐಪಿಎಲ್ ಕಪ್ ಅಲ್ಲ, ಬದಲಾಗಿ ಅಭಿಮಾನಿಗಳ ಹಣ ಎನ್ನುವುದು ಮತ್ತೊಮ್ಮೆ ಭಾಸವಾಗುತ್ತಿದೆ. ಯಾಕೆಂದರೆ, ಆರ್‌ಸಿಬಿ ಗೆಲ್ಲಲಿ ಸೋಲಲಿ ಅವಿರತವಾಗಿ ಇದು ನಮ್ಮ ತಂಡ ಎಂದು ಕನ್ನಡಿಗರು ಬೆಂಗಳೂರು ತಂಡವನ್ನು ಬೆಂಬಲಿಸಿಕೊಂಡೇ ಬಂದಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ನಿಯತ್ತು(ಲಾಯಲ್ಟಿ) ಅನ್ನೇ ಬಂಡವಾಳವನ್ನಾಗಿ ಮಾಡಿಕೊಂಡಂತಿದೆ ಆರ್‌ಸಿಬಿ ಫ್ರಾಂಚೈಸಿ. ಬೆಂಗಳೂರಿನಲ್ಲಿ ನಡೆಯಲಿರುವ ತವರಿನ ಐಪಿಎಲ್ ಪಂದ್ಯಗಳಿಗೆ ಸಾವಿರದ ಲೆಕ್ಕದಲ್ಲಿ ಟಿಕೆಟ್ ಮಾರಾಟ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುತ್ತಾ ಬಂದಿದೆ. ಚೆನ್ನೈ, ಮುಂಬೈನಂತಹ ಬಲಿಷ್ಠ ತಂಡಗಳ ನಡುವಿನ ಪಂದ್ಯದ ಟಿಕೆಟ್ ಬೆಲೆ 30-40 ಸಾವಿರದವರೆಗೂ ಇರುತ್ತದೆ. ಹೀಗಿದ್ದೂ ಅಭಿಮಾನಿಗಳು ಅಷ್ಟು ದುಡ್ಡು ಕೊಟ್ಟು ಪಂದ್ಯ ನೋಡುತ್ತಾರೆ.
ಕನ್ನಡಿಗರಿಗಿಲ್ಲ ಆರ್‌ಸಿಬಿ ತಂಡದಲ್ಲಿ ಚಾನ್ಸ್: ಕಳೆದ ಕೆಲ ವರ್ಷಗಳಿಂದಲೂ ಆರ್‌ಸಿಬಿ ತಂಡವು ಕನ್ನಡಿಗರನ್ನು ಕಡೆಗಣಿಸುತ್ತಲೇ ಬಂದಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ನಮ್ಮ ರಾಜ್ಯದ ಕೆ ಎಲ್ ರಾಹುಲ್, ಕರುಣ್ ನಾಯರ್, ಅಭಿನವ್ ಮನೋಹರ್, ಮನೀಶ್ ಪಾಂಡೆ, ವೈಶಾಖ್ ವಿಜಯ್‌ಕುಮಾರ್, ದೇವದತ್ ಪಡಿಕ್ಕಲ್, ಮಯಾಂಕ್ ಅಗರ್‌ವಾಲ್, ವಿದ್ವತ್ ಕಾವೇರಪ್ಪ ಅವರಂತಹ ಆಟಗಾರರು ಈ ಬಾರಿಯ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಕನ್ನಡಿಗರನ್ನು ಖರೀದಿಸಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಆರ್‌ಸಿಬಿ ಫ್ರಾಂಚೈಸಿ ಈ ಎಲ್ಲಾ ಕನಸನ್ನು ನುಚ್ಚುನೂರು ಮಾಡಿದೆ.
ಮತ್ತೆ ಕನ್ನಡಿಗರ ಕಡೆಗಣನೆ: ನಿಯತ್ತು ಅನ್ನೋದು ಹೆಸರಿಗಷ್ಟೇ ಆರ್‌ಸಿಬಿ ಮೇಲೆ ಫ್ಯಾನ್ಸ್ ಕಿಡಿ!
ನಾಮಕಾವಸ್ತೆಗೆ ಆರ್‌ಸಿಬಿ ಫ್ರಾಂಚೈಸಿಯು ಪ್ರತಿಭಾನ್ವಿತ ಆಲ್ರೌಂಡರ್ ಮನೋಜ್ ಭಾಂಡಗೆ ಅವರನ್ನು ಈ ಹಿಂದೆಯೂ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ. ಇದೀಗ ಈ ಬಾರಿ ಕೂಡಾ ಮನೋಜ್ ಭಾಂಡಗೆ ಅವರನ್ನು ಮೂಲ ಬೆಲೆ 30 ಲಕ್ಷ ಖರೀದಿಸಿದ್ದು, ಮತ್ತೊಮ್ಮೆ ಬೆಂಚ್‌ಗೆ ಸೀಮಿತವಾಗುವ ಸಾಧ್ಯತೆ ಹೆಚ್ಚಿದೆ.
ಆರ್‌ಸಿಬಿ ಕಪ್ ಗೆದ್ರೆ ಕ್ರೇಝ್ ಕಮ್ಮಿಯಾಗುತ್ತಾ?:
ಆರ್‌ಸಿಬಿ ಕ್ರಿಕೆಟ್ ಅಭಿಮಾನಿಗಳು 'ಈ ಸಲ ಕಪ್ ನಮ್ದೇ' ಎಂದು ಹಲವು ವರ್ಷಗಳಿಂದ ಬೆಂಬಲಿಸಿಕೊಂಡೇ ಬಂದಿದ್ದಾರೆ. ಆದರೆ ಕಪ್ ಮಾತ್ರ ನಮ್ಮದಾಗಿಲ್ಲ. ಒಂದು ವೇಳೆ ಆರ್‌ಸಿಬಿ ಕಪ್ ಗೆದ್ರೆ ಅದರ ಕ್ರೇಝ್ ಕಮ್ಮಿಯಾಗುತ್ತೆ, ಈ ಕಾರಣಕ್ಕಾಗಿಯೇ ಆರ್‌ಸಿಬಿ ಕಪ್ ಗೆಲ್ಲುತ್ತಿಲ್ಲ ಎನ್ನುವ ಮಾತುಗಳು ಫ್ಯಾನ್ಸ್ ವಲಯದಲ್ಲಿ ತಮಾಷೆಗೆ ಬಳಕೆಯಾಗುತ್ತಿದೆಯಾದರೂ, ಸದ್ಯದ ಬೆಳವಣಿಗೆ ನೋಡಿದರೇ, ಅದು ನಿಜವೇನೋ ಎಂದು ಅನಿಸಲಾರಂಭಿಸಿದೆ.
ಒಟ್ಟಿನಲ್ಲಿ ಅಭಿಮಾನಿಗಳ ಅಭಿಮಾನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಆರ್‌ಸಿಬಿ ಫ್ರಾಂಚೈಸಿ, ಈ ಬಾರಿಯಾದರೂ ಐಪಿಎಲ್ ಟ್ರೋಫಿ ಗೆದ್ದು ನಂಬಿಕೆ ಉಳಿಸಿಕೊಳ್ಳುತ್ತೋ ಅಥವಾ ಎಂದಿನಂತೆ ಮತ್ತೊಮ್ಮೆ ಅಭಿಮಾನಿಗಳ ಭಾವನೆಗಳ ಜತೆ ಆಟವಾಡುತ್ತಾ ಕಾದು ನೋಡಬೇಕಿದೆ.
- ನವೀನ್ ಕೊಡಸೆ, ಏಷ್ಯಾನೆಟ್ ಸುವರ್ಣ ನ್ಯೂಸ್